ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಹೀನ್‌ಬಾಗ್‌: ಬ್ಯಾರಿಕೇಡ್‌ ತೆರವಿಗೆ ಸ್ಥಳೀಯರ ಒತ್ತಾಯ

Last Updated 2 ಫೆಬ್ರುವರಿ 2020, 17:11 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೆಹಲಿಯ ಶಾಹೀನ್‌ಬಾಗ್‌ನಲ್ಲಿ ನಡೆಯುತ್ತಿರುವ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆ ಸಮೀಪ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಸ್ಥಳೀಯರು ಭಾನುವಾರ ಪ್ರತಿಭಟನೆ ನಡೆಸಿ, ರಸ್ತೆಗೆ ಅಡ್ಡಲಾಗಿ ಹಾಕಿರುವ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಕಳೆದ 50 ದಿನಗಳಿಂದ ಸಿಎಎ ವಿರೋಧಿ ಪ್ರತಿಭಟನೆ ನಡೆಸಲಾಗುತ್ತಿದೆ. ಇದರಿಂದ ರಸ್ತೆ ಬಂದ್‌ ಮಾಡಲಾಗಿದ್ದು, ಇಲ್ಲಿನ ಜನರಿಗೆ ತೀವ್ರ ತೊಂದರೆ ಆಗಿದೆ. ಆದ್ದರಿಂದ ಬ್ಯಾರಿಕೇಡ್‌ ತೆಗೆದುಹಾಕಿ, ಕಾಲಿಂದಿ ಕುಂಜ್‌ನಿಂದ ನೋಯ್ಡಾಕ್ಕೆ ಸಂಪರ್ಕಿಸುವ ಈ ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ಮಹಿಳೆಯರು ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ‘ಜೈ ಶ್ರೀರಾಮ್‌’, ‘ವಂದೆ ಮಾತರಂ’ ಹಾಗೂ ‘ಶಾಹೀನ್‌ಬಾಗ್‌ ಖಾಲಿ ಮಾಡಿ ( ಶಾಹೀನ್‌ಬಾಗ್‌ ಖಾಲಿ ಕರೊ)’ ಎಂಬ ಘೋಷಣೆ ಕೂಗಿದರು.

ಸ್ಥಳದಲ್ಲಿದ್ದ ಹಿರಿಯ ಪೊಲೀಸ್‌ ಅಧಿಕಾರಿಗಳು, ಶಾಂತಿ ಕಾಪಾಡುವಂತೆ ಪ್ರತಿಭಟನಕಾರರನ್ನು ಕೋರಿದರು. ನಂತರ 52 ಮಂದಿಯನ್ನು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

ಗುಂಡು ಹಾರಿಸಿದ್ದ ಆರೋಪಿ ಕಸ್ಟಡಿಗೆ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ರಾಜಧಾನಿಯ ಶಾಹೀನ್‌ಬಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಜನರತ್ತ ಗುಂಡು ಹಾರಿಸಿದ್ದ ವ್ಯಕ್ತಿಯನ್ನು ದೆಹಲಿ ಕೋರ್ಟ್‌ ಎರಡು ದಿನಗಳ ಅವಧಿಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.

ಪ್ರತಿಭಟನೆ ನಡೆದ ಸ್ಥಳದಲ್ಲಿ ಶನಿವಾರ ಗುಂಡು ಹಾರಿಸಿದ್ದ ಕಪಿಲ್‌ ಗುಜ್ಜರ್‌ನನ್ನು ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ವಿಜೇತ ಸಿಂಗ್‌ ರಾವತ್‌ ಎದುರು ಪೊಲೀಸರು ಹಾಜರುಪಡಿಸಿದರು. ಹೆಚ್ಚಿನ ವಿಚಾರಣೆಯ ಅಗತ್ಯವಿರುವುದರಿಂದ ಪೊಲೀಸ್‌ ಕಸ್ಟಡಿಗೆ ಈತನನ್ನು ಒಪ್ಪಿಸಲಾಯಿತು.

ಶೂಟರ್‌ಗೆ ನಗದು ಬಹುಮಾನ

ಲಖನೌ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದ ಅಪ್ರಾಪ್ತ ವಯಸ್ಕನಿಗೆ ಉತ್ತರ ಪ್ರದೇಶದ ಸರ್ಕಾರೇತರ ಸಂಸ್ಥೆಯೊಂದು ನಗದು ಬಹುಮಾನ ಘೋಷಿಸಿದೆ.

ಬಜರಂಗಿ ಲಾಲ್‌ ಕಲ್ಯಾಣ ಸೇವಾ ಸಮಿತಿ ಈ ಬಹುಮಾನ ಘೋಷಿಸಿದೆ. ಬರೇಲಿ ಜಿಲ್ಲೆಯ ಮಥುರಾಪುರ ಗ್ರಾಮದಲ್ಲಿ ನಡೆದ ಸಭೆಯಲ್ಲಿ ₹5100 ನೀಡಲು ನಿರ್ಧರಿಸಲಾಯಿತು. ಜತೆಗೆ, ಗುಂಡಿನ ದಾಳಿ ನಡೆಸಿದವನನ್ನು ’ನಾಥೂರಾಮ್‌ ಗೋಡ್ಸೆ‘ ಎಂದು ಕರೆದು ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲವು ಸದಸ್ಯರು ಈತನಿಗೆ ’ಗೋಡ್ಸೆ‘ ಬಿರುದು ನೀಡಬೇಕು ಎಂದು ಒತ್ತಾಯಿಸಿದರು.

ಕೆಲ ಸ್ಥಳೀಯರು ನೀಡಿದ ದೂರಿನ ಮೇರೆಗೆ ಪೊಲೀಸರು ಸಮಿತಿಯ ನಾಲ್ವರು ಪದಾಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

’ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ‘ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT