ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ಹಿಡಿಯಲಿರುವ ಬಿಜೆಪಿಯ ‘ಶತ್ರು’?

Last Updated 26 ಮಾರ್ಚ್ 2019, 19:02 IST
ಅಕ್ಷರ ಗಾತ್ರ

ಪಟ್ನಾ:ಬಿಜೆಪಿಯ ಹಾಲಿ ಸಂಸದ ಶತ್ರುಘ್ನ ಸಿನ್ಹಾ ಅವರು ಇದೇ 28ರಂದು ಕಾಂಗ್ರೆಸ್‌ ಸೇರಲಿದ್ದಾರೆ. ಅವರು ಬಿಹಾರದ ಪಟ್ನಾ ಸಾಹಿಬ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್‌ನ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಮಾರ್ಚ್‌ 28ರಂದು ಬೆಳಿಗ್ಗೆ 11.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿನ್ಹಾ ಅವರು ಪಕ್ಷವನ್ನು ಸೇರಲಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.

‘ಆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇರಲಿದ್ದಾರೆಯೇ’ ಎಂದು ಪತ್ರಕರ್ತರು ಪ್ರಶ್ನಿಸಿದ್ದಾರೆ. ಅದಕ್ಕೆ ಸಿಂಗ್ ಅವರು, ‘ಪಕ್ಷದ ಉನ್ನತ ನಾಯಕರು ಕಾರ್ಯಕ್ರಮದಲ್ಲಿ ಇರಲಿದ್ದಾರೆ’ ಎಂದಷ್ಟೇ ಉತ್ತರಿಸಿದ್ದಾರೆ.

ಮೂರು ದಶಕಗಳಿಂದ ಬಿಜೆಪಿ ಜತೆಗಿದ್ದ ಶತ್ರುಘ್ನ ಸಿನ್ಹಾ ಅವರು, ಪಟ್ನಾ ಸಾಹಿಬ್‌ ಕ್ಷೇತ್ರದಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರನ್ನು ಬಿಜೆಪಿಯು ಈ ಬಾರಿ ಪಟ್ನಾ ಸಾಹಿಬ್‌ನಿಂದ ಕಣಕ್ಕೆ ಇಳಿಸುತ್ತಿದೆ. ಸಿನ್ಹಾ ಅವರಿಗೆ ಟಿಕೆಟ್ ನಿರಾಕರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಸಿನ್ಹಾ ಅವರು ಹಲವು ಭಾರಿ ಕಟುವಾಗಿ ಟೀಕಿಸಿದ್ದಾರೆ. ಅವರಿಗೆ ಟಿಕೆಟ್ ನೀಡದಿರಲು ಈ ಟೀಕೆಗಳೇ ಕಾರಣ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

ಬಿಹಾರದಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿಕೂಟ ರಚಿಸಿಕೊಂಡಿವೆ. ಸಿನ್ಹಾ ಅವರನ್ನು ತಮ್ಮ ಪಕ್ಷದ ವತಿಯಿಂದ ಕಣಕ್ಕೆ ಇಳಿಸುವ ಸಂಬಂಧ ಕಾಂಗ್ರೆಸ್ ಮತ್ತು ಆರ್‌ಜೆಡಿ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. ಈಗ ಕಾಂಗ್ರೆಸ್‌ನ ಕೈ ಮೇಲಾದಂತಾಗಿದೆ.

ಕೀರ್ತಿ ಆಜಾದ್ ಸ್ಪರ್ಧೆ:ಬಿಜೆಪಿಯನ್ನು ತ್ಯಜಿಸಿ ಕಾಂಗ್ರೆಸ್‌ ಸೇರಿರುವ ಕೀರ್ತಿ ಆಜಾದ್ ಅವರೂ ಈ ಭಾರಿ ಕಣಕ್ಕೆ ಇಳಿಯಲಿದ್ದಾರೆ ಎಂದುಅಖಿಲೇಶ್ ಪ್ರಸಾದ್ ಸಿಂಗ್ ಮಾಹಿತಿ ನೀಡಿದ್ದಾರೆ. ಆದರೆ ಕೀರ್ತಿ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.

ರಾಹುಲ್ ಪರ ಟ್ವೀಟ್

ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಟೀಕೆ ಮುಂದುವರಿಸಿರುವ ಶತ್ರುಘ್ನ ಸಿನ್ಹಾ ಅವರು, ಕಾಂಗ್ರೆಸ್ ಸೇರುವ ಮುನ್ನವೇ ರಾಹುಲ್ ಗಾಂಧಿ ಪರ ಮಾತು ಆರಂಭಿಸಿದ್ದಾರೆ.

ರಾಹುಲ್ ಗಾಂಧಿ ಅವರ ‘ಕನಿಷ್ಠ ಆದಾಯ ಖಾತರಿ’ ಭರವಸೆಯನ್ನು ಟೀಕಿಸಿರುವ ಬಿಜೆಪಿಯನ್ನು ಶತ್ರುಘ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು ಪ್ರಧಾನಿ ಮೋದಿ ಅವರ ಭರವಸೆಗಳನ್ನು ಲೇವಡಿ ಮಾಡಿದ್ದಾರೆ.

‘ಕನಿಷ್ಠ ಆದಾಯ ಖಾತರಿ ಭರವಸೆ ಘೋಷಣೆಯ ಮೂಲಕ ‘ಸನ್ನಿವೇಶದ ಚತುರ’ ರಾಹುಲ್ ಗಾಂಧಿ ಅವರು ಮಹಾ ಕರಾಮತ್ತು ತೋರಿದ್ದಾರೆ. ಈ ಘೋಷಣೆ ನಮ್ಮ ಜನರಲ್ಲಿ ಎಂತಹ ಸಂಚಲನ ಮೂಡಿಸಿದೆ ಅಂದರೆ, ಕೆಲವು ನಾಯಕರು ಓಡಿ ಹೋಗಿ ಮಾಧ್ಯಮಗೋಷ್ಠಿ ನಡೆಸಿದ್ದಾರೆ. ಇದು ಕಪಟ ಘೋಷಣೆ ಎಂದು ಕರೆದಿದ್ದಾರೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

‘ಪ್ರತಿಯೊಬ್ಬರಿಗೂ ₹ 15 ಲಕ್ಷ, ರೈತರ ಸಾಲಮನ್ನಾ ಮತ್ತು ಸಹಾಯಧನ, ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಯಂತಹ ಹುಸಿ ಭರವಸೆಗಳನ್ನು ಘೋಷಿಸಿದ್ದಿರಿ. ಆ ಘೋಷಣೆಗಳೆಲ್ಲವೂ ಕಪಟವಾಗಿರಲಿಲ್ಲವೇ ಎಂದು ‘ನಮ್ಮ ನಾಯಕ’ರನ್ನು ಪ್ರಶ್ನಿಸಲು ಬಯಸುತ್ತೇನೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಲೇವಡಿ ಮಾಡಿದ್ದಾರೆ.

‘ನೀವು ಮಾಡಿದರೆ ಅದು ‘ರಾಸಲೀಲೆ’, ಇತರರು ಮಾಡಿದರೆ ಅವರದ್ದು ‘ಸಡಿಲ ವ್ಯಕ್ತಿತ್ವ’! ಎಂಕ ಮಾಡಿದ್ದು ಸರಿಯಾಗುವುದಾದರೆ, ನಾಣಿ ಮಾಡಿದ್ದೂ ಸರಿಯೇ ಆಗಬೇಕು. ಈ ಘೋಷಣೆಯನ್ನು ಜನರು ಸ್ವಾಗತಿಸಿದ್ದಾರೆ ಮತ್ತು ಬಹಳ ಉತ್ಸುಕರಾಗಿದ್ದಾರೆ. ಭರವಸೆ ನೀಡಿದ್ದಂತೆ ಮೂರೂ ರಾಜ್ಯಗಳಲ್ಲಿ (ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡ) ರೈತರ ಸಾಲವನ್ನು ಮನ್ನಾ ಮಾಡಲಾಗಿದೆ’ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

‘ಇದು ಒಂದೇ ನಾಣ್ಯದ ಆಟ. ಅದಕ್ಕೇ ರಾಹುಲ್ ಅವರನ್ನು ‘ಸನ್ನಿವೇಶದ ಚತುರ’ ಎಂದದ್ದು’ ಎಂದು ಅವರು ಟ್ವೀಟ್‌ಗಳ ಸರಣಿಯನ್ನು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT