ಶುಕ್ರವಾರ, ಡಿಸೆಂಬರ್ 13, 2019
26 °C
ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ; ಆದೇಶ ಮರುಪರಿಶೀಲನೆಗೆ ಕೋರಿದ್ದ ಪ್ರಕರಣ

ಶಬರಿಮಲೆ: 'ಸುಪ್ರೀಂ' ತೀರ್ಪು ಇಂದು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇರಳದ ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂದು 2018ರಲ್ಲಿ ನೀಡಿದ್ದ ತೀರ್ಪು ಮರುಪರಿಶೀಲನೆಗೆ ಕೋರಿದ್ದ ಎಲ್ಲ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಗುರುವಾರ (ನ.14) ತೀರ್ಪು ಪ್ರಕಟಿಸಲಿದೆ. 

ಸುಪ್ರೀಂ ಕೋರ್ಟ್ ಪೀಠದ ಎದುರು ಈ ಸಂಬಂಧ ಒಟ್ಟು 65 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 56 ಅರ್ಜಿಗಳು ತೀರ್ಪಿನ ಮರುಪರಿಶೀಲನೆಗೆ ಮನವಿ ಮಾಡಿದ್ದವು. ನಾಲ್ಕು ಹೊಸ ಅರ್ಜಿಗಳು, 5 ವರ್ಗಾಯಿಸಿದ ಅರ್ಜಿಗಳು ಇದರಲ್ಲಿ ಸೇರಿವೆ. 

ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ಫೆಬ್ರುವರಿ 6ರಂದು ತೀರ್ಪು ಕಾಯ್ದಿರಿಸಿತ್ತು.

ನ್ಯಾಯಮೂರ್ತಿಗಳಾದ ಆರ್‌.ಎಫ್. ನಾರಿಮನ್, ಎ.ಎಂ. ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ್, ಇಂದೂ ಮಲ್ಹೋತ್ರಾ ಅವರು ಪೀಠದಲ್ಲಿದ್ದಾರೆ. 

10ರಿಂದ 50 ವರ್ಷ ವಯಸ್ಸಿನ ಹೆಣ್ಣುಮಕ್ಕಳು ದೇಗುಲ ಪ್ರವೇಶಿಸದಂತೆ ನಿರ್ಬಂಧಿಸುವುದು ಅಸಾಂವಿಧಾನಿಕ ಎಂದು ಕಳೆದ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. 4:1 ಅನುಪಾತದಲ್ಲಿ ತೀರ್ಪು ಪ್ರಕಟಿಸಿತ್ತು.

ಇದನ್ನು ಪ್ರಶ್ನಿಸಿ ದೇವಸ್ಥಾನದ ತಂತ್ರಿ, ನಾಯರ್ ಸೇವಾ ಸಮಾಜ, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಸೇರಿದಂತೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. 

ಮಂಡಳಿ ಯೂಟರ್ನ್‌!
ದೇವಸ್ಥಾನವನ್ನು ನಿರ್ವಹಿಸುತ್ತಿರುವ ಟಿಡಿಬಿ ತನ್ನ ನಿರ್ಧಾರ ಬದಲಿಸಿ, ಕೋರ್ಟ್ ತೀರ್ಪನ್ನು ಒಪ್ಪಿಕೊಂಡಿತು. ಬದಲಾದ ನಿಲುವಿಗೆ ಯಾವುದೇ ರಾಜಕೀಯ ಒತ್ತಡಗಳಿಲ್ಲ ಎಂದೂ ಮಂಡಳಿ ಸ್ಪಷ್ಟಪಡಿಸಿತು.

ರಾಜ್ಯದ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರ್ಕಾರದ ಒತ್ತಡದಿಂದ ಮಂಡಳಿ ಯೂಟರ್ನ್ ತೆಗೆದುಕೊಂಡಿದೆ ಎಂದು ಕೆಲವು ಬಲಪಂಥೀಯ ಕಾರ್ಯಕರ್ತರು ಆರೋಪಿಸಿದ್ದರು. 

ಸರ್ಕಾರದ ವಾದ
ಕೇರಳ ರಾಜ್ಯ ಸರ್ಕಾರವು ತೀರ್ಪಿನ ಪರ ನಿಲುವು ವ್ಯಕ್ತಪಡಿಸಿತ್ತು. ತೀರ್ಪು ಪುನರ್‌ಪರಿಶೀಲನೆ ಮಾಡುವಂತೆ ಕೋರಿದ್ದ ಮನವಿಗಳನ್ನು ತಿರಸ್ಕರಿಸುವಂತೆ ಪೀಠದ ಎದುರು ವಾದ ಮಂಡಿಸಿತ್ತು.

‘ಹಿಂದೂ ಧರ್ಮದಲ್ಲಿ ದೇವಸ್ಥಾನದಿಂದ ಮಹಿಳೆಯರನ್ನು ಹೊರಗಿಡುವುದು ಸರಿಯಾದ ಕ್ರಮವಲ್ಲ. ಕಾನೂನು ಸುವ್ಯವಸ್ಥೆ ಸಮಸ್ಯೆ ಬಗ್ಗೆ ಚಿಂತೆ ಬೇಡ’ ಎಂದು ಸರ್ಕಾರದ ಪರ ವಕೀಲ ಜೈದೀಪ್ ಗುಪ್ತಾ ವಾದಿಸಿದ್ದರು.

ನಾಯರ್ ಸಮಾಜದ ವಾದ
ಸಂವಿಧಾನದ 15ನೇ ವಿಧಿಯು ದೇಶದ ಜಾತ್ಯತೀತ ಸಂಸ್ಥೆಗಳಿಗೆ ಸಂಬಂಧಿಸಿದೆಯೇ ಹೊರತು, ಧಾರ್ಮಿಕ ಸಂಸ್ಥೆಗಳಿಗೆ ಅಲ್ಲ ಎಂದು ನಾಯರ್ ಸಮಾಜದ ಪರ ಹಿರಿಯ ವಕೀಲ ಕೆ. ಪರಾಶರನ್ ವಾದಿಸಿದ್ದರು.

‘ಅಯ್ಯಪ್ಪಸ್ವಾಮಿಯನ್ನು ಬ್ರಹ್ಮಚಾರಿ ಎನ್ನಲಾ ಗುತ್ತದೆ. ದೇವರ ಕುರಿತ ಈ ನಂಬಿಕೆಯಿಂದ ಕೆಲ ಆಚರಣೆಗಳು ಜಾರಿಯಲ್ಲಿದ್ದು, ಅವುಗಳನ್ನು ಕೋರ್ಟ್ ಪರಿಗಣಿಸಬೇಕು’ ಎಂದಿದ್ದರು.  

ರಫೇಲ್: ಇಂದು ತೀರ್ಪು
ನವದೆಹಲಿ (ಪಿಟಿಐ): ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ಕ್ಲೀನ್‌ಚಿಟ್ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಗಳ ತೀರ್ಪನ್ನು ಸುಪ್ರೀಂಕೋರ್ಟ್ ಗುರುವಾರ (ನ.14) ಪ್ರಕಟಿಸಲಿದೆ. 

ಮಾಜಿ ಸಚಿವರಾದ ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ವಕೀಲ ಪ್ರಶಾಂತ್ ಭೂಷಣ್ ಅವರು ಮರು ಪರಿಶೀಲನೆ ಕೋರಿ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಮೇ 10ರಂದು ತೀರ್ಪು ಕಾಯ್ದಿರಿಸಿತ್ತು.  ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್‌.ಕೆ. ಕೌಲ್, ಕೆ.ಎಂ ಜೋಸೆಫ್ ಇದ್ದಾರೆ. ಫ್ರಾನ್ಸ್‌ನ ಡಾಸೋ ಕಂಪೆನಿಯಿಂದ ₹58 ಸಾವಿರ ಕೋಟಿ ಮೊತ್ತದ 36 ರಫೇಲ್ ಯುದ್ಧವಿಮಾನಗಳ ಖರೀದಿಯಲ್ಲಿ ಅವ್ಯವಹಾರ ನಡೆ ದಿದೆ ಎಂದು ಆರೋಪಿಸಲಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು