ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಶ್ಮೀರಿಗಳು ಬಡವರಾಗೇ ಉಳಿಯಬೇಕೇ?’

Last Updated 7 ಆಗಸ್ಟ್ 2019, 5:19 IST
ಅಕ್ಷರ ಗಾತ್ರ

ನವದೆಹಲಿ:ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷಾಧಿಕಾರವನ್ನು ತೆಗೆದುಹಾಕುವ ಸರ್ಕಾರದ ನಿರ್ಧಾರದ ವಿರುದ್ಧ ವಿರೋಧ ಪಕ್ಷಗಳು ಮಾಡಿದ ಆಕ್ಷೇಪವನ್ನು ಗೃಹಸಚಿವ ಅಮಿತ್ ಶಾ ಸಾರಾಸಗಟಾಗಿ ತಳ್ಳಿಹಾಕಿದರು.

‘ಸರ್ಕಾರದ ಈ ಕ್ರಮದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿನ ರಕ್ತಪಾತ ಅಂತ್ಯವಾಗುತ್ತದೆ. 1989ರಿಂದ 2018ರ ನಡುವೆ ರಾಜ್ಯದಲ್ಲಿ 41,849 ಮಂದಿಯ ಹತ್ಯೆಯಾಗಿದೆ. 370ನೇ ವಿಧಿ ಇಲ್ಲದಿದ್ದರೆ, ಇಷ್ಟು ಜನ ಜೀವಬಿಡುವ ಅಗತ್ಯವಿರಲಿಲ್ಲ. ಈ ಹತ್ಯೆಗಳ ಹೊಣೆ ಹೊರುವವರು ಯಾರು’ ಎಂದು ಅಮಿತ್ ಶಾ ಪ್ರಶ್ನಿಸಿದರು.

‘ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ನೆಲೆಯಾಗಲು 370ನೇ ವಿಧಿಯೇ ದೊಡ್ಡ ತೊಡಕಾಗಿತ್ತು. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡಲು ಮತ್ತು ಬಡತನ ಮಡುಗಟ್ಟಲು ಇದು ಕಾರಣವಾಗಿತ್ತು. ಇದು ಮಹಿಳೆಯರು, ದಲಿತರು ಮತ್ತು ಆದಿವಾಸಿಗಳಿಗೆ ಮಾರಕವಾಗಿತ್ತು. ಇದು ಭಯೋತ್ಪಾದನೆಯ ಮೂಲವಾಗಿತ್ತು. ಕಾಶ್ಮೀರ ಕಣಿವೆಯನ್ನು ಭಯೋತ್ಪಾದನೆಯಿಂದ ಸ್ವತಂತ್ರ್ಯಗೊಳಿಸುವ ಉದ್ದೇಶದಿಂದ 370ನೇ ವಿಧಿಯನ್ನು ತೆಗೆದುಹಾಕಲು ಇದು ಸರಿಯಾದ ಸಮಯ’ ಎಂದು ಅವರು ಹೇಳಿದರು.

‘ನಮಗೆ ಐದು ವರ್ಷ ಕೊಡಿ. ದೇಶದಲ್ಲೇ ಅತ್ಯಂತ ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಕಾಶ್ಮೀರವನ್ನು ಪರಿವರ್ತಿಸುತ್ತೇವೆ. ಕಾಶ್ಮೀರಿಗಳು ಬಡವರಾಗೇ ಉಳಿಯಬೇಕು ಎಂದು ನೀವೇಕೆ (ವಿರೋಧ ಪಕ್ಷಗಳು) ಬಯಸುತ್ತಿದ್ದೀರಿ? ರಾಜ್ಯದಲ್ಲಿನ ಜಮೀನಿಗೆ ಈಗ ಬೇಡಿಕೆಯೂ ಇಲ್ಲ, ಬೆಲೆಯೂ ಇಲ್ಲ. ಜಮೀನಿನ ಮಾಲೀಕತ್ವದ ಸಮಸ್ಯೆ ಇರುವುದರಿಂದ ಯಾರೂ ಇಲ್ಲಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಮುಂದಾಗುತ್ತಿಲ್ಲ. ಕಾಶ್ಮೀರಿ ಜನರು ಇನ್ನೂ 18ನೇ ಶತಮಾನದಲ್ಲೇ ಜೀವಿಸಬೇಕೇ? 21ನೇ ಶತಮಾನದಲ್ಲಿ ಬದುಕುವ ಹಕ್ಕು ಅಲ್ಲಿನ ಜನರಿಗೆ ಇಲ್ಲವೇ? ಕಾಶ್ಮೀರದಲ್ಲಿ ಶಾಲೆ–ಕಾಲೇಜುಗಳನ್ನು ಮುಚ್ಚಿಸುವಂತೆ ಅಲ್ಲಿನ ಯುವಕರನ್ನು ಪ್ರಚೋದಿಸುವ ನಾಯಕರ ಮಕ್ಕಳೆಲ್ಲಾ ಲಂಡನ್ ಮತ್ತು ಅಮೆರಿಕಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ’ ಎಂದು ಅಮಿತ್ ಶಾ ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT