ಶನಿವಾರ, ಡಿಸೆಂಬರ್ 14, 2019
21 °C
ಕಮಲ ಪಡೆ ಸೇರಿದ ಸುಜಯ್ ವಿಖೆ ಪಾಟೀಲ್

ಮಹಾರಾಷ್ಟ್ರ: ಪ್ರತಿಪಕ್ಷ ನಾಯಕನ ಮಗನೇ ಬಿಜೆಪಿಗೆ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ಪ್ರತಿಪಕ್ಷದ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಅವರ ಪುತ್ರ ಸುಜಯ್ ವಿಖೆ ಪಾಟೀಲ್ ಮಂಗಳವಾರ ಬಿಜೆಪಿ ಸೇರಿದರು. ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹಾಗೂ ಬಿಜೆಪಿಯ ಹಿರಿಯ ನಾಯಕರು ಸುಜಯ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಲೋಕಸಭೆ ಚುನಾವಣೆಯಲ್ಲಿ ಅಹ್ಮದ್‌ನಗರ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಅವಕಾಶ ದೊರೆಯದಿರುವುದು ಖಚಿತವಾದ ಹಿನ್ನೆಲೆಯಲ್ಲಿ ಸುಜಯ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಸೀಟು ಹಂಚಿಕೆ ವಿಷಯವಾಗಿ ಶರದ್‌ ಪವಾರ್ ನೇತೃತ್ವದ ಎನ್‌ಸಿಪಿ ಜತೆ ಕಾಂಗ್ರೆಸ್‌ ಈಚೆಗೆ ಒಪ್ಪಂದ ಮಾಡಿಕೊಂಡಿತ್ತು. 26 ಕ್ಷೇತ್ರಗಳನ್ನು ಉಳಿಸಿಕೊಂಡಿದ್ದ ಕಾಂಗ್ರೆಸ್ 22 ಕ್ಷೇತ್ರಗಳನ್ನು ಎನ್‌ಸಿಪಿಗೆ ಬಿಟ್ಟುಕೊಟ್ಟಿದೆ.

ಅಹ್ಮದ್‌ನಗರ ಕ್ಷೇತ್ರದಲ್ಲಿ ಸ್ಪರ್ಧಿಸಲು ಮಗನಿಗೆ ಅವಕಾಶ ನೀಡಬೇಕು ಎಂಬ ರಾಧಾಕೃಷ್ಣ ವಿಖೆ ಪಾಟೀಲ್ ಮನವಿಯನ್ನು ಎನ್‌ಸಿಪಿ ತಿರಸ್ಕರಿಸಿದೆ. ಪ್ರಸ್ತುತ ಅಹ್ಮದ್‌ನಗರ ಕ್ಷೇತ್ರದಲ್ಲಿ ಬಿಜೆಪಿಯ ದಿಲೀಪ್ ಗಾಂಧಿ ಸಂಸದರಾಗಿದ್ದಾರೆ.

ಕಾಂಗ್ರೆಸ್‌ ಪಕ್ಷವು ಟಿಕೆಟ್ ನೀಡದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಈ ಹಿಂದೆ ಸುಜಯ್ ಹೇಳಿದ್ದರು. ಬಳಿಕ ಅವರು ಬಿಜೆಪಿ ನಾಯಕ ಗಿರೀಶ್ ಮಹಾಜನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಬಿಜೆಪಿಯಲ್ಲಿ ವಿರೋಧ: ಸುಜಯ್ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿರುವುದಕ್ಕೆ ಬಿಜೆಪಿಯ ಕೆಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿಯನ್ನು ಚುನಾವಣೆಯಲ್ಲಿ ಪ್ರತಿನಿಧಿಸುವುದಕ್ಕೂ ಮೊದಲು ಅವರು ಪಕ್ಷಕ್ಕಾಗಿ ಕೆಲಸ ಮಾಡಲಿ ಎಂಬ ಆಗ್ರಹ ವ್ಯಕ್ತವಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು