ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯಕ್ಕೆ ಸೇರಲೆಂದು ಐಎಎಸ್‌ ಬೇಡವೆಂದ ಕಾಶ್ಮೀರದ ಯುವಕ

Last Updated 9 ಜನವರಿ 2019, 12:49 IST
ಅಕ್ಷರ ಗಾತ್ರ

ಶ್ರೀನಗರ: ಕಾಶ್ಮೀರದಲ್ಲಿ ನಡೆಯುತ್ತಿರುವ ಅವ್ಯಾಹತ ಹತ್ಯೆಗಳನ್ನು ಖಂಡಿಸಿ, ಕಾಶ್ಮೀರದ ಸಮಸ್ಯೆಗೆ ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದ ಐಎಎಸ್‌ ಅಧಿಕಾರಿ ಶಾ ಫೈಸಲ್ ಬುಧವಾರ ರಾಜೀನಾಮೆ ನೀಡಿದರು. 2010ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಮೊದಲಿಗರಾಗಿ ಹೊರಹೊಮ್ಮಿ ಫೈಸಲ್ ಸುದ್ದಿಯಾಗಿದ್ದರು.

ಫೇಸ್‌ಬುಕ್‌ನಲ್ಲಿ ಚುಟುಕು ಟಿಪ್ಪಣಿಯೊಂದಿಗೆ ತಮ್ಮ ನಿರ್ಧಾರ ಪ್ರಕಟಿಸಿರುವ ಫೈಸಲ್, ‘ದೇಶದಲ್ಲಿರುವ 20 ಕೋಟಿ ಮುಸ್ಲಿಮರನ್ನು ಕಡೆಗಣಿಸಲಾಗುತ್ತಿದೆ. ಅವರು ತಲೆಎತ್ತಲು ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಿಸಲು ಯತ್ನಿಸುತ್ತಿರುವ ಹಿಂದುತ್ವವಾದಿ ಶಕ್ತಿಗಳು ಮುಸ್ಲಿಮರನ್ನು ಎರಡನೇ ದರ್ಜೆ ನಾಗರಿಕರಂತೆ ನಡೆಸಿಕೊಳ್ಳುತ್ತಿವೆ. ಕಾಶ್ಮೀರ ಹೊಂದಿರುವ ವಿಶೇಷ ಸ್ಥಾನಗಳನ್ನು ಕಿತ್ತುಕೊಳ್ಳಲು ಮೋಸದ ತಂತ್ರಗಳನ್ನು ಹೆಣೆಯಲಾಗುತ್ತಿದೆ. ಅತಿರಾಷ್ಟ್ಟೀಯತೆಯ ಹೆಸರಿನಲ್ಲಿ ದ್ವೇಷ ಮತ್ತು ಸಾಂಸ್ಕೃತಿಕ ಅಸಹಿಷ್ಣುತೆ ಭಾರತದಲ್ಲಿ ಹೆಚ್ಚಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಈಚೆಗಷ್ಟೇ ವಿದೇಶದಲ್ಲಿ ತರಬೇತಿ ಮುಗಿಸಿ ಬಂದ ಫೈಸಲ್ ಪೋಸ್ಟಿಂಗ್‌ಗಾಗಿ ಕಾಯುತ್ತಿದ್ದರು. ‘ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯನ್ನು ವಿರೋಧಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಆರ್‌ಬಿಐ, ಸಿಬಿಐ, ಎನ್‌ಐಎದಂಥ (ಕೇಂದ್ರ ತನಿಖಾ ದಳ) ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಲಗೊಳಿಸಿದೆ. ಕೇಂದ್ರದ ಈ ಕ್ರಮಗಳಿಂದ ಭವಿಷ್ಯದಲ್ಲಿ ಸಂವಿಧಾನದ ಘನತೆಗೆ ಕುಂದುಂಟಾಗುವ ಆತಂಕ ಎದುರಾಗಿದೆ. ಇದನ್ನು ತಕ್ಷಣ ನಿಲ್ಲಿಸಬೇಕು’ ಎಂದು ಅವರು ಹೇಳಿದ್ದರು.

‘ಬಲ ಬಳಸಿ ದೇಶದ ಜನರು ಪ್ರಶ್ನಿಸುವುದನ್ನು ಬಹುಕಾಲ ಹತ್ತಿಕ್ಕಲು ಸಾಧ್ಯವಿಲ್ಲ. ನಿಜವಾದ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಉಸಿರುಗಟ್ಟಿಸುವ ವಾತಾವರಣ ಇರಬಾರದು’ ಎಂದು ಹೇಳಿದ ಫೈಸಲ್, ‘ಐಎಎಸ್ ಪರೀಕ್ಷೆ ಪಾಸ್ ಮಾಡಲು ನೆರವಾದ ಕುಟುಂಬದ ಸದಸ್ಯರು, ಗೆಳೆಯರು ಮತ್ತು ಹಿತೈಷಿಗಳಿಗೆ ವಂದನೆಗಳು. ಮುಂದಿನ ದಿನಗಳಲ್ಲಿ ನಾಗರಿಕ ಸೇವೆ ಪರೀಕ್ಷೆಗಳನ್ನು ಪಾಸ್ ಮಾಡಲು ಬಯಸುವವರಿಗೆ ಅವರ ಕನಸು ನನಸು ಮಾಡಿಕೊಳ್ಳಲು ಅಗತ್ಯ ಮಾರ್ಗದರ್ಶನ ಮತ್ತು ಸಹಕಾರ ನೀಡುತ್ತೇನೆ’ ಎಂದು ಭರವಸೆ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಫೈಸಲ್ ಅವರ ರಾಜೀನಾಮೆ ವಿಚಾರ ಹರಡುತ್ತಿದ್ದಂತೆಯೇ ನ್ಯಾಷನಲ್ ಕಾನ್ಫರೆನ್ಸ್‌ನ ನಾಯಕ ಒಮರ್ ಅಬ್ದುಲ್ಲಾ ‘ಅಧಿಕಾರಶಾಹಿಗೆ ನಷ್ಟ, ರಾಜಕಾರಣಕ್ಕೆ ಲಾಭ. ಶಾಫೈಸಲ್ ನಿಮಗೆ ಸ್ವಾಗತ’ ಎಂದು ಟ್ವಿಟ್ ಮಾಡಿದ್ದರು.ಮುಂದಿನ ದಿನಗಳಲ್ಲಿ ಫೈಸಲ್ ನ್ಯಾಷನಲ್ ಕಾನ್ಫರೆನ್ಸ್‌ ಸೇರಬಹುದು ಎಂಬ ಮಾಧ್ಯಮ ವರದಿಗಳ ಕುರಿತು ಪ್ರತಿಕ್ರಿಯಿಸಿದ ಒಮರ್, ‘ಈ ವಿಚಾರವನ್ನು ಫೈಸಲ್ ಸ್ಪಷ್ಟಪಡಿಸಬೇಕು. ನಾನು ಅವರನ್ನು ರಾಜಕಾರಣಕ್ಕೆ ಸ್ವಾಗತಿಸಿದ್ದೇನೆ ಅಷ್ಟೇ’ ಎಂದು ಸ್ಪಷ್ಟಪಡಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಅತ್ಯಾಚಾರಗಳ ಬಗ್ಗೆ ಫೈಸಲ್ ಮಾಡಿದ್ದ ಟ್ವಿಟ್ ಆಧರಿಸಿ ಕಾಶ್ಮೀರ ಸರ್ಕಾರ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಮುಂದಾಗಿತ್ತು. ಕೇಂದ್ರ ಸರ್ಕಾರದ ಸಿಬ್ಬಂದಿ ತರಬೇತಿ ಇಲಾಖೆಯು ಫೈಸಲ್ ಅವರು, ‘ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಲು ವಿಫಲರಾಗಿದ್ದಾರೆ’ ಎಂದು ಅಭಿಪ್ರಾಯಪಟ್ಟಿತ್ತು.

‘ಜನಸಂಖ್ಯೆ +ಪಿತೃಪ್ರಧಾನ ಸಮಾಜ +ಅನಕ್ಷರತೆ +ಮದ್ಯಪಾನ +ಪಾರ್ನ್‌ +ತಂತ್ರಜ್ಞಾನ +ಅರಾಜಕತೆ=ರೇಪಿಸ್ತಾನ್’ ಎಂದು ಫೈಸಲ್ ಮಾಡಿದ್ದ ಟ್ವಿಟ್ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 35ಎ ಪರಿಚ್ಛೇದವನ್ನು ಫೈಸಲ್, ಭಾರತದೊಂದಿಗೆ ಕಾಶ್ಮೀರವನ್ನು ಗಂಟು ಹಾಕುವ ಸೂತ್ರ ಎಂದು ವ್ಯಾಖ್ಯಾನಿಸಿದ್ದರು. ಈ ಪರಿಚ್ಛೇದಕ್ಕೆ ಧಕ್ಕೆಯೊದಗಿದರೆ ಮದುವೆ ಮುರಿದುಬೀಳುತ್ತದೆ. ನಂತರ ಯೋಚಿಸಲು, ಮಾತನಾಡಲು ಏನೂ ಉಳಿಯುವುದಿಲ್ಲ ಎಂದು ಎಚ್ಚರಿಸಿದ್ದರು.

ಸಂವಿಧಾನ ಊರ್ಜಿತಕ್ಕೆ ಬರುವ ಮೊದಲೇ ಜಮ್ಮು ಮತ್ತು ಕಾಶ್ಮೀರವನ್ನು ಭಾರತಕ್ಕೆ ಸೇರಿಸಲಾಗಿತ್ತು ಎಂದು ಅವರು ಹೇಳಿದ್ದರು.ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮುಂದುವರಿಸುವುದು ದೇಶದ ಸಾರ್ವಭೌಮತೆ ಮತ್ತು ಭದ್ರತೆಗೆ ಯಾವುದೇ ಆತಂಕ ಉಂಟುಮಾಡುವುದಿಲ್ಲ ಎಂದು ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT