7

ಬಿಜೆಪಿಯಿಂದ ಚುನಾವಣಾ ರಾಜಕೀಯ: ಶಿವಸೇನಾ ಟೀಕೆ

Published:
Updated:

ಮುಂಬೈ: ಜಮ್ಮು ಮತ್ತು ಕಾಶ್ಮೀರದಲ್ಲಿ ಮೈತ್ರಿ ಸರ್ಕಾರದಿಂದ ಹೊರಬಂದ ಬಿಜೆಪಿ ನಡೆಯನ್ನು ಟೀಕಿಸಿರುವ ಶಿವಸೇನಾ ‘ಉತ್ತರದ ರಾಜ್ಯಗಳಲ್ಲಿ ಬಿಜೆಪಿ ಈಗಾಗಲೇ ಚುನಾವಣಾ ರಾಜಕೀಯ ಆರಂಭಿಸಿದೆ’ ಎಂದು ಆರೋಪಿಸಿದೆ.

ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ, ‘ಬಿಜೆಪಿ ಕಾಶ್ಮೀರದಲ್ಲಿ ಮತ್ತೊಮ್ಮೆ ಚುನಾವಣಾ ರಾಜಕೀಯದ ಕಹಳೆ ಊದಿದೆ. ಮೂರು ವರ್ಷಗಳು ಅಧಿಕಾರ ಅನುಭವಿಸಿದ ನಂತರ ಈಗ ಸರ್ಕಾರ ಕೆಲಸ ಮಾಡುತ್ತಿಲ್ಲ, ಭಯೋತ್ಪಾದನೆ ಹೆಚ್ಚಿದೆ, ಲೇಹ್‌,ಲಡಾಖ್‌ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಹೇಳಿರುವುದೆ ಇದಕ್ಕೆ ಸಾಕ್ಷಿ’ ಎಂದು ಬರೆಯಲಾಗಿದೆ.   

‘ಕಾಶ್ಮೀರದಲ್ಲಿ ಮತ್ತೊಮ್ಮೆ ಸುಂದರ ಪರಿಸರವನ್ನು ಸೃಷ್ಟಿಸುತ್ತೇವೆ ಎಂದು ಈಗ ಬಿಜೆಪಿ ಮತ್ತೊಂದು ಸುಳ್ಳು ಹೇಳುತ್ತಿದೆ. ಆದರೆ ಜನರು ಈ ಬಗೆಯ ಸುಳ್ಳುಗಳಿಂದ ರೋಸಿಹೋಗಿದ್ದಾರೆ. ಅವರಿಗೆ ಈ ಪಿತೂರಿಗಳ ಅರಿವಿದೆ’ ಎಂದು ಶಿವಸೇನಾ ಉಲ್ಲೇಖಿಸಿದೆ.

‘ಮೂರು ವರ್ಷಗಳು ನೀವು ಅಧಿಕಾರವನ್ನು ಅನುಭವಿಸಿದ್ದೀರಿ. ಹಣ್ಣನ್ನು ಕೊಯ್ಯುವ ಸಂದರ್ಭ ಬಂದಾಗ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದೀರಿ. ಇದು ಬಿಜೆಪಿ ಕೇವಲ ಅಧಿಕಾರಕ್ಕಾಗಿ ಮಾಡಿಕೊಂಡ ಹೊಂದಾಣಿಕೆ’ ಎಂದು ಸಾಮ್ನಾದಲ್ಲಿ ಹೇಳಿದೆ. 

ಲೇಹ್‌, ಲಡಾಖ್‌ ನಿರ್ಲಕ್ಷಕ್ಕೆ ಒಳಪಟ್ಟಿದ್ದರೆ, ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಏಕೆ ಅದರ ವಿರುದ್ಧ ದನಿ ಎತ್ತಲಿಲ್ಲ? ಕೊಲೆಯಾದ ಹಿಜ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿ ಅವರ ಕುಟುಂಬಕ್ಕೆ ನೀಡಿದ ಪರಿಹಾರವನ್ನು ರಾಜ್ಯ ಸರ್ಕಾರ ಏಕೆ ವಿರೋಧಿಸಲಿಲ್ಲ ಎಂದು ಪ್ರಶ್ನಿಸಲಾಗಿದೆ. 

‘ಅಧಿಕಾರದಲ್ಲಿದ್ದಾಗ ಭಯೋತ್ಪಾದನೆ ಕುರಿತು ಮೃದು ಧೋರಣೆ ತಾಳಿದ್ದ ಬಿಜೆಪಿ ಮೈತ್ರಿ ಸರ್ಕಾರದಿಂದ ಹೊರ ಬಂದ ನಂತರ ದೂಷಿಸುತ್ತಿದೆ. ಆಗ 370ನೇ ವಿಧಿ ಕುರಿತು ಮಾತನಾಡದ ಬಿಜೆಪಿಗೆ ಈಗ ಅದು ನೆನಪಾಗಿದೆ’ ಎಂದು ಸೇನಾ ಟೀಕಿಸಿದೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !