ಶುಕ್ರವಾರ, ಏಪ್ರಿಲ್ 16, 2021
22 °C
ಐದು ರಾಜ್ಯಗಳ ಚುನಾವಣೆ ಫಲಿತಾಂಶ 2019ರ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುವುದು ಖಚಿತ: ಶರದ್‌ ಯಾದವ್‌

‘ಮಹಾಮೈತ್ರಿ ಇಲ್ಲ ಎಂಬುದು ಬಿಜೆಪಿ ಅಪಪ್ರಚಾರ’

ಆನಂದ್‌ ಮಿಶ್ರಾ Updated:

ಅಕ್ಷರ ಗಾತ್ರ : | |

Deccan Herald

ಜೆ.ಪಿ. ಚಳವಳಿಯ ಕಾಲದಲ್ಲಿ ರಾಜಕಾರಣಕ್ಕೆ ಬಂದ ಶರದ್‌ ಯಾದವ್‌ ಏಳು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಎರಡು ಬಾರಿ ರಾಜ್ಯಸಭೆ ಸದಸ್ಯರೂ ಆಗಿದ್ದರು. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಇದ್ದಾಗ ಎನ್‌ಡಿಎ ಸಂಚಾಲಕರಾಗಿ ಶರದ್ ಇದ್ದರು. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿರುವ ಈ ಸಂದರ್ಭದಲ್ಲಿ ಅವರು ವಿರೋಧ ಪಕ್ಷಗಳ ಮಹಾ ಮೈತ್ರಿಕೂಟ ರಚನೆಯಾಗಬೇಕು ಎಂಬುದರ ಬಹುದೊಡ್ಡ ಪ್ರತಿಪಾದಕ. ಕಾಂಗ್ರೆಸ್‌ ವಿರೋಧವನ್ನೇ ಕೇಂದ್ರವಾಗಿಟ್ಟುಕೊಂಡು ರಾಜಕಾರಣ ಆರಂಭಿಸಿದ ಶರದ್‌, ಕಾಂಗ್ರೆಸ್‌ ಇಲ್ಲದೆ ಬಿಜೆಪಿ ವಿರೋಧಿ ಮಹಾ ಮೈತ್ರಿಕೂಟ ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಸದ್ಯದ ಮಟ್ಟಿಗೆ ಮಹಾ ಮೈತ್ರಿಕೂಟದ ಲಕ್ಷಣಗಳು ಕಾಣಿಸದೇ ಇದ್ದರೂ 2019ರ ಲೋಕಸಭಾ ಚುನಾವಣೆ ಹೊತ್ತಿಗೆ ಮೈತ್ರಿಕೂಟ ಸ್ಪಷ್ಟ ರೂಪ ಪಡೆದುಕೊಳ್ಳಲಿದೆ ಎಂಬ ವಿಶ್ವಾಸ ಹೊಂದಿದ್ದಾರೆ.

*ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ನೀವು ಹೇಗೆ ನೋಡುವಿರಿ? ಇದು 2019ರ ಲೋಕಸಭಾ ಚುನಾವಣೆಯ ಸೆಮಿಫೈನಲ್‌ ಎಂದು ಭಾವಿಸುವಿರಾ?

ಪ‍್ರತಿ ಚುನಾವಣೆಯೂ ಮುಖ್ಯ ಮತ್ತು ಅದು ಮುಂದಿನ ಚುನಾವಣೆ ಮೇಲೆ ಪ್ರಭಾವ ಬೀರಿಯೇ ಬೀರುತ್ತದೆ. ಐದು ರಾಜ್ಯಗಳ ಚುನಾವಣೆಯು 2019ರ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಮೊದಲು ನಡೆಯಲಿದೆ. ಹಾಗಾಗಿ ಈ ಚುನಾವಣೆಯ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆ ಮೇಲೆ ಖಂಡಿತವಾಗಿಯೂ ಪರಿಣಾಮವನ್ನು ಬೀರಲಿದೆ.

*ಕಳೆದ ಲೋಕಸಭಾ ಚುನಾವಣೆ ಬಳಿಕ ಪಂಜಾಬ್‌ ಬಿಟ್ಟರೆ ಬೇರೆಲ್ಲೂ ಗೆಲುವು ಪಡೆಯಲಾಗದ, ಲೋಕಸಭೆಯಲ್ಲಿ ಕೇವಲ 44 ಸ್ಥಾನಗಳಿಗೆ ಕುಸಿದಿರುವ ಕಾಂಗ್ರೆಸ್‌ಗೆ ಈ ಚುನಾವಣೆ ಹೇಗೆ ನಿರ್ಣಾಯಕ? 

ಒಂದು ರೀತಿಯಲ್ಲಿ ನೋಡಿದರೆ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್‌ ಮುಖ್ಯ ವಿರೋಧ ಪಕ್ಷ. ಮೀಜೋರಾಂನಲ್ಲಿ ಆಡಳಿತ ಪಕ್ಷ. ಹಾಗಾಗಿ ಆ ಪಕ್ಷಕ್ಕೆ ಇದು ನಿರ್ಣಾಯಕ ಚುನಾವಣೆ. 

*ಐದು ರಾಜ್ಯಗಳಲ್ಲಿ ನಿಮ್ಮ ನಿರೀಕ್ಷೆ ಏನು?

ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡದ ಜನರು ಬಿಜೆಪಿಯನ್ನು ಸೋಲಿಸಲು ಬಯಸಿದ್ದಾರೆ. ವಿರೋಧ ಪಕ್ಷಗಳು ಸರಿಯಾದ ಮೈತ್ರಿ ಮಾಡಿಕೊಂಡರೆ, ಸೂಕ್ತವಾಗಿ ಸೀಟು ಹಂಚಿಕೆ ಮಾಡಿಕೊಂಡರೆ ಬಿಜೆಪಿಯ ಸೋಲು ಖಚಿತ.

*ಬಿಎಸ್‌ಪಿ ಈಗಾಗಲೇ ಮೈತ್ರಿಯಿಂದ ದೂರ ಹೋಗಿದೆ. ಈ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಇರುವ ಮೈತ್ರಿಯ ಅವಕಾಶಗಳು ಯಾವುವು? ಪ್ರತ್ಯೇಕವಾಗಿಯೇ ಸ್ಪರ್ಧಿಸುವುದು ವಿರೋಧ ಪಕ್ಷಗಳ ಕಾರ್ಯಸೂಚಿಗೆ ಹೊಡೆತವಲ್ಲವೇ?

ನ್ಯಾಯಸಮ್ಮತವಾಗಿ ಮೈತ್ರಿಗೆ ಯಾರು ತಯಾರಾಗುತ್ತಾರೆಯೋ ಅವರ ಜತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಬೇಕು. ಹಿಂದೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಇಂತಹ ಮೈತ್ರಿ ಮಾಡಿಕೊಂಡಿತ್ತು. ಇಲ್ಲಿನ ಕೆಲವು ರಾಜ್ಯಗಳಲ್ಲಿ ಎಡಪಕ್ಷಗಳಿಗೆ ಸಾಂಪ್ರದಾಯಿಕ ಮತ ಬ್ಯಾಂಕ್‌ ಇದೆ. ಬಿಜೆಪಿಯನ್ನು ಸೋಲಿಸುವುದಕ್ಕಾಗಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವಂತೆ ಸೆ.14 ರಂದು ಜೈಪುರದಲ್ಲಿ ಮತ್ತು ಆಗಸ್ಟ್‌ 2ರಂದು ಮಧ್ಯಪ್ರದೇಶದಲ್ಲಿ ನಡೆಸಿದ ಸಮಾವೇಶದಲ್ಲಿ ನಾನು ಕರೆ ಕೊಟ್ಟಿದ್ದೇನೆ. ಈ ರಾಜ್ಯಗಳಲ್ಲಿ ಹಲವು ಸಣ್ಣ ಪಕ್ಷಗಳೂ ಇವೆ. 

*2018ರಲ್ಲಿ ಸಾಧ್ಯವಾಗದ ಮೈತ್ರಿ 2019ರಲ್ಲಿ ಸಾಧ್ಯವೇ?

ರಾಜ್ಯದ ಚುನಾವಣೆಗಳಲ್ಲಿ ಏನು ನಡೆಯಿತು ಎಂಬುದರ ಆಧಾರದಲ್ಲಿ 2019ರಲ್ಲಿ ವಿರೋಧ ಪಕ್ಷಗಳ ಮೈತ್ರಿ ಆಗದು ಎಂಬ ತೀರ್ಮಾನಕ್ಕೆ ನಾವು ಬರಬಾರದು. 2019ರಲ್ಲಿ ಮೈತ್ರಿ ಏರ್ಪಡಲಿದೆ ಮತ್ತು ಎಲ್ಲರೂ ಜತೆಯಾಗಿ ಹೋರಾಡಲಿದ್ದಾರೆ. ಮೈತ್ರಿಯಾಗುವುದು ನಿಶ್ಚಿತ. 

*ನಿಮ್ಮ ಮಾತುಗಳಲ್ಲಿ ಮಹತ್ವಾಕಾಂಕ್ಷೆಯೇ ಕಾಣಿಸುತ್ತಿಲ್ಲ. ವಿರೋಧ ಪಕ್ಷಗಳ ಮೈತ್ರಿ ಆಗಲೇ ಕರಗಿ ಹೋದಂತೆ ಕಾಣಿಸುತ್ತಿದೆಯಲ್ಲ...

ವಿರೋಧ ಪಕ್ಷಗಳ ನಡುವೆ ಮೈತ್ರಿಯೇ ಇಲ್ಲ ಎಂಬುದು ಬಿಜೆಪಿ ಹಬ್ಬಿಸುತ್ತಿರುವ ಮಿಥ್ಯೆ. ಅದನ್ನೇ ಮಾಧ್ಯಮಗಳು ಪುನರುಚ್ಚರಿಸುತ್ತಿವೆ. ವಿರೋಧ ಪಕ್ಷಗಳ ಒಗ್ಗಟ್ಟು ವಿಷಯಾಧರಿತ ಎನ್ನುವುದನ್ನು ನಿಮಗೆ ಕಾಣಲಾಗದೇ? ‘ಸಮ್ಮಿಶ್ರ ಸಂಸ್ಕೃತಿ ಉಳಿಸಿ’ ಅಭಿಯಾನದ ಅಡಿಯಲ್ಲಿ ಐದಕ್ಕೂ ಹೆಚ್ಚು ಸಮಾವೇಶಗಳನ್ನು ನಾನು ಮಾಡಿದ್ದೇನೆ. ಅದರಲ್ಲಿ 18ಕ್ಕೂ ಹೆಚ್ಚು ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ವಿರೋಧ ಪಕ್ಷಗಳು ಒಂದೇ ವೇದಿಕೆ ಹಂಚಿಕೊಂಡು ‘ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆ’ಗೆ ಬದ್ಧ ಎಂದು ಪ್ರತಿಜ್ಞೆ ಮಾಡಿವೆ. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಇಷ್ಟೇ ಸಂಖ್ಯೆಯ ಪಕ್ಷಗಳು ವಿರೋಧ ಪಕ್ಷಗಳ ಅಭ್ಯರ್ಥಿಗೆ ಮತ ಹಾಕಿವೆ. ಸೈದ್ಧಾಂತಿಕ ಒಗ್ಗಟ್ಟು ಈಗಾಗಲೇ ಇದೆ. 

*ಮುಂದಿನ ಲೋಕಸಭಾ ಚುನಾವಣೆಯ ಮುಖ್ಯ ವಿಷಯಗಳು ಯಾವುವು? ಬಿಜೆಪಿ ಈಗಲೂ ಪ್ರಬಲವಾಗಿಯೇ ಇದೆ ಎಂದು ಅನಿಸುವುದಿಲ್ಲವೇ?

ಭರವಸೆ ಈಡೇರಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮತ್ತು ರೈತರ ಆದಾಯ ದ್ವಿಗುಣದ ಭರವಸೆಗಳಿಗೆ ಏನಾಯಿತು? ರೂಪಾಯಿ ಮೌಲ್ಯ ಕುಸಿತ ನಿರಂತರವಾದ ವಿದ್ಯಮಾನ. ವಿದೇಶದಿಂದ ವಾಪಸ್‌ ತರುತ್ತೇವೆ ಎಂದು ಬಿಜೆಪಿ ಹೇಳಿದ್ದ ಕಪ್ಪುಹಣ ಎಲ್ಲಿ ಹೋಯಿತು? ಸರ್ಕಾರದ ಸುಳ್ಳುಗಳು ಜನರಿಗೆ ಅರ್ಥವಾಗಿದೆ. ರೈತರು ಸಿಟ್ಟಾಗಿದ್ದಾರೆ, ದಲಿತರು
ಆಕ್ರೋಶಗೊಂಡಿದ್ದಾರೆ. ಈ ಸರ್ಕಾರಕ್ಕೆ ಮತ ಹಾಕುವವರು ಯಾರು?

*ಇತ್ತೀಚೆಗೆ ಬಹಿರಂಗವಾದ ಸಿಬಿಐ ಮತ್ತು ಆರ್‌ಬಿಐ ವಿವಾದಗಳ ಬಗ್ಗೆ ನಿಮ್ಮ ಅನಿಸಿಕೆ ಏನು? ಯಾವುದೇ ಸಂಸ್ಥೆಯಲ್ಲಿ ಉಂಟಾಗುವ ಅಸಮಾಧಾನಗಳು ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಣ ಸಂಘರ್ಷವಾಗಿ ಬದಲಾಗುತ್ತಿರುವುದು ಯಾಕೆ?

ಸಂಸ್ಥೆಗಳ ಧ್ವಂಸ ಈ ಸರ್ಕಾರ ಸೃಷ್ಟಿಸಿದ ಗಂಭೀರವಾದ ಪರಿಸ್ಥಿತಿ. ಸ್ವಾಯತ್ತೆಗೆ ಅಡ್ಡಿ ಮಾಡಲಾಗುತ್ತಿದೆ ಎಂದು ಆರ್‌ಬಿಐ ಬಹಿರಂಗವಾಗಿ ಹೇಳಿದ್ದು ಇದೇ ಮೊದಲು. ಸರ್ಕಾರದ ಕ್ರಮಗಳ ವಿರುದ್ಧವೇ ಸಿಬಿಐ ನಿರ್ದೇಶಕರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಇವೆಲ್ಲವನ್ನು ಇಡೀ ದೇಶ ಗಂಭೀರವಾಗಿ ಪರಿಗಣಿಸಬೇಕು. ಯಾವುದು ಸರಿಯೋ ಅದರ ಪರವಾಗಿ ವಿರೋಧ ಪಕ್ಷಗಳು ನಿಲ್ಲಬೇಕು.

* ಬಿಎಸ್‌ಪಿ, ಎಸ್‌ಪಿಯಂತಹ ಪಕ್ಷಗಳು ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ಪ್ರತ್ಯೇಕವಾಗಿಯೇ ಸ್ಪರ್ಧಿಸುತ್ತಿವೆ. ಹಾಗಿರುವಾಗ 2019ರಲ್ಲಿ ಮೈತ್ರಿ ಹೇಗೆ ಸಾಧ್ಯ? ಕಾಂಗ್ರೆಸ್‌–ಬಿಎಸ್‌ಪಿ ಮೈತ್ರಿ ಮುರಿದು ಬೀಳಲು ಕಾರಣವೇನು?

ಯಾವುದೇ ಮೈತ್ರಿ ನ್ಯಾಯಸಮ್ಮತ ರೀತಿಯಲ್ಲಿ ರಚನೆಯಾಗಬೇಕು. ಎರಡೂ ಪಕ್ಷಗಳಿಗೆ ಇದು ಗೆಲುವಿನ ಸ್ಥಿತಿ ನಿರ್ಮಾಣ ಮಾಡಬೇಕು. ಎರಡೂ ಪಕ್ಷಗಳು ತಮ್ಮ ಶಕ್ತಿ ಏನು ಮತ್ತು ಮತ್ತೊಂದು ಪಕ್ಷದ ಹಿತಾಸಕ್ತಿ ಏನು ಎಂಬುದನ್ನು ಗುರುತಿಸಿದಾಗ ಮಾತ್ರ ಇದು ಸಾಧ್ಯ. ಹಾಗಾಗಿ ಎಲ್ಲರೂ ತಾರ್ಕಿಕವಾಗಿ, ನ್ಯಾಯಬದ್ಧವಾಗಿ ಯೋಚಿಸಿದರೆ ಮಾತ್ರ ಮೈತ್ರಿ ಕಾರ್ಯರೂಪಕ್ಕೆ ಬರುತ್ತದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು