ಹುದ್ದೆ ಆಧರಿಸಿ ಬಡ್ತಿ ಮೀಸಲು

7
‘ಸುಪ್ರೀಂ’ಗೆ ಕರ್ನಾಟಕ ಸರ್ಕಾರದ ಹೊಸ ಪ್ರಮಾಣಪತ್ರ

ಹುದ್ದೆ ಆಧರಿಸಿ ಬಡ್ತಿ ಮೀಸಲು

Published:
Updated:

ನವದೆಹಲಿ: 2017ರಲ್ಲಿ ಬಡ್ತಿ ಮೀಸಲಾತಿಗೆ ಸಂಬಂಧಿಸಿ ಅಂಗೀಕರಿಸಲಾದ ಕಾನೂನಿನಿಂದಾಗಿ ಈತನಕ ನೀಡಿದ್ದ ಬಡ್ತಿ ಮೀಸಲಾತಿಗೆ ಯಾವುದೇ ಧಕ್ಕೆ ಆಗದು. ಇಷ್ಟರವರೆಗೆ, ‘ಖಾಲಿ ಹುದ್ದೆ’ಗಳ ಆಧಾರದಲ್ಲಿ ಬಡ್ತಿ ನೀಡಲಾಗುತ್ತಿತ್ತು. ಇನ್ನು ಮುಂದೆ ‘ಹುದ್ದೆ ಆಧಾರ’ ದಲ್ಲಿ ಮೀಸಲು ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಕರ್ನಾಟಕ ಸರ್ಕಾರ ಹೇಳಿದೆ.

ಬಡ್ತಿ ಮೀಸಲಾತಿ ನೀಡುವಾಗ ಪ್ರತಿ ಪ್ರಕರಣದಲ್ಲಿಯೂ ಹಿಂದುಳಿದಿರುವಿಕೆ, ಪ್ರಾತಿನಿಧ್ಯದ ಕೊರತೆ ಮತ್ತು ಇತರ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಬಳಿಕ, ಕಾರ್ಯಕಾರಿ ಆದೇಶ ಹೊರಡಿಸಲಾಗುವುದು ಎಂದೂ ತಿಳಿಸಲಾಗಿದೆ. 

‘ಮೀಸಲು ಆಧಾರದಲ್ಲಿ ಬಡ್ತಿ ಪಡೆದ ಅಧಿಕಾರಿಗಳಿಗೆ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಣೆ ಕಾಯ್ದೆ 2017’ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಮಾಣಪತ್ರದಲ್ಲಿ ಬಲವಾಗಿ ಸಮರ್ಥಿಸಿಕೊಳ್ಳಲಾಗಿದೆ.

ಬಿ.ಕೆ. ಪವಿತ್ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಸೂಚಿಸಿದ ಅಂಶಗಳ ಆಧಾರದಲ್ಲಿ ವ್ಯವಸ್ಥೆಯಲ್ಲಿ ಇದ್ದ ಅಸಮರ್ಪಕತೆ ಮತ್ತು ಲೋಪಗಳನ್ನು ಹೊಸ ಕಾಯ್ದೆಯು ಸರಿಪಡಿಸಿದೆ. ಹಾಗಾಗಿ, ಸುಪ್ರೀಂ ಕೋರ್ಟ್‌ ಈ ಹಿಂದೆ ನೀಡಿದ್ದ (2017ರ ಫೆಬ್ರುವರಿ 9) ತೀರ್ಪು ಅಪ್ರಸ್ತುತ ಮತ್ತು ಅನುಷ್ಠಾನಯೋಗ್ಯವಲ್ಲ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ. 

ಶಿವಕುಮಾರ್‌ ಕೆ.ವಿ., ಬಿ.ಕೆ. ಪವಿತ್ರ ಮತ್ತು ಇತರರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ರಾಜ್ಯ ಸರ್ಕಾರವು ಈ ಪ್ರಮಾಣಪತ್ರ ಸಲ್ಲಿಸಿದೆ. ರಾಜ್ಯ ಸರ್ಕಾರವು ಜಾರಿಗೆ ತಂದ ಕಾನೂನು ಸಂವಿಧಾನದ ಉಲ್ಲಂಘನೆಯಾಗಿದೆ ಮತ್ತು ಕಳೆದ ಫೆಬ್ರುವರಿ 9ರಂದು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. 

‘ಮೀಸಲು ಆಧಾರದಲ್ಲಿ ಬಡ್ತಿ ಪಡೆದ ಅಧಿಕಾರಿಗಳಿಗೆ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಣೆ ಕಾಯ್ದೆ 2017’ಕ್ಕೆ ಸಂಬಂಧಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕರ್ನಾಟಕ ಸರ್ಕಾರದ ಅಡ್ವೊಕೇಟ್‌ ಜನರಲ್‌ ಉದಯ ಹೊಳ್ಳ ಅವರಿಗೆ ಸುಪ್ರೀಂ ಕೋರ್ಟ್‌ ಹಿಂದೆ ಮೌಖಿಕವಾಗಿ ಸೂಚಿಸಿತ್ತು. 

ಸುಪ್ರೀಂ ಕೋರ್ಟ್‌ ಫೆ. 9ರಂದು ನೀಡಿದ್ದ ತೀರ್ಪು ಪರಿಶಿಷ್ಟ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲು ನೀಡುವುದನ್ನು   ರದ್ದುಪಡಿಸಿದೆ. ಆದರೆ, ಈ ತೀರ್ಪನ್ನು ಅಪ್ರಸ್ತುತಗೊಳಿಸುವುದಕ್ಕಾಗಿಯೇ ಕರ್ನಾಟಕ ಸರ್ಕಾರವು ಹೊಸ ಕಾಯ್ದೆ ರೂಪಿಸಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. 

ಆದರೆ, ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಜೂನ್‌ 23ರಂದು ರಾಜ್ಯಪತ್ರವನ್ನೂ ಪ್ರಕಟಿಸಲಾಗಿದೆ. ಹಾಗಾಗಿ ಕಾಯ್ದೆ ಅಸಿಂಧು ಎಂದು ಹೇಳಲಾಗದು ಎಂದು ರಾಜ್ಯ ಸರ್ಕಾರ ವಾದಿಸಿದೆ. 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !