ಅಡ್ವಾಣಿ, ಜೋಷಿ ಭೇಟಿ ಮಾಡಿದ ಶಾ

ಭಾನುವಾರ, ಏಪ್ರಿಲ್ 21, 2019
26 °C

ಅಡ್ವಾಣಿ, ಜೋಷಿ ಭೇಟಿ ಮಾಡಿದ ಶಾ

Published:
Updated:
Prajavani

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಹಿರಿಯ ನಾಯಕರಾದ ಎಲ್‌.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಪಕ್ಷದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮ ಮುಗಿದ ತಕ್ಷಣವೇ ಶಾ ಅವರು ಮೊದಲು ಜೋಷಿ ಅವರ ಮನೆಗೆ ತೆರಳಿದರು. ಹಿರಿಯ ನಾಯಕನ ಜತೆ ಸುಮಾರು ಹೊತ್ತು ಮಾತುಕತೆ ನಡೆಸಿದರು. ನಂತರ ಅಲ್ಲಿಂದ ಅಡ್ವಾಣಿ ಅವರ ಮನೆಗೆ ತೆರಳಿ, ಮಾತುಕತೆ ನಡೆಸಿದರು. ಆದರೆ ಯಾವ ವಿಷಯವನ್ನು ಚರ್ಚಿಸಲಾಗಿದೆ ಎಂಬುದರ ಬಗ್ಗೆ ಮೂವರು ನಾಯಕರೂ ಮಾಹಿತಿ ನೀಡಿಲ್ಲ.

ಅಡ್ವಾಣಿ ಅವರು ವಾಜಪೇಯಿ ಸರ್ಕಾರದಲ್ಲಿ ಉಪಪ್ರಧಾನಿಯಾಗಿದ್ದರು. ಜೋಷಿ ಅವರು 2014ರ ಚುನಾವಣೆಯಲ್ಲಿ ಬಿಜೆಪಿಯ ಪ್ರಣಾಳಿಕೆ ಸಮಿತಿ ಮುಖ್ಯಸ್ಥರಾಗಿದ್ದರು. ಈ ಇಬ್ಬರು ನಾಯಕರನ್ನೂ ಪಕ್ಷದ ಪ್ರಮುಖ ಕಾರ್ಯಗಳಿಂದ ಹೊರಗಿಡಲಾಗಿದೆ. ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲೂ ಈ ಇಬ್ಬರು ನಾಯಕರು ಗೈರುಹಾಜರಾಗಿದ್ದರು.

ಅಡ್ವಾಣಿ ಅವರು ಪ್ರತಿನಿಧಿಸುತ್ತಿದ್ದ ಗಾಂಧಿನಗರ ಕ್ಷೇತ್ರದಿಂದ ಅವರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ. ಆ ಕ್ಷೇತ್ರದಿಂದ ಅಮಿತ್ ಶಾ ಕಣಕ್ಕೆ ಇಳಿದಿದ್ದಾರೆ. ಟಿಕೆಟ್ ನೀಡದಿರುವ ಬಗ್ಗೆ ಪಕ್ಷವು ಅಡ್ವಾಣಿ ಜತೆ ಯಾವುದೇ ಮಾತುಕತೆ ನಡೆಸಿರಲಿಲ್ಲ. ಪಕ್ಷವು ಹಿರಿಯ ನಾಯಕರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಮತ್ತು ಬಿಜಿಪಿಯ ವಿರೋಧಿಗಳನ್ನು ದೇಶದ್ರೋಹಿಗಳೆಂದು ಕರೆಯುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಅಡ್ವಾಣಿ ಅವರು ಕಳೆದ ವಾರ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದರು. ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

ಕಾನ್ಪುರ ಕ್ಷೇತ್ರದಿಂದ ನೀವು ಸ್ಪರ್ಧಿಸುವುದು ಬೇಡ ಎಂದು ಮುರಳಿ ಮನೋಹರ್ ಜೋಷಿ ಅವರಿಗೆ ಬಿಜೆಪಿಯು ಅಧಿಕೃತ ಸೂಚನೆ ನೀಡಿತ್ತು. ಜೋಷಿ ಅವರು ತಮ್ಮ ಕ್ಷೇತ್ರದ ಮತದಾರರಿಗೆ ಬಹಿರಂಗ ಪತ್ರ ಬರೆದು, ‘ನೀವು ಸ್ಪರ್ಧಿಸಬೇಡಿ ಎಂದು ಪಕ್ಷ ನನಗೆ ಆದೇಶಿಸಿದೆ’ ಎಂದು ತಿಳಿಸಿದ್ದರು.

‘ಈ ಎರಡೂ ವಿಚಾರಗಳಿಂದ ಪಕ್ಷವು ಮುಜುಗರ ಅನುಭವಿಸಿತ್ತು. ಈಗ ಶಾ ಅವರು ಈ ಇಬ್ಬರು ನಾಯಕರನ್ನು ಭೇಟಿ ಮಾಡಿರುವುದು ಮಹತ್ವದ ಬೆಳವಣಿಗೆ’ ಎಂದು ಬಿಜೆಪಿ ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 1

  Frustrated
 • 6

  Angry

Comments:

0 comments

Write the first review for this !