ಬುಧವಾರ, ಡಿಸೆಂಬರ್ 11, 2019
24 °C

ಪ್ರಿಯಾಂಕಾ ಗಾಂಧಿ ಭದ್ರತೆಯಲ್ಲಿ ವೈಫಲ್ಯ: ತಡವಾಗಿ ಬಹಿರಂಗ!

ಏಜನ್ಸಿಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಿಯಾಂಕಾ ಗಾಂಧಿ ಅವರು ವಾಸವಿರುವ ನವದೆಹಲಿಯ ಲೋಧಿ ಎಸ್ಟೇಟ್‌ನಲ್ಲಿ ಇತ್ತೀಚೆಗೆ ಭದ್ರತಾ ವೈಫಲ್ಯ ಸಂಭವಿಸಿದೆ. ಐವರಿದ್ದ ಕಾರೊಂದು ಯಾವುದೇ ಪೂರ್ವಾನುಮತಿ ಇಲ್ಲದೆ, ಅಡೆತಡೆಗಳಿಲ್ಲದೆ, ಪರಿಶೀಲನೆ ಇಲ್ಲದೇ ನಿವಾಸದ ಪ್ರಾಂಗಣ ಪ್ರವೇಶಿಸಿದ್ದು, ಭದ್ರತೆ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದೆ.

ನವೆಂಬರ್‌ 25ರಂದು ಈ ಘಟನೆ ನಡೆದಿದೆ ಎಂದು ಪ್ರಿಯಾಂಕಾ ಗಾಂಧಿ ಅವರ ಕಚೇರಿಯ ಮೂಲಗಳ ಮಾಹಿತಿ ಉಲ್ಲೇಖಿಸಿ ರಾಷ್ಟ್ರೀಯ ಸುದ್ದಿ ಮಾಧ್ಯಮ ಎನ್‌ಡಿಟಿವಿ ಸೋಮವಾರ ವರದಿ ಮಾಡಿದೆ.

ಐದು ಮಂದಿ ಇದ್ದ ಕಾರೊಂದು ಭದ್ರತಾ ಸಿಬ್ಬಂದಿಯ ಪರಿಶೀಲನೆ, ಪೂರ್ವಾನುಮತಿ ಇಲ್ಲದೇ ಪ್ರಿಯಾಂಕಾ ಗಾಂಧಿ ಅವರ ನಿವಾಸದ ಕಾಂಪೌಂಡ್‌ ಪ್ರವೇಶಿಸಿದೆ. ಅದರಿಂದ ಇಳಿದ ಮಹಿಳೆ ಸೇರಿದಂತೆ ಐವರು ನೇರವಾಗಿ ಪ್ರಿಯಾಂಕಾ ಗಾಂಧಿ ಅವರ ಬಳಿ ತೆರಳಿ ಸೆಲ್ಫಿಗಾಗಿ ಬೇಡಿಕೆ ಇಟ್ಟಿದ್ದಾರೆ. ಅವರೆಲ್ಲರೂ ಉತ್ತರ ಪ್ರದೇಶದಿಂದ ಬಂದವರು ಎಂಬುದು ನಂತರ ಗೊತ್ತಾಗಿದೆ.

ಈ ಘಟನೆ ಬಗ್ಗೆ ಸ್ವತಃ ಪ್ರಿಯಾಂಕಾ ಗಾಂಧಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಆ ಐವರ ಭೇಟಿ ಬಗ್ಗೆ ಪ್ರಿಯಾಂಕಾಗೆ ಮಾಹಿತಿಯೇ ಇರಲಿಲ್ಲ. ಅಲ್ಲದೆ, ಅವರು ಯಾರಿಂದಲೂ ಪೂರ್ವಾನುಮತಿ ಪಡೆದಿರಲಿಲ್ಲ ಎಂದು ಗೊತ್ತಾಗಿದೆ.

ಈ ಘಟನೆ ನಂತರ ಕೂಡಲೆ ಎಚ್ಚೆತ್ತುಕೊಂಡಿರುವ ಪ್ರಿಯಾಂಕಾ ಗಾಂಧಿ ಅವರ ಭದ್ರತಾ ಸಿಬ್ಬಂದಿ, ನಿವಾಸದ ಎಲ್ಲ ದ್ವಾರಗಳನ್ನು ಮುಚ್ಚಿದ್ದಾರೆ. ಗುರುತು ದೃಢೀಕರಣವಿಲ್ಲದೇ ಕಾರೊಂದು ಹೀಗೆ ಏಕಾಏಕಿ ಬರಲು ಹೇಗೆ ಸಾಧ್ಯ ಎಂಬುದರ ಬಗ್ಗೆ ಸದ್ಯ ಆತಂಕ ವ್ಯಕ್ತವಾಗಿದೆ.

ಇನ್ನು ಈ ಕುರಿತು ಮಾತನಾಡಿರುವ ಗೃಹ ಖಾತೆ ರಾಜ್ಯ ಸಚಿವ ಕೃಷ್ಣ ರೆಡ್ಡಿ, ಘಟನೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

ಗಾಂಧಿ ಕುಟುಂಬಕ್ಕೆ ನೀಡಲಾಗಿದ್ದ ಎಸ್‌ಪಿಜಿ ಭದ್ರತೆಯನ್ನು ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ರದ್ದು ಮಾಡಿತ್ತು. ಸದ್ಯ ಅವರಿಗೆ ಝಡ್‌ ಪ್ಲಸ್‌ ಮಾದರಿಯ ಭದ್ರತೆ ನೀಡಲಾಗಿದ್ದು, ಇದನ್ನು ಸಿಆರ್‌ಪಿಎಫ್‌ ನಿರ್ವಹಿಸುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು