ಮಂಗಳವಾರ, ಏಪ್ರಿಲ್ 7, 2020
19 °C

ಏನಾಗುತ್ತಿದೆ ಮಧ್ಯಪ್ರದೇಶದ ರಾಜಕಾರಣದಲ್ಲಿ? ಇಲ್ಲಿದೆ ಇಂದಿನ ಘಟನಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೋಪಾಲ್‌: ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್‌ ಅವರು ತಕ್ಷಣವೇ ಬಹುಮತ ಸಾಬೀತು ಮಾಡಬೇಕು ಎಂದು ಆದೇಶಿಸಲು ಕೋರಿ ಬಿಜೆಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌, ಈ ಕುರಿತು 24 ಗಂಟೆಗಳಲ್ಲಿ ಉತ್ತರ ನೀಡುವಂತೆ ಕಮಲನಾಥ್‌ ಅವರಿಗೆ ನೋಟಿಸ್‌ ಜಾರಿ ಮಾಡಿದೆ. 

ಕಾಂಗ್ರೆಸ್‌ನ 22 ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ಸರ್ಕಾರ ಅಡಕತ್ತರಿಗೆ ಸಿಲುಕಿದ್ದರೂ, ಕೊರೊನಾ ವೈರಸ್‌ ನೆಪದಲ್ಲಿ ವಿಧಾನಸಭೆ ಅಧಿವೇಶನವನ್ನು ಮಾರ್ಚ್‌ 26ಕ್ಕೆ ಮುಂದೂಡಿದ ಸ್ಪೀಕರ್‌ ಕ್ರಮ ಪ್ರಶ್ನಿಸಿ, ಮುಖ್ಯಮಂತ್ರಿ ಕಮಲನಾಥ್‌ ಅವರು ಕೂಡಲೇ ಬಹುಮತ ಸಾಬೀತು ಮಾಡಲು ಸೂಚಿಸಬೇಕು ಎಂದು ಕೋರಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಶಿವರಾಜ ಸಿಂಗ್‌ ಚೌಹಾಣ್‌ ಅವರು ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. 

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ ಚಂದ್ರೂಡ್‌ ನೇತೃತ್ವದ ಪೀಠ, ಮುಖ್ಯಮಂತ್ರಿ, ವಿಧಾನಸಭೇ ಕಾರ್ಯದರ್ಶಿ, ಸ್ಪೀಕರ್‌ಗೆ ನೋಟಿಸ್‌ ಜಾರಿಗೊಳಿಸಿದರು. ನಾಳೆ ಬೆಳಗ್ಗೆ 10.30ರ ಒಳಗಾಗಿ ಉತ್ತರಿಸಬೇಕಾಗಿ ಸೂಚಿಸಿದರು. 

ಬಿಜೆಪಿ ನಾಯಕರ ಪರವಾಗಿ ಹಿರಿಯ ವಕೀಲ ಮುಕುಲ್‌ ರೋಹ್ಟಗಿ ಹಾಜರಾಗಿದ್ದರು. ಈ ಪ್ರಕರಣ ತಾರ್ಕಿಕ ಅಂತ್ಯಗಳೊಳ್ಳಲು ಬಹುಮತ ಸಾಬೀತು ಪ್ರಕ್ರಿಯೆ ಸೂಕ್ತ ಎಂದು ಹೇಳಿದರು. 

ನಡೆಯದ ವಿಶ್ವಾಸ ಮತ ಯಾಚನೆ 

ರಾಜ್ಯಪಾಲರ ಸೂಚನೆಯಂತೆ ಇಂದು ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, ನಿರೀಕ್ಷೆಯಂತೆ  ಪ್ರಕ್ರಿಯೆ ನಡೆಯಲಿಲ್ಲ. ‘ವಿಶ್ವಾಸಮತ ಯಾಚನೆ ಕುರಿತಂತೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಅಂಥ ಮಾಹಿತಿ ಬಂದಿದ್ದೇ ಆದರೆ, ಸ್ಪೀಕರ್‌ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಅದನ್ನು ಸದನದ ಮುಂದಿಡುತ್ತಾರೆ,’ ಎಂದು ವಿಧಾನಸಭೆ ಕಾರ್ಯದರ್ಶಿ ಎಪಿ ಸಿಂಗ್‌ ತಿಳಿಸಿದ್ದಾರೆ. 

ಪ್ರತಿಪಕ್ಷಗಳಿಂದ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಎಪಿ ಸಿಂಗ್‌, ‘ಈ ಬಗ್ಗೆ ನಮಗೆ ಅಧಿಕೃತ ಮಾಹಿತಿ ಇಲ್ಲ. ಆದರೆ, ವಿರೋಧ ಪಕ್ಷದ ಕೆಲ ನಾಯಕರು ಸ್ಪೀಕರ್‌ಗೆ ದಾಖಲೆಗಳನ್ನು ನೀಡಿದ್ದಾರೆ ಎಂದು ಗೊತ್ತಾಗಿದೆ,’ ಎಂದು ಹೇಳಿದರು. 

‘ಸುಪ್ರೀಂ ಕೋರ್ಟ್‌ಗೆ ಎರಡೂ ಕಡೆಯವರೂ ಮಾಹಿತಿ ನೀಡಲಿದ್ದಾರೆ. ಸುಪ್ರೀಂ ಕೋರ್ಟ್‌ ನೀಡುವ ಆದೇಶದಂತೆ ಸರ್ಕಾರ ನಡೆಸಲಿದೆ. ಸರ್ಕಾರ ನೀಡುವ ಆದೇಶದಂತೆ ನಾವೂ ಕಾರ್ಯನಿರ್ವಹಿಸುತ್ತೇವೆ,’ ಎಂದೂ ಎಪಿ ಸಿಂಗ್‌ ಹೇಳಿದರು.  

ರಾಜ್ಯಪಾಲರ ಪತ್ರ ಸ್ಪೀಕರ್‌ಗೆ ರವಾನಿಸಿದ ಕಮಲನಾಥ್‌ 

ಮಂಗಳವಾರ ವಿಶ್ವಾಮತ ಯಾಚಿಸುವಂತೆ ರಾಜ್ಯಪಾಲರು ಮುಖ್ಯಮಂತ್ರಿ ಕಮಲನಾಥ್‌ ಅವರಿಗೆ ಬರೆದಿದ್ದ ಪತ್ರವನ್ನು ಕಮಲನಾಥ್‌ ಅವರು ಮಂಗಳವಾರ ಸ್ಪೀಕರ್‌ಗೆ ರವಾನಿಸಿದರು. ತಾವು ಪತ್ರವನ್ನು ಸ್ಪೀಕರ್‌ಗೆ ರವಾನಿಸಿರುವುದಾಗಿ ಮುಖ್ಯಮಂತ್ರಿ ಕಮಲನಾಥ್‌ ಅವರು ರಾಜ್ಯಪಾಲರಿಗೆ ಪತ್ರದ ಮೂಲಕ ತಿಳಿಸಿದರು. 

ರಾಜ್ಯಪಾಲರನ್ನು ಭೇಟಿಯಾದ ಶಿವರಾಜ್‌ ಸಿಂಗ್‌ 

ಪ್ರಸಕ್ತ ರಾಜಕೀಯ ಬೆಳವಣಿಗೆಗಳ ನಡುವೆಯೇ ಬಿಜೆಪಿ ನಾಯಕ ಶಿವರಾಜ ಸಿಂಗ್‌ ಚೌಹಾಣ್‌ ಅವರು ರಾಜ್ಯಪಾಲರನ್ನು ಭೇಟಿಯಾದರು. 

ಸರ್ಕಾರ ಉಳಿಸಿಕೊಳ್ಳಲು ‘ಒತ್ತಡ, ಆಮಿಷ’ ತಂತ್ರ: ಶಿವರಾಜ್‌ ಸಿಂಗ್‌

ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್‌ ಸರ್ಕಾರ ಬೀಳದಂತೆ ರಕ್ಷಿಸಲು ‘ಒತ್ತಡ ಮತ್ತು ಆಮಿಷ’ ಒಡ್ಡುವ ತಂತ್ರಗಳನ್ನು ಬಳಸುತ್ತಿದೆ ಎಂದು ಬಿಜೆಪಿ ಹಿರಿಯ ಮುಖಂಡ ಶಿವರಾಜ್‌ ಸಿಂಗ್‌ ಚೌಹಾಣ್‌ ಮಂಗಳವಾರ ಆರೋಪಿಸಿದ್ದಾರೆ.

ತಕ್ಷಣವೇ ವಿಶ್ವಾಸಮತ ಸಾಬೀತುಪಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ  ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಈ ಅರ್ಜಿ ಕುರಿತು ಬುಧವಾರದೊಳಗೆ ಪ್ರಕ್ರಿಯೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದ ಬೆನ್ನಲ್ಲೇ ಚೌಹಾಣ್‌ ಅವರ ಈ ಹೇಳಿಕೆ ಹೊರಬಿದ್ದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು