ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣು ಯುದ್ಧದ ಪರಿಣಾಮ ಮೋದಿಗೆ ಗೊತ್ತೇ: ಶರದ್ ಪವಾರ್ ಪ್ರಶ್ನೆ

ಸಂದರ್ಶನ
Last Updated 25 ಏಪ್ರಿಲ್ 2019, 10:15 IST
ಅಕ್ಷರ ಗಾತ್ರ

ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಮುತ್ಸದ್ದಿ ರಾಜಕಾರಣಿ. ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ, ಪಿ.ವಿ. ನರಸಿಂಹರಾವ್‌ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ, ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕನಾಗಿ, ಮನಮೋಹನ್‌ಸಿಂಗ್‌ ನೇತೃತ್ವದ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಪವಾರ್‌ ಅವರ ಅನುಭವ ಬಹು ವಿಸ್ತಾರ. ಈ ಬಾರಿ ಚುನಾವಣೋತ್ತರ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂಬ ನಿರೀಕ್ಷೆ ಬಲವಾಗಿದೆ. ‘ಪ್ರಜಾವಾಣಿ’ಯ ಮೃತ್ಯುಂಜಯ ಬೋಸ್‌ ಜೊತೆ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ.

*2014 ಮತ್ತು 2019ರ ಲೋಕಸಭಾ ಚುನಾವಣೆ ನಡುವಣ ವ್ಯತ್ಯಾಸಗಳೇನು?

ಮನಮೋಹನ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರವು ಹತ್ತು ವರ್ಷಗಳ ಆಡಳಿತವನ್ನು ಪೂರೈಸಿತ್ತು. ಬಿಜೆಪಿಯು ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿತ್ತು. ಅವರು ದೇಶದ ಮೂಲೆಮೂಲೆಗೆ ಹೋಗಿ ಗುಜರಾತ್‌ ಮಾದರಿ ಅಭಿವೃದ್ಧಿಯ ಬಗ್ಗೆ ಮಾತನಾಡಿದರು. ಅಭಿವೃದ್ಧಿಯೇ ಅವರ ಮೂಲಮಂತ್ರವಾಗಿತ್ತು. ‘ಮೋದಿಗೂ ಒಂದು ಅವಕಾಶ ಕೊಡಬೇಕು’ ಎಂದು ಜನರು ಭಾವಿಸಿದರು– ಅವರು ಗೆದ್ದರು. ಆದರೆ ಈಗ ದೇಶ ಗಂಭೀರವಾದ ಕೃಷಿ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕಳೆದ ಎರಡು ವರ್ಷಗಳಲ್ಲಿ 11,998 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉದ್ಯೋಗಾವಕಾಶಗಳು ಕಡಿಮೆಯಾಗಿ ನಿರುದ್ಯೋಗ ಹೆಚ್ಚಿದೆ. ಯುವ ಜನಾಂಗ ಬೇಸರಗೊಂಡಿದೆ. ಕೈಗಾರಿಕಾ ಉತ್ಪಾದನೆ ಹಾಗೂ ಜಿಡಿಪಿ ಕುಸಿಯುತ್ತಿದೆ. ಕಳೆದ ಐದು ವರ್ಷಗಳಲ್ಲಿ ಮಾಡಿದ್ದೇನು ಎಂಬುದನ್ನು ಪ್ರಧಾನಿಯ ಬಾಯಿಯಿಂದ ಕೇಳಲು ನಾವು ಬಯಸುತ್ತೇವೆ. ಆದರೆ ಅವರು ಬೇರೆಯೇ ವಿಚಾರಗಳನ್ನು ಎತ್ತಿಕೊಂಡು ಪ್ರಚಾರ ಮಾಡುತ್ತಿದ್ದಾರೆ.

* ನಿಮ್ಮ ಮೇಲೆ ಪ್ರಧಾನಿ ವೈಯಕ್ತಿಕ ದಾಳಿ ನಡೆಸುತ್ತಿದ್ದಾರಲ್ಲ?

ಆರ್ಥಿಕತೆ, ಕೃಷಿ ಕ್ಷೇತ್ರಗಳಲ್ಲಿ ತಾವು ಐದು ವರ್ಷಗಳಲ್ಲಿ ಮಾಡಿರುವ ಸಾಧನೆಯ ಬಗ್ಗೆ ಅವರು ಮಾತನಾಡಬೇಕು. ವೈಯಕ್ತಿಕ ನಿಂದನೆಯಿಂದ ಏನನ್ನೂ ಸಾಧಿಸಲಾಗದು. ವಾಸ್ತವದಲ್ಲಿ ದೇಶದ ಜನಾಭಿಪ್ರಾಯ ತಮ್ಮ ವಿರುದ್ಧ ಇದೆ ಎಂಬುದು ಅವರಿಗೆ ಮನವರಿಕೆಯಾಗಿದೆ. ಅದಕ್ಕಾಗಿಯೇ ಅವರು ವೈಯಕ್ತಿಕ ನಿಂದನೆಯ ಹಾದಿ ಹಿಡಿದಿದ್ದಾರೆ. ರೈತರ ಆತ್ಮಹತ್ಯೆಯ ಹೊಣೆಯನ್ನು ಬೇರೆಯವರ ಮೇಲೆ ಹೊರಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಯಾವತ್‌ಮಲ್‌ನಲ್ಲಿ ರೈತರು ಆತ್ಮಹತ್ಯೆ ಮಾಡಿದ ಸುದ್ದಿ ಬಂದಾಗ ಅದನ್ನು ನಾನು ಪ್ರಧಾನಿ ಮನಮೋಹನ ಸಿಂಗ್‌ ಅವರ ಗಮನಕ್ಕೆ ತಂದಿದ್ದೆ. ಅವರು ಸ್ವತಃ ಆ ಊರಿಗೆ ಭೇಟಿ ನೀಡಿದ್ದರು. ನಾವು ₹ 70 ಸಾವಿರ ಕೋಟಿ ಸಾಲ ಮನ್ನಾ ಯೋಜನೆಯನ್ನು ಜಾರಿ ಮಾಡಿದ್ದೆವು. ನಮ್ಮ ಅವಧಿಯಲ್ಲಿ ಆಹಾರ ಧಾನ್ಯ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿಸಿದ್ದೆವು.

* ರಾಷ್ಟ್ರೀಯತೆಯ ವಿಚಾರವನ್ನು ಪ್ರಸ್ತಾಪಿಸುತ್ತಾ ಸೇನಾಪಡೆಯ ಶೌರ್ಯವನ್ನುಬಿಜೆಪಿ ಮುನ್ನೆಲೆಗೆ ತಂದಿದೆಯಲ್ಲ?

ತಾವು ಪ್ರಧಾನಿ ಎಂಬುದನ್ನು ಮರೆತು, ‘ಭಾರತದ ಅಣ್ವಸ್ತ್ರಗಳು ದೀಪಾವಳಿಗಾಗಿ ಇರುವುದಲ್ಲ’ ಎಂಬ ಹೇಳಿಕೆಯನ್ನು ಮೋದಿ ಅವರು ಇತ್ತೀಚೆಗೆ ನೀಡಿದ್ದಾರೆ. ಅಣ್ವಸ್ತ್ರ ಯುದ್ಧದ ಪರಿಣಾಮ ಏನಾಗಬಹುದೆಂಬ ಜ್ಞಾನವಾದರೂ ಅವರಿಗೆ ಇದೆಯೇ? ನಾವು ವಿಶ್ವಕ್ಕೆ ಎಂಥ ಸಂದೇಶ ನೀಡುತ್ತಿದ್ದೇವೆ? ‘ಭಾರತ ಒಂದು ಆಕ್ರಮಣಕಾರಿ ರಾಷ್ಟ್ರ’ ಎಂದು ಜಗತ್ತು ನಮ್ಮನ್ನು ಪರಿಗಣಿಸಬಹುದು.

* ಚುನಾವಣೋತ್ತರ ರಾಜಕೀಯದಲ್ಲಿ ನೀವು ಮಹತ್ವದ ಪಾತ್ರ ವಹಿಸಲಿದ್ದೀರಿ ಎಂದು ಹೇಳಲಾಗುತ್ತಿದೆ. ಈ ವಿಚಾರದಲ್ಲಿ ನಿಮ್ಮ ಅಭಿಪ್ರಾಯವೇನು?

ಅವರೆಲ್ಲರನ್ನೂ ಒಂದೆಡೆ ಸೇರಿಸುವಷ್ಟಕ್ಕೆ ನನ್ನ ಕೆಲಸ ಸೀಮಿತವಾಗಿರುತ್ತದೆ. ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. 2014ರಲ್ಲೂ ಸ್ಪರ್ಧಿಸಿರಲಿಲ್ಲ. 79ನೇ ವಯಸ್ಸಿನಲ್ಲಿ ನಾನು ರಾಜ್ಯಸಭೆಯನ್ನು ಪ್ರವೇಶಿಸಿದೆ. ಈಗ ನಾನು ‘ಹಿರಿಯರ ಮನೆ’ಗೆ ಸೂಕ್ತ ವ್ಯಕ್ತಿ ಎಂಬುದು ನನ್ನ ಭಾವನೆ. 14 ಚುನಾವಣೆಯಲ್ಲಿ ಸ್ಪರ್ಧಿಸಿರುವ ನಾನು ಒಮ್ಮೆಯೂ ಸೋಲು ಕಂಡಿಲ್ಲ.

* ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಲ್ಲಿ ಬದಲಾವಣೆಗಳೇನಾದರೂ ಆಗಿರುವುದನ್ನು ನೀವು ಗಮನಿಸಿದ್ದೀರಾ?

ಅವರು ತುಂಬ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ತಳಮಟ್ಟದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳು
ತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಅವರಲ್ಲಿ ಭಾರಿ ಸುಧಾರಣೆಗಳಾಗಿವೆ. ಅದು ಗೋಚರಿಸುತ್ತಿದೆ.

* ವಿರೋಧಪಕ್ಷಗಳು ರಫೇಲ್‌ ಖರೀದಿ ಒಪ್ಪಂದವನ್ನು ಚುನಾವಣೆಯ ಪ್ರಮುಖ ವಿಷಯವನ್ನಾಗಿಸಿವೆ. ಈ ವಿಚಾರದಲ್ಲಿ ನಿಮ್ಮ ನಿಲುವೇನು?

ರಫೇಲ್‌ ಅತ್ಯುತ್ತಮ ಆಯ್ಕೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಬೆಲೆಯಲ್ಲಿ ಆಗಿರುವ ಹೆಚ್ಚಳ, ಗುತ್ತಿಗೆಯನ್ನು ಅನಿಲ್‌ ಅಂಬಾನಿ ನೇತೃತ್ವದ ಕಂಪನಿಗೆ ನೀಡುವ ವಿಚಾರದಲ್ಲಿ ಆಕ್ಷೇಪಗಳಿವೆ. ಅವರ ಕಂಪನಿಗೆ ವಿಮಾನ ತಯಾರಿಕಾ ಕ್ಷೇತ್ರದಲ್ಲಿ ಅನುಭವ ಇದೆಯೇ? ಕಾಗದದ ವಿಮಾನವನ್ನಾದರೂ ಆ ಕಂಪನಿ ತಯಾರಿಸಿದೆಯೇ? ಬೊಫೋರ್ಸ್‌ ಹಗರಣದ ತನಿಖೆಗೆ ಜಂಟಿ ಸದನ ಸಮಿತಿ ರಚಿಸಬೇಕು ಎಂದು ವಿರೋಧಪಕ್ಷಗಳು ಒತ್ತಾಯಿಸಿದ್ದವು. ಅಂದಿನ ಸರ್ಕಾರ ಸಮಿತಿ ರಚಿಸಿತ್ತು. ಆದರೆ ಈಗ ಅಂಥ ಪ್ರಯತ್ನವನ್ನು ಮಾಡಿಲ್ಲ. ಸರ್ಕಾರ ಸಮಿತಿ ರಚಿಸಲು ಸಹ ಒಪ್ಪುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT