ದುಡಿದ ಹಣವೆಲ್ಲ ಶಾಲೆಗಳ ಅಭಿವೃದ್ಧಿಗೆ ಕೊಡುಗೆ

ಶುಕ್ರವಾರ, ಮಾರ್ಚ್ 22, 2019
23 °C
ಪ್ರತಿ ವರ್ಷ ₹15 ಲಕ್ಷವರೆಗೆ ದಾನ, ಸರಳ ಜೀವನದ ಪ್ರತಿಪಾದನೆ

ದುಡಿದ ಹಣವೆಲ್ಲ ಶಾಲೆಗಳ ಅಭಿವೃದ್ಧಿಗೆ ಕೊಡುಗೆ

Published:
Updated:
Prajavani

ಶಿವಮೊಗ್ಗ: ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದು ಸೇವೆಗಾಗಿ ಎನ್ನುವುದು ಬಹುತೇಕ ಖಾಸಗಿ ಶಾಲೆಗಳ ಘೋಷವಾಕ್ಯ. ನಿಮ್ಮ ಸೇವಾ ಮನೋಭಾವವೇ ನಿಜವಾದರೆ ಅದೇ ಹಣದಲ್ಲಿ ಮೊದಲು ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎನ್ನುವುದು ತೀರ್ಥಹಳ್ಳಿ ತಾಲ್ಲೂಕು ಕುಳ್ಳುಂಡೆಯ ಕೃಷಿಕ ಕೆ.ಟಿ. ನಾಗರಾಜ್ ಅವರ ಮನವಿ.

ನಾಗರಾಜ್ ತಾವು ದುಡಿದ ಹಣದಲ್ಲಿ ಮಂಡಗದ್ದೆ ಸುತ್ತಮುತ್ತಲ ಸರ್ಕಾರಿ ಶಾಲೆ, ಅಂಗನವಾಡಿಗಳಿಗೆ ಅಗತ್ಯ ಮೂಲ
ಸೌಕರ್ಯ ಕಲ್ಪಿಸಲು, ಶಾಲಾ ಆವರಣಗಳಲ್ಲಿ ವೈವಿಧ್ಯಮಯ ಸಸ್ಯ ಸಂಪತ್ತು ಬೆಳೆಸಲು ಪ್ರತಿ ವರ್ಷ ₹ 10ರಿಂದ 15 ಲಕ್ಷ ವಿನಿಯೋಗಿಸುತ್ತಿದ್ದಾರೆ.

‘ಖಾಸಗಿ ಶಾಲೆ ಕಟ್ಟುವ ಬದಲು ಸರ್ಕಾರಿ ಶಾಲೆಗಳಿಗೆ ದೇಣಿಗೆ ನೀಡಿದರೆ ಕಟ್ಟಡಗಳು ಮತ್ತಷ್ಟು ಸುಂದರವಾಗುತ್ತವೆ. ಶೌಚಾಲಯ ಸಿಗುತ್ತವೆ. ಆ ಶಾಲೆಗಳಿಗೆ ಇತರೆ ಸವಲತ್ತು ಕಲ್ಪಿಸಿದರೆ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಬೆಳೆಯುತ್ತವೆ’ ಎಂದು ಪ್ರತಿಪಾದಿಸುತ್ತಾರೆ.

ಹಳಗ, ಮತ್ತಿಗಾರ್, ಸಿಂಗನಬಿದರೆ, ಕೋಣೆಗದ್ದೆ, ಮಂಡಗದ್ದೆ ಶಾಲೆಗಳು ಅವರ ನೆರವು ಪಡೆದು ಸುಸಜ್ಜಿತ ಶಾಲೆಗಳಾಗಿವೆ. ಪುಟ್ಟ ರಂಗಮಂದಿರ, ಶೌಚಾಲಯ, ಕಂಪ್ಯೂಟರ್, ಕುರ್ಚಿ, ಬೆಂಚುಗಳು, ಆವರಣದಲ್ಲಿ ಔಷಧೀಯ ಸಸ್ಯಗಳು, ಹಣ್ಣು ಬಿಡುವ ಮರಗಿಡಗಳು, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಶಾಲೆಗಳಲ್ಲಿ ವನಗಳನ್ನು ನಿರ್ವಹಿಸಲು ಕಾರ್ಮಿಕರನ್ನು ನೇಮಿಸಿ, ಸಂಬಳವನ್ನೂ ಇವರೇ ನೀಡುತ್ತಾರೆ. ಶಿವಮೊಗ್ಗ ಸಮೀಪ ಅಧ್ಯಾತ್ಮ ಕೇಂದ್ರಕ್ಕೆ 27 ಎಕರೆ ಜಮೀನನ್ನು ಉಚಿತವಾಗಿ ಬಿಟ್ಟುಕೊಟ್ಟಿದ್ದಾರೆ.

ಅಕ್ಕಪಕ್ಕದ ಊರಿನ ಜನರು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ದೇವಸ್ಥಾನ ಕಟ್ಟುವುದಕ್ಕೆ ವಿರೋಧ ವ್ಯಕ್ತಪಡಿಸುವ ಅವರು ಹಲವರ ವಿರೋಧವನ್ನೂ ಕಟ್ಟಿಕೊಂಡಿದ್ದಾರೆ.

‘ದೇವಸ್ಥಾನಗಳು ಜಾತಿ ವ್ಯವಸ್ಥೆಯ ಪ್ರತೀಕ. ಇದರ ಬದಲು ಶಾಲೆಗಳಿಗೆ ದಾನ ಮಾಡಿದರೆ ದೇವರು ಮೆಚ್ಚುತ್ತಾರೆ’ ಎನ್ನುತ್ತಾರೆ ನಾಗರಾಜ್.

ಈಗಲೂ ಅಜ್ಜ ಕಟ್ಟಿಸಿದ ಮನೆಯಲ್ಲೇ ವಾಸಿಸುತ್ತಿರುವ ಅವರು, ಮಾರುತಿ ಓಮ್ನಿಯಲ್ಲೇ ಊರು ಸುತ್ತುತ್ತಾರೆ. ಪತ್ನಿ ಎಚ್‌.ಸಿ. ಆರತಿ, ಎಂಜಿನಿಯರಿಂಗ್ ಪದವೀಧರರಾದ ಮೂವರು ಪುತ್ರಿಯರು ಅವರ ಆಶಯಗಳಿಗೆ ಸಾಥ್ ನೀಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 22

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !