ಕೌರವರು ಪ್ರಣಾಳಶಿಶುಗಳು ಹೇಳಿಕೆಗೆ ಖಂಡನೆ

7
ಪುರಾಣ, ವಿಜ್ಞಾನ ಬೆರೆಸುವುದು ತಪ್ಪು: ವಿಜ್ಞಾನ ಸಂಸ್ಥೆ

ಕೌರವರು ಪ್ರಣಾಳಶಿಶುಗಳು ಹೇಳಿಕೆಗೆ ಖಂಡನೆ

Published:
Updated:
Prajavani

ಜಲಂಧರ್: ‘ಕೌರವರು ಪ್ರಣಾಳಶಿಶುಗಳು’ ಎಂದು ಆಂಧ್ರ ಪ್ರದೇಶ ವಿಶ್ವವಿದ್ಯಾಲಯದ ಕುಲಸಚಿವ ಜಿ. ನಾಗೇಶ್ವರ ರಾವ್ ಭಾರತೀಯ ವಿಜ್ಞಾನ ಸಮಾವೇಶದಲ್ಲಿ (ಐಎಸ್‌ಸಿ) ನೀಡಿದ್ದ ಹೇಳಿಕೆಯನ್ನು ‘ದಿ ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿ’ ಎನ್ನುವ ವಿಜ್ಞಾನ ಸಂಸ್ಥೆ ಖಂಡಿಸಿದೆ. 

‘ಪುರಾಣ ಮತ್ತು ವಿಜ್ಞಾನವನ್ನು ಬೆರೆಸುವುದು ತಪ್ಪು. ಪ್ರಾಚೀನ ಭಾರತದ ಕುರಿತು ಯುವಜನರಿಗೆ ಇಂತಹ ಸಂದೇಶ ನೀಡುವುದರಿಂದ ಗಣ್ಯ ವ್ಯಕ್ತಿಗಳು ನೀಡಿದ ನಿಜವಾದ ಕೊಡುಗೆಯನ್ನು ಕಡೆಗಣಿಸಿದಂತಾಗುತ್ತದೆ. ಪುರಾಣಗಳು ಕಾವ್ಯಮಯವಾದವು. ನೀತಿಗಳನ್ನು ಒಳಗೊಂಡ ಇವು ಅದ್ಭುತ ಕಲ್ಪನೆಗಳಿಂದ ಕೂಡಿರುತ್ತವೆ. ಆದರೆ ವೈಜ್ಞಾನಿಕವಾಗಿ ಆಧಾರಸಹಿತ ಸಿದ್ಧಾಂತಗಳಿಂದ ರಚನೆಯಾಗಿರುವುದಿಲ್ಲ’ ಎಂದು ಸಂಸ್ಥೆ ಹೇಳಿದೆ. 

‘ಐಎಸ್‌ಸಿಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಬಹುತೇಕ ಶಿಕ್ಷಕರು ಮತ್ತು ಯುವಜನರು ಸಭಿಕರಾಗಿದ್ದರು. ಸುಲಭವಾಗಿ ಪ್ರಭಾವಕ್ಕೊಳಗಾಗುವ ಯುವಜನರ ಎದುರು ಈ ರೀತಿ ಹೇಳಿಕೆ ನೀಡಿರುವುದು ಖೇದಕರ’ ಎಂದು ಸಂಸ್ಥೆ ತಿಳಿಸಿದೆ.

‘ಸೂಕ್ತ ವೈಜ್ಞಾನಿಕ ಸಿದ್ಧಾಂತದ ಆಧಾರವಿಲ್ಲದೆ ಯಾವುದೇ ತಾಂತ್ರಿಕ ಸಂಶೋಧನೆಗಳು ಸಾಧ್ಯವಿಲ್ಲ. ಕಾಂಡಕೋಶ ಸಂಶೋಧನೆ, ಸಾಪೇಕ್ಷ ಸಿದ್ಧಾಂತ, ಖಂಡಾಂತರ ಕ್ಷಿಪಣಿ ಸೇರಿದಂತೆ ಹಲವು ಸಿದ್ಧಾಂತಗಳು ವಿವಿಧ ಪ್ರಕ್ರಿಯೆಗಳ ನಂತರ ರೂಪುಗೊಂಡಿವೆ’ ಎಂದು ಹೇಳಲಾಗಿದೆ. 

‘ಕೌರವರು ಕಾಂಡಕೋಶ ಮತ್ತು ಪ್ರಣಾಳ ಶಿಶು ತಂತ್ರಜ್ಞಾನದಿಂದ ಜನಿಸಿದವರು. ಅಲ್ಲದೆ ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಕ್ಷಿಪಣಿ ತಂತ್ರ‌ಜ್ಞಾನ ರೂಪುಗೊಂಡಿತ್ತು’ ಎಂದು ನಾಗೇಶ್ವರ ರಾವ್ ಶುಕ್ರವಾರ ಹೇಳಿದ್ದರು.

‘ಇದು ಮೊದಲಲ್ಲ’

‘ಐಎಸ್‌ಸಿಯಲ್ಲಿ ಇಂತಹ ಖಂಡನೀಯ ತಪ್ಪುಗಳಾಗಿರುವುದು ಇದೇ ಮೊದಲಲ್ಲ. ಪ್ರಾಚೀನ ಭಾರತದಲ್ಲಿ ವಿಮಾನಗಳಿದ್ದವು ಎಂದು ಈ ಹಿಂದೆ 2015ರಲ್ಲಿ ಐಎಸ್‌ಸಿ ಕಾರ್ಯಕ್ರಮವೊಂದರಲ್ಲಿ ಉಲ್ಲೇಖಿಸಲಾಗಿತ್ತು’ ಎಂದು ವಿಜ್ಞಾನ ಸಂಸ್ಥೆ ಹೇಳಿದೆ. 

‘ಹಿಂದಿನ ತಪ್ಪುಗಳಿಂದ ಐಎಸ್‌ಸಿ ಪಾಠ ಕಲಿತಂತಿಲ್ಲ. ಆದ್ದರಿಂದ ವಿಜ್ಞಾನ ಸಮುದಾಯ ಗಟ್ಟಿ ದನಿಯಲ್ಲಿ ತಮ್ಮ ನಿಲುವು ದಾಖಲಿಸುವ ಸಮಯ ಬಂದಿದೆ’ ಎಂದು ಹೇಳಿಕೆ ಅಭಿಪ್ರಾಯಪಟ್ಟಿದೆ. 

 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !