ಚುನಾವಣೆಗೆ ಮೊದಲು ಇನ್ನಷ್ಟು ಊರುಗಳ ಹೆಸರು ಬದಲು

7

ಚುನಾವಣೆಗೆ ಮೊದಲು ಇನ್ನಷ್ಟು ಊರುಗಳ ಹೆಸರು ಬದಲು

Published:
Updated:
Deccan Herald

ಮುಂಬೈ: ಗುಜರಾತ್ ಮುಖ್ಯಮಂತ್ರಿ ವಿಜಯ್‌ ರುಪಾಣಿ ಅಹಮದಾಬಾದ್‌ ನಗರದ ಹೆಸರನ್ನು ಕರ್ಣವತಿ ಎಂದು ಬದಲಿಸುವುದಾಗಿ ಘೋಷಿಸಿದ ನಂತರ ಮಹಾರಾಷ್ಟ್ರದ ಔರಂಗಾಬಾದ್ ಮತ್ತು ಉಸ್ಮಾನಾಬಾದ್‌ ನಗರಗಳ ಹೆಸರು ಬದಲಿಸಬೇಕು ಎನ್ನುವ ಬಹುದಿನಗಳ ಒತ್ತಾಯಕ್ಕೆ ಹೊಸ ಬಲ ಬಂದಂತೆ ಆಗಿದೆ. ಈ ಎರಡೂ ನಗರಗಳ ಹೆಸರನ್ನು ಕ್ರಮವಾಗಿ ಸಂಭಾಜಿನಗರ್ ಮತ್ತು ಧಾರಾಶಿವ್ ಎಂದು ಬದಲಿಸಬೇಕೆಂದು ಶಿವಸೇನೆ ಆಗ್ರಹಿಸಿದೆ.

ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ಅಲಹಾಬಾದ್‌ ನಗರದ ಹೆಸರನ್ನು ಪ್ರಯಾಗ್‌ರಾಜ್ ಮತ್ತು ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯಾ ಜಿಲ್ಲೆ ಮರು ನಾಮಕರಣ ಮಾಡಿದ ನಂತರ ರುಪಾಣಿ ಅವರ ನಿರ್ಧಾರ ಹೊರಬಿದ್ದಿದೆ. ದೇಶದ ವಿವಿಧೆಡೆ ನಗರ ಮತ್ತು ಪಟ್ಟಣಗಳ ಹೆಸರು ಬದಲಿಸುವ ನಿರ್ಧಾರ ಮತ್ತು ಒತ್ತಾಯಗಳು ಒಂದಾದ ಮೇಲೆ ಒಂದರಂತೆ ಬಹಿರಂಗಗೊಳ್ಳುತ್ತಿವೆ.

ಹಿಮಾಚಲ ಪ್ರದೇಶದ ಬಿಜೆಪಿ ಸರ್ಕಾರವು ಕಳೆದ ತಿಂಗಳು ಶಿಮ್ಲಾ ನಗರದ ಹೆಸರನ್ನು ಶ್ಯಾಮಲಾ ಎಂದು ಬದಲಿಸಲು ಮುಂದಾಗಿತ್ತು. ಆದರೆ ನಗರವಾಸಿಗಳ ಪ್ರತಿಭಟನೆ ನಂತರ ತನ್ನ ಆಲೋಚನೆಯನ್ನು ಹಿಂಪಡೆಯಿತು.

ಅಹಮದಾಬಾದ್‌ ಹೆಸರು ಬದಲಾವಣೆ ನಿರ್ಧಾರಕ್ಕೆ ಕಾರಣವಾದ ಅಂಶವನ್ನು ವಿವರಿಸಿದ ಗುಜರಾತ್‌ನ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್, ‘ಅಹಮದಾಬಾದ್ ಎನ್ನುವುದು ಗುಲಾಮತನದ ಸಂಕೇತ. ಕರ್ಣವತಿ ಎನ್ನುವುದು ಸ್ವಾಭಿಮಾನ, ಹೆಮ್ಮೆ, ಸಂಸ್ಕೃತಿ ಮತ್ತು ಸ್ವಾತಂತ್ರ್ಯದ ಸಂಕೇತ’ ಎಂದು ವ್ಯಾಖ್ಯಾನಿಸಿದ್ದರು. ಗುಜರಾತ್ ಸರ್ಕಾರದ ನಿರ್ಧಾರ ಹೊರಬಿದ್ದ ನಂತರ ಮಹಾರಾಷ್ಟ್ರದಲ್ಲಿ ಹೆಸರು ಬದಲಾವಣೆಗೆ ಒತ್ತಾಯ ಹೆಚ್ಚುತ್ತಿದೆ.

‘ಔರಂಗಾಬಾದ್ ಮತ್ತು ಉಸ್ಮಾನಾಬಾದ್ ಹೆಸರುಗಳನ್ನು ಎಂದು ಬದಲಿಸುತ್ತೀರಿ ಮುಖ್ಯಮಂತ್ರಿಗಳೇ’ ಎಂದು ಶಿವಸೇನೆಯ ಸಂಸದ ಸಂಜಯ್ ರೌತ್‌ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದರು. ತಮ್ಮ ಟ್ವಿಟ್‌ನಲ್ಲಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಲಹಾಬಾದ್ ಮತ್ತು ಫೈಜಾಬಾದ್ ನಗರಗಳ ಹೆಸರು ಬದಲಿಸಿದ ವಿಚಾರವನ್ನು ಪ್ರಸ್ತಾಪಿಸಿದ್ದರು.

ಔರಂಗಾಬಾದ್ ಹೆಸರು ಬದಲಿಸಬೇಕು ಎನ್ನುವ ಬೇಡಿಕೆಯನ್ನು ಮೊದಲ ಬಾರಿ ಮಂಡಿಸಿದವರು ಶಿವಸೇನೆಯ ಸ್ಥಾಪಕ ಬಾಳ್ ಠಾಕ್ರೆ. ಔರಂಗಾಬಾದ್‌ನಲ್ಲಿ 1998ರಲ್ಲಿ ಕೋಮುಗಲಭೆ ನಡೆದ ಸಂದರ್ಭ ಪಟ್ಟಣಕ್ಕೆ ಭೇಟಿ ನೀಡಿದ್ದ ಬಾಳ್ ಠಾಕ್ರೆ ಹೆಸರು ಬದಲಿಸುವ ಪ್ರಸ್ತಾವ ಮುಂದಿಟ್ಟಿದ್ದರು. ಔರಂಗಾಬಾದ್ ನಗರಸಭೆ ಹೆಸರು ಬದಲಾವಣೆ ಪ್ರಸ್ತಾವವನ್ನು ಅಂಗೀಕರಿಸಿ ಎರಡು ಬಾರಿ ರಾಜ್ಯ ಸರ್ಕಾರಕ್ಕೆ ಕಳಿಸಿತ್ತು. ಅದನ್ನು ರಾಜ್ಯ ಸರ್ಕಾರ ಒಪ್ಪಿರಲಿಲ್ಲ.

ಔರಂಗಾಬಾದ್ ಪಟ್ಟಣವವನ್ನು ಮೊದಲು ಖಡ್ಕಿ ಎಂದು ಕರೆಯುತ್ತಿದ್ದರು. 17ನೇ ಶತಮಾನದಲ್ಲಿ ಮೊಘಲ್ ಸಾಮ್ರಾಟ ಔರಂಗಾಜೇಬ್ ನೆನಪಿನಲ್ಲಿ ಈ ಪಟ್ಟಣದ ಹೆಸರನ್ನು ಔರಂಗಾಬಾದ್ ಎಂದು ಬದಲಿಸಲಾಯಿತು. ಹೈದರಾಬಾದ್‌ ನಿಜಾಮ ಮೀರ್‌ ಉಸ್ಮಾನ್ ಅಲಿ ನೆನಪಿಗೆ  ಉಸ್ಮಾನಾಬಾದ್ ಹೆಸರು ಬಂತು.

ಹೆಸರು ಬದಲಿಸುವ ರಾಜಕಾರಣ ಸಲ್ಲದು

‘ನಗರಗಳ ಹೆಸರು ಬದಲಿಸುವ ಮೂಲಕ ಬಿಜೆಪಿ ಕೆಟ್ಟ ರಾಜಕಾರಣ ಮಾಡುತ್ತಿದೆ. ಇತಿಹಾಸದ ಆಧಾರದಲ್ಲಿಯೇ ಎಲ್ಲ ನಗರಗಳಿಗೂ ಹೆಸರು ಇಡಬೇಕು ಎಂದಾದರೆ ಅಹಮದಾಬಾದ್‌ಗೆ ಅಶ್ವಪಲಿ ಎನ್ನುವ ಹೆಸರು ಇಡಬೇಕಾಗುತ್ತದೆ. ಬುಡಕಟ್ಟು ನಾಯಕ ಅಶ್ವಭಿಲ್ಲ ಈ ನಗರವನ್ನು ಮೊದಲು ಆಳಿದ್ದ. ಅವನನ್ನು ಸೋಲಿಸಿದ ನಂತರ ಕರ್ಣದೇವ ಕರ್ಣವತಿ ನಗರ ಸ್ಥಾಪಿಸಿದ್ದ’ ಎಂದು ಗುಜರಾತ್‌ನ ಇತಿಹಾಸಕಾರ ಹರಿ ದೇಸಾಯಿ ವಿಶ್ಲೇಷಿಸುತ್ತಾರೆ.

‘ಕೇವಲ ಒಂದು ವರ್ಷದ ಹಿಂದೆಯಷ್ಟೇ ರಾಜ್ಯ ಸರ್ಕಾರವು ಯುನೆಸ್ಕೊಗೆ ಕಳಿಸಿರುವ 500 ಪುಟಗಳ ವರದಿಯಲ್ಲಿ ಅಹಮದಾಬಾದ್ ನಗರವನ್ನು 1411ರಲ್ಲಿ ಅಹ್ಮದ್‌ ಸ್ಥಾಪಿಸಿದ್ದ ಎಂಬ ಉಲ್ಲೇಖವಿದೆ. ಭಾರತದ ಮೊದಲ ಪಾರಂಪರಿಕ ನಗರ ಎನ್ನುವ ಶ್ರೇಯಕ್ಕೂ ಅಹಮದಾಬಾದ್ ಪಾತ್ರವಾಗಿದೆ. ಕೇವಲ ಒಂದೇ ವರ್ಷದಲ್ಲಿ ರಾಜ್ಯ ಸರ್ಕಾರ ಹೆಸರು ಬದಲಿಸಲು ಗುಜರಾತ್ ಸರ್ಕಾರ ಮುಂದಾಗಿದೆ’ ಎಂದು ಅವರು ಟೀಕಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 3

  Sad
 • 1

  Frustrated
 • 4

  Angry

Comments:

0 comments

Write the first review for this !