ಮೇಘಾಲಯ ಅಕ್ರಮ ಗಣಿ ದುರಂತ: 15 ಕಾರ್ಮಿಕರ ಪೈಕಿ ಒಬ್ಬರ ಅಸ್ಥಿಪಂಜರ ಪತ್ತೆ

7

ಮೇಘಾಲಯ ಅಕ್ರಮ ಗಣಿ ದುರಂತ: 15 ಕಾರ್ಮಿಕರ ಪೈಕಿ ಒಬ್ಬರ ಅಸ್ಥಿಪಂಜರ ಪತ್ತೆ

Published:
Updated:

ಭುವನೇಶ್ವರ: ಮೇಘಾಲಯದ ಪೂರ್ವ ಜೈಂಟಿಯಾ ಜಿಲ್ಲೆಯ ಲುಂಥಾರಿ ಕಲ್ಲಿದ್ದಲಿನ ಅಕ್ರಮ ಗಣಿಯಲ್ಲಿ ಸಿಲುಕಿದ್ದ 15 ಮಂದಿಯ ಶೋಧ ನಡೆಸುತ್ತಿದ್ದ ನೌಕಪಡೆಯ ಮುಳುಗುತಜ್ಞರಿಗೆ ಕೆಲವು ಅಸ್ಥಿಪಂಜರಗಳು ದೊರೆತಿವೆ.

ಈ ಗಣಿ ದುರಂತ ಸಂಭವಿಸಿ 35 ದಿನಗಳ ನಂತರ ಒಬ್ಬರ ಮೃತದೇಹದ ಕುರುಹು ದೊರೆತಿದೆ. ‘ಗಣಿಯಲ್ಲಿರುವ ಅಧಿಕ ಗಂಧಕದ ಅಂಶದಿಂದ ದೇಹ ಶೀಘ್ರ ಕೊಳೆತು ಹೋಗಿದೆ. ಹಾಗಾಗಿ ವಿಧಿವಿಜ್ಞಾನ ತಜ್ಞರನ್ನು ಕರೆಸಿ  ಡಿಎನ್‌ಎ ಪರೀಕ್ಷೆ ಮಾಡಿಸಿ ವ್ಯಕ್ತಿಯ ಗುರುತು ಪತ್ತೆ ಹಚ್ಚಬೇಕಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಶೋಧ ಕಾರ್ಯಾಚರಣೆಯಲ್ಲಿ ಬಳಸಿಕೊಂಡಿರುವ ಸ್ವಯಂ ಚಾಲಿತ ವಾಹನಗಳು ಗುರುವಾರ ಬೆಳಿಗ್ಗೆ ಮೃತದೇಹವನ್ನು ಪತ್ತೆಹಚ್ಚಿವೆ’ ಎಂದು ಪೂರ್ವ ಜೈಂಟಿಯಾ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಎಸ್‌. ಸಿಮ್ಲಿಹ ತಿಳಿಸಿದರು.

ಕ್ಯಾಮೆರಾದಲ್ಲಿ ದೇಹಕಂಡಿದ್ದನ್ನು ದೃಢಪಡಿಸಿಕೊಂಡ ನಂತರ ನೌಕಾಪಡೆ ಈ ಬಗ್ಗೆ ಟ್ವೀಟ್‌ ಮಾಡಿದೆ. ‘160 ಅಡಿ ಆಳದಲ್ಲಿ ಸಿಕ್ಕಿದ್ದ ದೇಹವನ್ನು ಇಲಿ ಬಿಲದಂತಹ ಗಣಿಯಿಂದ ಹೊರಗೆ ತೆಗೆಯಲಾಗಿದೆ’ ಎಂದು ಹೇಳಿದೆ.

ಅವೈಜ್ಞಾನಿಕ ವಿಧಾನಗಳು ಮತ್ತು ಅಸುರಕ್ಷಿತ ಕ್ರಮಗಳಿಂದ ಗಣಿಗಾರಿಕೆ ನಡೆಯುತ್ತಿದ್ದ ಕಾರಣ, 2014ರಲ್ಲಿಯೇ ಎನ್‌ಜಿಟಿ ಗಣಿಗಾರಿಕೆಯನ್ನು ನಿಷೇದಿಸಿತ್ತು. ಆದರೆ ಅಕ್ರಮವಾಗಿ ಇದು ಮುಂದುವರಿದಿತ್ತು.

ಅಕ್ರಮ ಗಣಿಯ ಬಗ್ಗೆ ಯಾವುದೇ ಕ್ರಮಕೈಗೊಳ್ಳದ ರಾಜ್ಯ ಸರ್ಕಾರ ವಿರುದ್ಧ ಕಳೆದ ವಾರವಷ್ಟೇ ಸುಪ್ರೀಂಕೋರ್ಟ್‌ ಚಾಟಿ ಬೀಸಿತ್ತು. ಜೊತೆಗೆ ಸೈನ್ಯದ ನೆರವನ್ನು ಪಡೆದು ರಕ್ಷಣಾ ಕಾರ್ಯಕ್ಕೆ ಚುರುಕು ನೀಡಬೇಕು ಹಾಗೂ ಕಾರ್ಮಿಕ ರಕ್ಷಣೆಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಎ.ಕೆ.ಸಿಕ್ರಿ ನೇತೃತ್ವದ ಪೀಠ ಸೂಚಿಸಿತು.

ಡಿಸೆಂಬರ್‌ 13ರಂದು ಅಕ್ರಮ ಗಣಿಗಾರಿಕೆ ನಡೆಸಲು ಭೂಮಿಯ ಆಳಕ್ಕೆ ಇಳಿದಿದ್ದ 15 ಕಾರ್ಮಿಕರು ನದಿ ಸಮೀಪದಲ್ಲೆ ಭೂಮಿ ಅಗೆದಾಗ ನದಿಯ ನೀರು ಇವರಿದ್ದ ಜಾಗವನ್ನು ಆವರಿಸಿಕೊಂಡಿದೆ. 20 ಮಂದಿ ಕಾರ್ಮಿಕರಲ್ಲಿ ಐವರು ಮಾತ್ರ ಗಣಿಯಿಂದ ಹೊರಗೆ ಬರಲು ಸಾಧ್ಯವಾಗಿದೆ. ಸ್ಥಳೀಯ ಕಾರ್ಮಿಕರು, ಎನ್‌ಡಿಆರ್‌ಎಫ್‌, ನೌಕಾಪಡೆ, 21 ಅಗ್ನಿಶಾಮಕ ಸಿಬ್ಬಂದಿ, ರಕ್ಷಣಾ ತಂಡ, 100 ಎಚ್‌ಪಿ ಸಾಮರ್ಥ್ಯದ ಪಂಪ್‌ಗಳು ಹಾಗೂ ರಕ್ಷಣಾ ಸಾಮಗ್ರಿಗಳೊಂದಿಗೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 2

  Sad
 • 1

  Frustrated
 • 2

  Angry

Comments:

0 comments

Write the first review for this !