ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನ್ಯಾಸಕಿಗೆ ಕಿರುಕುಳ: ರವೀಂದ್ರಭಾರತಿ ವಿ.ವಿ ಏಳು ಉಪನ್ಯಾಸಕರ ರಾಜೀನಾಮೆ

ಟಿಎಂಸಿಪಿ ಸದಸ್ಯರಿಂದ ಕಿರುಕುಳ
Last Updated 18 ಜೂನ್ 2019, 20:00 IST
ಅಕ್ಷರ ಗಾತ್ರ

ಮುಖ್ಯಾಂಶಗಳು

* ಉಪನ್ಯಾಸಕಿಗೆ ಒಂದು ತಿಂಗಳಿನಿಂದ ಕಿರುಕುಳ

* ಪ್ರತಿಭಟಿಸಿದ ಉಪನ್ಯಾಸಕರಿಗೆ ಘೇರಾವ್‌

* ರಾಜೀನಾಮೆ ವಾಪಸ್‌ ಪಡೆಯಲು ಸಚಿವರ ಮನವಿ

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ‘ತೃಣಮೂಲ ಛಾತ್ರ ಪರಿಷತ್‌’ನ (ಟಿಎಂಸಿಪಿ) ಸದಸ್ಯರು ಜಾತಿ ನಿಂದನೆ ಮಾಡಿ ಉಪನ್ಯಾಸಕಿಯೊಬ್ಬರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ, ಪಶ್ಚಿಮ ಬಂಗಾಳದ ರವೀಂದ್ರ ಭಾರತಿ ವಿಶ್ವವಿದ್ಯಾಲಯದ ಏಳು ಮಂದಿ ಉಪನ್ಯಾಸಕರು ರಾಜೀನಾಮೆ ನೀಡಿದ್ದಾರೆ.

ಘಟನೆ ರಾಜ್ಯದಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣವು ಗಂಭೀರ ಸ್ವರೂಪ ಪಡೆಯುತ್ತಿರುವುದನ್ನು ಮನಗಂಡ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರು ಮಂಗಳವಾರ ವಿ.ವಿ.ಗೆ ಧಾವಿಸಿ ಮಾತುಕತೆ ನಡೆಸಿದ್ದಾರೆ. ಆದರೆ ಟಿಎಂಸಿಪಿ ನಾಯಕರು ಘಟನೆಯನ್ನು ಅಲ್ಲಗಳೆದಿದ್ದಾರೆ.

‘ವಿಶ್ವವಿದ್ಯಾಲಯದ ಭೂಗರ್ಭ ಶಾಸ್ತ್ರ ವಿಭಾಗದ ಉಪನ್ಯಾಸಕಿಯೊಬ್ಬರಿಗೆ ಟಿಎಂಸಿಪಿ ಸದಸ್ಯರು ಕಳೆದ ಮೇ ತಿಂಗಳಿನಿಂದಲೇ ಜಾತಿ ನಿಂದನೆ ಮಾಡಿ ಕಿರುಕುಳ ನೀಡುತ್ತಿದ್ದರು. ಇದನ್ನು ಖಂಡಿಸಿ ಕಳೆದ ಗುರುವಾರ ಕೆಲವು ಉಪನ್ಯಾಸಕರು ಪ್ರತಿಭಟನೆ ನಡೆಸಿದ್ದರು. ಆದರೆ ಟಿಎಂಸಿಪಿ ಕಾರ್ಯಕರ್ತರು ಇಂಥ ಉಪನ್ಯಾಸಕರನ್ನು ಸುಮಾರು ಐದು ಗಂಟೆಗಳ ಕಾಲ ಕೊಠಡಿಯಿಂದ ಹೊರಗೆ ಬರಲಾಗದಂತೆ ಘೇರಾವ್‌ ಹಾಕಿದ್ದರು. ಇದಾಗುತ್ತಿದ್ದಂತೆ ಏಳು ಮಂದಿ ಉಪನ್ಯಾಸಕರು ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಿದವರಲ್ಲಿ ನಾಲ್ವರು ವಿಭಾಗ ಮುಖ್ಯಸ್ಥರು ಹಾಗೂ ಮೂವರು ವಿವಿಧ ಕೇಂದ್ರಗಳ ನಿರ್ದೇಶಕರು ಸೇರಿದ್ದಾರೆ’ ಎಂದು ವಿ.ವಿ. ಮೂಲಗಳು ತಿಳಿಸಿವೆ.

‘ನಿಂದನೆ, ಕಿರುಕುಳಕ್ಕೆ ಒಳಗಾದ ಉಪನ್ಯಾಸಕಿ ಇ–ಮೇಲ್‌ ಮೂಲಕ ದೂರು ಸಲ್ಲಿಸಿದ್ದಾರೆ. ದೂರಿನ ಆಧಾರದಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿದೆ. ತನಿಖೆ ನಡೆಯುತ್ತಿದೆ. ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಈವರೆಗೆ ಇಂಥ ಘಟನೆ ನಡೆದಿಲ್ಲ. ಅದರಲ್ಲೂ ರವಿಂದ್ರನಾಥ ಟ್ಯಾಗೋರ್‌ ಅವರ ಹೆಸರಿನ ಸಂಸ್ಥೆಯಲ್ಲಿ ಇಂಥ ಘಟನೆ ನಡೆದಿದೆ ಎಂಬುದು ಬೇಸರದ ವಿಚಾರ. ತನಿಖೆಯ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ವಿಶ್ವವಿದ್ಯಾಲಯದ ಕುಲಪತಿ ಸವ್ಯಸಾಚಿ ಬಸು ರೇ ಚೌಧರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT