ಭಾನುವಾರ, ಆಗಸ್ಟ್ 1, 2021
27 °C

ಅಯೋಧ್ಯೆ: ರಾಮ ಮಂದಿರ ನಿರ್ಮಾಣ ಸಂಕೀರ್ಣದಲ್ಲಿ ರುದ್ರಾಭಿಷೇಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ಅಯೋಧ್ಯೆಯ ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ಪ್ರಮುಖ ಸ್ವಾಮೀಜಿಗಳು, ಸಂತರ ನೇತೃತ್ವದಲ್ಲಿ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆಯನ್ನು ಬುಧವಾರ ನೆರವೇರಿಸುವ ಮೂಲಕ ರಾಮ ಮಂದಿರದ ನಿರ್ಮಾಣ ಕಾರ್ಯಗಳಿಗೆ ಚಾಲನೆ ನೀಡಲಾಯಿತು.

ಮಂದಿರ ನಿರ್ಮಾಣ ಕಾರ್ಯಗಳ ಮೇಲ್ವಿಚಾರಣೆ ನಡೆಸಲಿರುವ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್‌ ಅಧ್ಯಕ್ಷ ಮಹಾಂತ‌ ಕಮಲ್‌ ನಯನ್‌ ದಾಸ್‌, ಮಹಾಂತ ನೃತ್ಯ ಗೋಪಾಲ್‌ ದಾಸ್‌ ಅವರು ಇತರ ಸ್ವಾಮೀಜಿಗಳೊಂದಿಗೆ ವಿಶೇಷ ಪೂಜೆ ನೆರವೇರಿಸಿದರು. 

‘ರಾಮ ಮಂದಿರ ನಿರ್ಮಾಣಕ್ಕೆ ಯಾವುದೇ ಅಡಚಣೆಗಳು ಉಂಟಾಗಬಾರದು, ಸುಗಮವಾಗಿ ನಡೆಯಬೇಕು ಎಂಬ ಉದ್ದೇಶದಿಂದ ರುದ್ರಾಭಿಷೇಕ ಮತ್ತು ವಿಶೇಷ ಪೂಜೆ ಮಾಡಲಾಗಿದೆ. ಗರ್ಭಗುಡಿಯ ಶಿಲಾನ್ಯಾಸ ನೆರವೇರಿಸಲು ಪ್ರಧಾನಿ ನರೇಂದ್ರ ಮೊದಿ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಕೋವಿಡ್‌–19 ವ್ಯಾಪಕವಾಗುತ್ತಿರುವುದರಿಂದ ಅವರಿಗೆ ಅಯೋಧ್ಯೆಗೆ ಬರಲು ಆಗಲಿಲ್ಲ. ನಂತರ ಈ ಕಾರ್ಯಕ್ರಮ ರದ್ದುಗೊಳಿಸಲಾಯಿತು. ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಲು ಬರುವಂತೆ ಪ್ರಧಾನಿಯನ್ನು ಭೇಟಿ ಮಾಡಿ ಮತ್ತೊಮ್ಮೆ ಆಹ್ವಾನ ನೀಡಲಾಗುವುದು’ ಎಂದು ಮಹಾಂತ ಕಮಲ್‌ ನಯನ್‌ ದಾಸ್‌ ಹೇಳಿದರು.

‘ದೇವಶಯನ ಏಕಾದಶಿ’ ಅಂದರೆ ಜುಲೈ 2 ರಂದು ಶಿಲಾನ್ಯಾಸ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. 

ದೇವಶಯನ ಏಕಾದಶಿ ನಂತರ ದೇವತೆಗಳು ನಾಲ್ಕು ತಿಂಗಳವರೆಗೆ ನಿದ್ರಾವಸ್ಥೆಯಲ್ಲಿರುತ್ತಾರೆ ಎಂದು ಹಿಂದೂ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಕೈಗೊಳ್ಳಲಾಗುವುದಿಲ್ಲ. 

ಮಂದಿರ ನಿರ್ಮಾಣ ಸ್ಥಳದಲ್ಲಿ ಭೂಮಿಯನ್ನು ಸಮತಟ್ಟಾಗಿ ಮಾಡಲಾಗಿದೆ. ಮಂದಿರ ನಿರ್ಮಾಣ ಕೆಲಸ ಆರಂಭಿಸಲು ಗುತ್ತಿಗೆ ಪಡೆದಿರುವ ಕಂಪನಿ ಎಲ್ಲ ರೀತಿಯಿಂದ ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು