ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾಹಿತ ಪ್ರೇಯಸಿಗಾಗಿ 71 ಕುರಿ ಕೊಟ್ಟ ಪ್ರಿಯಕರ

ಉತ್ತರ ಪ್ರದೇಶದಲ್ಲಿ ಪಂಚಾಯಿತಿ ವಿಲಕ್ಷಣ ಆದೇಶ; ಠಾಣೆ ಮೆಟ್ಟಿಲೇರಿದ ಪ್ರಕರಣ
Last Updated 18 ಆಗಸ್ಟ್ 2019, 3:04 IST
ಅಕ್ಷರ ಗಾತ್ರ

ಲಖನೌ: ವಿಲಕ್ಷಣ ನಿರ್ಧಾರಗಳಿಗಾಗಿ ಉತ್ತರ ಪ್ರದೇಶದ ಪಂಚಾಯತ್‌ಗಳು ಸುದ್ದಿಗೆ ಗ್ರಾಸವಾಗುವುದು ಹೊಸತಲ್ಲ. ಈಗ ಅಂಥದೇ ಒಂದು ಆದೇಶ ಗೋರಖ್‌ಪುರ ಜಿಲ್ಲೆಯ ಬೈಲೊ ಗ್ರಾಮದಿಂದ ಹೊರಬಿದ್ದಿದೆ.

ಉತ್ತರ ಪ್ರದೇಶದಲ್ಲಿ ಗ್ರಾಮ ಪಂಚಾಯತ್‌ಗಳು ಆಗಾಗ್ಗೆ ಕೌಟುಂಬಿಕ ಮತ್ತು ವೈವಾಹಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ರಾಜಿಸಂಧಾನವನ್ನು ನಡೆಸಿ ಆದೇಶವನ್ನು ನೀಡುತ್ತವೆ.

ಪ್ರೇಯಸಿಯ ಪತಿಗೆ 71 ಕುರಿಗಳನ್ನು ನೀಡಲು ವ್ಯಕ್ತಿ ಒಪ್ಪಿಕೊಂಡಿದ್ದಾನೆ. ಇದಕ್ಕೆ ಪ್ರತಿಯಾಗಿ ವ್ಯಕ್ತಿಯೊಂದಿಗೆ ಜೀವಿಸಲು ವಿವಾಹಿತೆಗೆ ಪಂಚಾಯಿತಿಯು ಅನುಮತಿಯನ್ನು ನೀಡಿದೆ.

ವರದಿಗಳ ಪ್ರಕಾರ, ವಿವಾಹಿತೆ ತನ್ನ ಪ್ರಿಯಕರನೊಂದಿಗೆ ಕಳೆದ ತಿಂಗಳು ನಾಪತ್ತೆಯಾಗಿದ್ದರು. ಈ ಬಗ್ಗೆ ಪತಿ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಜೋಡಿಯು ಕೋರಬರ್ ಠಾಣೆಗೆ ಬಂದಿದ್ದು, ಅಲ್ಲಿ ವಿವಾಹಿತೆ ತಾನು ಗಂಡನ ಜೊತೆಗೆ ಹೋಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು.

ಈ ಬಗ್ಗೆ ಸಂಧಾನ ನಡೆಸಲು ಪಂಚಾ ಯಿತಿ ಸೇರಿತ್ತು. ಅಲ್ಲಿ, ಪ್ರಿಯಕರ ತಾನು ಸಾಕಿರುವ ಕುರಿಗಳಲ್ಲಿ ಅರ್ಧದಷ್ಟನ್ನು ಕೊಡಲೊಪ್ಪಿದರೆ ವಿವಾಹಿತೆಯನ್ನು ಇರಿಸಿಕೊಳ್ಳಬಹುದು ಎಂದು ತೀರ್ಮಾನ ವಾಯಿತು. ಇದಕ್ಕೆ ಪ್ರಿಯಕರ ತಕ್ಷಣವೇ ಒಪ್ಪಿಕೊಂಡ. ಪ್ರೇಯಸಿಯ ಪತಿಗೆ 71 ಕುರಿಗಳನ್ನೂ ಒಪ್ಪಿಸಿದ. ಅಲ್ಲಿಗೆ ಇಡೀ ಪ್ರಕರಣ ‘ಸುಖಾಂತ್ಯ’ವಾಗಿದ್ದು, ಜೋಡಿ ಒಟ್ಟಿಗೆ ಜೀವನ ಮುಂದುವರಿಸಿದ್ದರು.

ಕುರಿ ಕಳ್ಳತನ: ಆದರೆ, ಪ್ರಿಯಕರನ ತಂದೆ ಪೊಲೀಸ್ ಠಾಣೆಯ ಮೆಟ್ಟಿಲೇ ರಿದ್ದು, ಪ್ರಕರಣಕ್ಕೆ ಬೇರೆಯದೇ ತಿರುವು ನೀಡಿತು.

‘ವಿವಾಹಿತೆಯ ಪತಿ ನನ್ನ 71 ಕುರಿ ಗಳನ್ನು ಕದ್ದಿದ್ದಾರೆ’ ಎಂದು ಅವರು ದೂರು ದಾಖಲಿಸಿದ್ದರು. ‘ನಿಮ್ಮ ಮಗನೇ ಅವುಗಳನ್ನು ನೀಡಿದ್ದಾರೆ’ ಎಂದು ತಿಳಿಸಿದರೂ ಒಪ್ಪಲು ಸಿದ್ಧರಿರಲಿಲ್ಲ.

‘ಕುರಿಗಳನ್ನು ನಾನು ಸಾಕಿದ್ದೇನೆ. ಮಾಲೀಕ ನಾನು. ಮಗನಿಗೆ ಅವುಗಳ ಮೇಲೆ ಹಕ್ಕಿಲ್ಲ’ ಎಂದು ಪ್ರಿಯಕರನ ತಂದೆಯ ವಾದ. ‘ಮಗನಾಗಿ ನನಗೂ ಕುರಿಗಳ ಮೇಲೆ ಹಕ್ಕಿದೆ’ ಎಂಬುದು ಪ್ರಿಯಕರನ ಪ್ರತಿವಾದ.

ಸದ್ಯ, ಈ ಸಮಸ್ಯೆಯನ್ನು ಬಗೆಹರಿಸ ಬೇಕಾದ ಹೊಣೆಗಾರಿಕೆ ಪೊಲೀಸರ ಹೆಗಲೇರಿದೆ. ಹೇಗೆ ಬಗೆಹರಿಸ ಬೇಕೋ ತಿಳಿಯುತ್ತಿಲ್ಲ. ಮೇಲಧಿಕಾರಿಗಳ ಸಲಹೆ ಕೇಳುತ್ತೇವೆ’ ಎನ್ನುತ್ತಾರೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT