ಬಡ್ತಿ–ಹಿಂಬಡ್ತಿ: ‘ಸುಪ್ರೀಂ’ ಮುಂದೆ ಸಾವಿರ ನಿರೀಕ್ಷೆ

7

ಬಡ್ತಿ–ಹಿಂಬಡ್ತಿ: ‘ಸುಪ್ರೀಂ’ ಮುಂದೆ ಸಾವಿರ ನಿರೀಕ್ಷೆ

Published:
Updated:

 

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉದ್ಯೋಗಿಗಳಿಗೆ ಬಡ್ತಿ ನೀಡಿಕೆಗೆ ಸಂಬಂಧಿಸಿ ಬೆಂಗಳೂರಿನ ನಾಗರಾಜ್‌ ಅವರು ಸಲ್ಲಿಸಿದ್ದ ಅರ್ಜಿಯ ಆಧಾರದಲ್ಲಿ 12 ವರ್ಷ ಹಿಂದೆ ನೀಡಿದ್ದ ತೀರ್ಪನ್ನು ಮರುಪರಿಶೀಲಿಸಬೇಕಾದ ಅಗತ್ಯ ಇದೆಯೇ ಎಂಬುದನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಪರಿಶೀಲನೆ ನಡೆಸಲಿದೆ.

ಮೀಸಲಾತಿಗೆ ಸಂಬಂಧಿಸಿ ಕರ್ನಾಟಕ ರಾಜ್ಯ 2002ರಲ್ಲಿ ರೂಪಿಸಿದ್ದ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ 2017ರಲ್ಲಿ ರದ್ದು ಮಾಡಿತ್ತು. ನಾಗರಾಜ್‌ ಪ್ರಕರಣದ ತೀರ್ಪಿಗೆ ಅನುಸಾರವಾಗಿಯೇ ಮೀಸಲಾತಿ ನೀಡಬೇಕು. ಹಾಗಾಗಿ ಬಡ್ತಿ ಮತ್ತು ಹಿಂಬಡ್ತಿಯ ತತ್ಪರಿಣಾಮ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ದಲಿತ ಸಮುದಾಯದ ಉದ್ಯೋಗಿಗಳ ಹಿತರಕ್ಷಣೆಗೆ ಕರ್ನಾಟಕ ಸರ್ಕಾರವು ಮತ್ತೊಂದು ಕಾನೂನು ರೂಪಿಸಿದೆ. 

ಸುಪ್ರೀಂ ಕೋರ್ಟ್‌ ತೀರ್ಪುಗಳಿಂದಾಗಿ ಕರ್ನಾಟಕದಲ್ಲಿನ ಬಡ್ತಿ ಪ್ರಕ್ರಿಯೆ ತ್ರಿಶಂಕು ಸ್ಥಿತಿಯಲ್ಲಿದೆ. ಹಾಗಾಗಿ ಸುಪ‍್ರೀಂ ಕೋರ್ಟ್‌ನ ಈ ಪ್ರಕ್ರಿಯೆಯನ್ನು ಕರ್ನಾಟಕದಲ್ಲಿ ಭಾರಿ ಕುತೂಹಲದಿಂದ ನೋಡಲಾಗುತ್ತಿದೆ. 

ನಾಗರಾಜ್‌ ಪ್ರಕರಣದ ತೀರ್ಪನ್ನು ಸಂವಿಧಾನ ಪೀಠವು ಪರಿಶೀಲನೆಗೆ ಒಳಪಡಿಸಬೇಕು ಎಂದು ಕಳೆದ ನವೆಂಬರ್‌ 15ರಂದು ತ್ರಿಸದಸ್ಯ ಪೀಠವು ಹೇಳಿತ್ತು. ತ್ರಿಪುರಾ ಮತ್ತು ಮಹಾರಾಷ್ಟ್ರಗಳಲ್ಲಿ ಮೀಸಲಾತಿಗೆ ಸಂಬಂಧಿಸಿದ ವಿವಾದದ ವಿಚಾರಣೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿತ್ತು. 

ಸುಪ್ರೀಂ ಕೋರ್ಟ್‌ ನೀಡಿದ ತೀರ್ಪುಗಳಿಂದಾಗಿ ಎಸ್‌ಸಿ/ಎಸ್‌ಟಿ ಉದ್ಯೋಗಿಗಳ ಬಡ್ತಿ ನನೆಗುದಿಗೆ ಬಿದ್ದಿದೆ ಎಂದು ಕೇಂದ್ರ ಸರ್ಕಾರವೂ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿತ್ತು. ಇದಕ್ಕೆ ಜೂನ್‌ 5ರಂದು ಪ್ರತಿಕ್ರಿಯೆ ನೀಡಿದ್ದ ಸುಪ್ರೀಂ ಕೋರ್ಟ್‌, ‘ಕಾನೂನುಪ್ರಕಾರ ಬಡ್ತಿ ನೀಡುವುದಕ್ಕೆ ಯಾವುದೇ ಅಡ್ಡಿ ಇಲ್ಲ’ ಎಂದಿತ್ತು. 

 

 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !