ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣು ವಿಕಿರಣ ನಿರೋಧಕ ವಾಹನ ಸಿದ್ಧ

ಡಿಆರ್‌ಡಿಒ ಅಭಿವೃದ್ಧಿಪಡಿಸಿದ ವಿನೂತನ ವ್ಯವಸ್ಥೆ
Last Updated 8 ಜನವರಿ 2019, 19:36 IST
ಅಕ್ಷರ ಗಾತ್ರ

ಜಲಂಧರ್‌: ಭಯೋತ್ಪಾದಕರು ಅಥವಾ ಶತ್ರು ದೇಶಗಳು ಅಣು ವಿಕಿರಣದಿಂದ ಕೂಡಿದ ಸಾಮೂಹಿಕ ನಾಶದ ಅಸ್ತ್ರಗಳನ್ನು ಬಳಸಿದರೆ, ತಕ್ಷಣವೇ ಅಲ್ಲಿಗೆ ಧಾವಿಸಿ ರಕ್ಷಣೆ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುವ ಸಂಚಾರಿ ವ್ಯವಸ್ಥೆಯೊಂದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ.

ಇಲ್ಲಿನ ಲವ್ಲಿ ಪ್ರೊಫೆಷನಲ್‌ ಯುನಿವರ್ಸಿಟಿ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ 106 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ರಕ್ಷಣಾ ವಸ್ತು ಪ್ರದರ್ಶನದಲ್ಲಿ ವಾಹನವನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಈ ಸಂಚಾರಿ ವಾಹನದೊಳಗಿದ್ದು ಕಾರ್ಯ ನಿರ್ವಹಿಸುವ ವ್ಯಕ್ತಿಗಳ ದೇಹ ವಿಕಿರಣದಿಂದ ಬಾಧಿತವಾಗದಿರುವ(whole body rediation counter)ಸುರಕ್ಷತಾ ವ್ಯವಸ್ಥೆ, ವಿಕಿರಣಕ್ಕೆ ಒಳಗಾದ ವಸ್ತುವಿನ ತ್ಯಾಜ್ಯದ ಸಂಗ್ರಹಣೆಗೆ ಸ್ಥಳಾವಕಾಶ ಮತ್ತು ವಿಕಿರಣದ ಬಾಧಿತ ಸ್ಥಳವನ್ನು ಪ್ರಾಥಮಿಕ ಹಂತದಲ್ಲಿ ವಿಕಿರಣ ಮುಕ್ತಗೊಳಿಸುವ ಸೌಲಭ್ಯಗಳನ್ನು ಈ ವಾಹನ ಒಳಗೊಂಡಿರುತ್ತದೆ.

whole body radiation counter ವ್ಯವಸ್ಥೆ ಅತ್ಯಂತ ದುಬಾರಿಯ ಸಾಧನ. ಅಧಿಕ ಸಾಂದ್ರತೆಯ ವಿಕಿರಣ ಪ್ರವೇಶಿಸುವುದನ್ನು ತಡೆಗೋಡೆಯಂತೆ ಕಾರ್ಯನಿರ್ವಹಿಸುತ್ತದೆ. ವಿಕಿರಣ ಯಾವ ಪ್ರಮಾಣದಲ್ಲಿ ಹಬ್ಬಿದೆ ಮತ್ತು ಯಾವ ವಸ್ತುಗಳು ವಿಕಿರಣದಿಂದ ಬಾಧಿತವಾಗಿವೆ ಎಂಬುದನ್ನು ತ್ವರಿತಗತಿಯಲ್ಲಿ ಅಂದರೆ 15 ನಿಮಿಷಗಳಲ್ಲಿ ನಿರ್ಧರಿಸಲು ಸಾಧ್ಯವಿದೆ.

ಪೆಲ್ಲೆಟ್‌ ಬದಲಿಗೆ ಪ್ಲಾಸ್ಟಿಕ್‌ ಬುಲೆಟ್‌: ಕಾಶ್ಮೀರದಲ್ಲಿ ಸೇನೆ ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಹಿಂಸಾಚಾರ ನಡೆಸುವ ಗಲಭೆಕೋರರ ಮೇಲೆ ಪೆಲ್ಲೆಟ್‌ಗಳನ್ನು ಸಿಡಿಸಿ ಗುಂಪನ್ನು ಚದುರಿಸುವ ಬಗ್ಗೆ ಸಾಕಷ್ಟು ಪರ–ವಿರೋಧಗಳು ಕೇಳಿ ಬರುತ್ತಿರುವ ಮಧ್ಯೆ, ಪೆಲ್ಲೆಟ್‌ ಬದಲಿಗೆ ಹೆಚ್ಚು ಹಾನಿ ಉಂಟು ಮಾಡದ ಪ್ಲಾಸ್ಟಿಕ್‌ ಗುಂಡುಗಳನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿದೆ.

ನೈಲಾನ್‌ನಿಂದ ಮಾಡಿದ ಈ ಬುಲೆಟ್‌ ಹೆಚ್ಚು ಹಾನಿಕಾರಕವಲ್ಲ. ಡಿಆರ್‌ಡಿಒ ಅಧಿಕಾರಿಗಳ ಪ್ರಕಾರ, ಪೆಲ್ಲೆಟ್‌ಗಿಂತ 500
ಪಟ್ಟು ಕಡಿಮೆ ಅಂದರೆ, ನಾಮಕಾವಸ್ತೆಗೆ ಗಾಯವಾಗುತ್ತದೆ. ಪೆಲ್ಲೆಟ್‌ ಬಳಕೆ ಬಗ್ಗೆ ವಿರೋಧಗಳು ಕೇಳಿಬಂದ ಹಿನ್ನೆಲೆಯಲ್ಲಿ ಪರ್ಯಾಯವನ್ನು ಕಂಡು ಹಿಡಿಯುವಂತೆ ಕೇಂದ್ರ ಗೃಹ ಇಲಾಖೆ ಕೋರಿಕೆ ಸಲ್ಲಿಸಿದ್ದರಿಂದ ದೇಶೀಯವಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಪ್ಲಾಸ್ಟಿಕ್‌ ಬುಲೆಟ್‌ಗಳನ್ನು ಎಕೆ–47 ರೈಫಲ್‌ನಿಂದ ಸಿಡಿಸಬಹುದಾಗಿದೆ. ಇದು ಆಮದು ಮಾಡಿಕೊಂಡ ರಬ್ಬರ್‌ ಬುಲೆಟ್‌ಗಳಿಗಿಂತ ಕಡಿಮೆ ಅಪಾಯಕಾರಿ ಎಂದು ಪ್ರದರ್ಶನದಲ್ಲಿದ್ದ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT