ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡ ನಿಯಂತ್ರಣಕ್ಕೆ ಪರ್ವತಾಸನ

Last Updated 26 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ತುಂಬ ಸಮಯ ಕಚೇರಿಯಲ್ಲಿ ಕೆಲಸ ನಿರ್ವಹಿಸುವವರಿಗೆ ಕೆಲವೊಮ್ಮೆ ಮನಸ್ಸಿಗೆ ಒತ್ತಡವಾಗುತ್ತದೆ. ಅಂತಹ ಒತ್ತಡ ನಿವಾರಿಸಲು ವಜ್ರಾಸನದಲ್ಲಿ ಪರ್ವತಾಸನ ಸಹಕಾರಿಯಾಗಿದೆ. ಈ ಆಸನದಲ್ಲಿ ಕೈಗಳನ್ನು ಶಿರಸ್ಸಿನ ಮೇಲಕ್ಕೆ ಹಾಗೂ ಕೆಳಕ್ಕೆ ತರುವಾಗ ಮನಸ್ಸಿಗೆ ಹಾಯೆನಿಸಿ, ಹಿತವಾದ ಅನುಭವವಾಗುತ್ತದೆ.

ಅಭ್ಯಾಸ ಕ್ರಮ: ಜಮಖಾನ ಹಾಸಿದ ನೆಲದ ಮೇಲೆ ಎರಡೂ ಕಾಲುಗಳನ್ನು ಹಿಂದಕ್ಕೆ ಮಡಚಿ ಕುಳಿತುಕೊಳ್ಳಬೇಕು. ಪಾದಗಳು ಮೇಲ್ಮುಖವಾಗಿ ಇರಬೇಕು. ಕಾಲಿನ ಹೆಬ್ಬೆರಳು ಒಂದಕ್ಕೊಂದು ತಗಲುವಂತಿರಬೇಕು. ಕೈಗಳನ್ನು ನೇರವಾಗಿ ಚಾಚಿ ಆಯಾ ಮಂಡಿಗಳ ಮೇಲೆ ಇರಿಸಬೇಕು. ಬೆನ್ನು, ಕುತ್ತಿಗೆ, ಶಿರಸ್ಸು ನೇರವಾಗಿರಬೇಕು. ಇದೀಗ ವಜ್ರಾಸನ ಭಂಗಿಯಾಗಿದೆ.

ವಜ್ರಾಸನ ಅಭ್ಯಾಸ ಆದ ಮೇಲೆ ಪರಸ್ಪರ ಬೆರಳುಗಳನ್ನು ಹೆಣೆದುಕೊಂಡು ಎರಡು ಕೈಗಳನ್ನು ಶಿರಸ್ಸಿನ ಮೇಲೆ ತರಬೇಕು. ಇದು ವಜ್ರಾಸನ ವಿನ್ಯಾಸ ಭಂಗಿ ಆಗಿದೆ. ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸುತ್ತಾ ಉಸಿರನ್ನು ಬಿಡುತ್ತಾ ನಿಧಾನವಾಗಿ ಕೈಗಳನ್ನು ಕೆಳಕ್ಕೆ ತರಬೆಕು. ಈ ರೀತಿ ಸುಮಾರು ಆರರಿಂದ ಒಂಬತ್ತು ಬಾರಿ ಅಭ್ಯಾಸ ನಡೆಸಿರಿ. ಅನಂತರ ಸ್ವಲ್ಪ ಹೊತ್ತು ಶವಾಸನ ಅಭ್ಯಾಸ ಮಾಡಿರಿ.

ಉಪಯೋಗಗಳು: ವಜ್ರಾಸನದಲ್ಲಿ ಪರ್ವತಾಸನ ಮಾಡುವುದರಿಂದ ಒತ್ತಡ ನಿಯಂತ್ರಣವಾಗುತ್ತದೆ. ಕಶೇರುಕಗಳ ಮಾಂಸಖಂಡಗಳು ದೃಢಗೊಳ್ಳುತ್ತವೆ ಹಾಗೂ ಶಕ್ತಿಯುತವಾಗುತ್ತವೆ. ಭುಜ, ಕುತ್ತಿಗೆ, ಹೆಗಲು ನೋವು ನಿಯಂತ್ರಣಕ್ಕೆ ಬರುತ್ತದೆ. ಮೊಣಕಾಲು ನೋವು, ಪಾದಗಳ ಗಂಟಿನ ನೋವು, ಕಾಲುಗಳ ಸೆಳೆತ ಮೊದಲಾದ ಸಮಸ್ಯೆಗಳು ನಿವಾರಣೆಯಾಗುತ್ತವೆ.

ವಜ್ರಾಸನದಲ್ಲಿ ಕುಳಿತುಕೊಂಡಾಗ ಬೆನ್ನು ನೇರವಾಗುವುದಲ್ಲದೆ ಬೆನ್ನು ನೋವು, ಸೆಳೆತ ಕೂಡ ಕಡಿಮೆಯಾಗುತ್ತದೆ. ಪ್ರಾಣಾಯಾಮ ಮತ್ತು ಧ್ಯಾನ ಮಾಡಲು ಈ ಆಸನವು ಬಹಳ ಉಪಯುಕ್ತವಾಗಿದೆ. ಉಸಿರಾಟ ಕ್ರಿಯೆ ನಿರಾಯಾಸವಾಗಿ ನಡೆಯುತ್ತದೆ. ಹೆಗಲುಗಳು ಬಲಿಷ್ಟಗೊಳ್ಳುತ್ತವೆ. ದೇಹವನ್ನು ವಜ್ರದಂತೆ ಕಾಪಾಡುವ ಆಸನವೇ ವಜ್ರಾಸನ.

ವಿಶೇಷ ಸೂಚನೆ: ತೀವ್ರ ಮಂಡಿನೋವು ಅಥವಾ ಗಾಯಗಳಿದ್ದರೆ ಈ ಆಸನ ಅಭ್ಯಾಸ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT