ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರಕ್ಕಾಗಿ ಸುಗ್ರೀವಾಜ್ಞೆ ಜಾರಿಗೆ ತರಲು ಶಿವಸೇನೆ ಒತ್ತಾಯ

Last Updated 16 ಜೂನ್ 2019, 8:38 IST
ಅಕ್ಷರ ಗಾತ್ರ

ಅಯೋಧ್ಯೆ: ‘ರಾಮ ಮಂದಿರ ನಿರ್ಮಾಣ ಉದ್ದೇಶಕ್ಕಾಗಿ ಸುಗ್ರೀವಾಜ್ಞೆ ಜಾರಿಗೆತರಬೇಕು ಎಂಬುದನ್ನು ನಮ್ಮ ಪಕ್ಷ ಹಿಂದಿನಿಂದಲೂ ಪ್ರತಿಪಾದಿಸುತ್ತಿದೆ. ಈ ವಿಚಾರದಲ್ಲಿ ಮೋದಿ ಸರ್ಕಾರವನ್ನು ತಡೆಯಲು ಈಗ ಯಾರಿಂದಲೂ ಸಾಧ್ಯವಿಲ್ಲ. ಶೀಘ್ರವೇ ಮಂದಿರ ನಿರ್ಮಾಣವಾಗುವ ವಿಶ್ವಾಸ ನಮಗಿದೆ,’ ಎಂದು ಶಿವಸೇನೆಯ ಮುಖ್ಯಸ್ಥ ಉದ್ದವ್‌ ಠಾಕ್ರೆ ಹೇಳಿದ್ದಾರೆ.

ಉದ್ದವ್‌ ಠಾಕ್ರೆ ಮತ್ತು ಪುತ್ರ ಆದಿತ್ಯ ಠಾಕ್ರೆ ಅವರು ಇಂದು ಅಯೋಧ್ಯೆಯ ರಾಮ ಲಲ್ಲಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅಯೋಧ್ಯೆಗೆ ಆಗಮಿಸಿದ ಅವರನ್ನು ಕೇಂದ್ರ ಸಚಿವ ಅರವಿಂದ ಸಾವಂತ್‌ ಮತ್ತು ಶಿವಸೇನೆಯ ವಕ್ತಾರ ಸಂಜಯ್‌ ರಾವತ್‌ ಸ್ವಾಗತಿಸಿದರು.

ಪ್ರಾರ್ಥನೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಉದ್ದವ್‌ ಠಾಕ್ರೆ, ‘ಸುಗ್ರೀವಾಜ್ಞೆ ತರಬೇಕು ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ. ಈ ಬಾರಿ ರಾಮ ಮಂದಿರ ನಿರ್ಮಾಣವಾಗಲಿದೆ ಎಂಬ ವಿಶ್ವಾಸ ನನಗಿದೆ. ಈಗ ಮೋದಿ ಸರ್ಕಾರಕ್ಕೆ ಬಲಿಷ್ಠವಾದ ಬಹುಮತವಿದೆ. ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಪ್ರಧಾನಿ ಮೋದಿ ನಿರ್ಧಾರ ಕೈಗೊಂಡರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಭಾರತದ ಹಿಂದೂಗಳು ಮತ್ತು ಜಗತ್ತು ಇಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಬಯಸುತ್ತಿದೆ,’ ಎಂದು ಹೇಳಿದರು.

‘ನಾಳೆಯಿಂದ ಲೋಕಸಭೆ ಅಧಿವೇಶನ ಆರಂಭವಾಗಲಿದೆ. ಸಂಸತ್‌ ಪ್ರವೇಶಿಸುವುದಕ್ಕೂ ಮೊದಲು ಶಿವ ಸೇನೆಯ ಎಲ್ಲ ಸಂಸದರೂ, ಅಯೋಧ್ಯೆಗೆ ಬಂದು ರಾಮನ ಆಶೀರ್ವಾದ ಪಡೆಯಬೇಕು. ಆದಷ್ಟು ಬೇಗ ರಾಮ ಮಂದಿರ ನಿರ್ಮಾಣವಾಲಿದೆ ಎಂದು ನಾವು ನಂಬಿದ್ದೇವೆ,’ ಎಂದರು.

ಕಳೆದ ವರ್ಷ ನವೆಂಬರ್‌ನಲ್ಲಿ ಆಯೋಧ್ಯೆಗೆ ಆಗಮಿಸಿದ್ದ ಉದ್ದವ್‌ ಠಾಕ್ರೆ ರಾಮ ಮಂದಿರಕ್ಕಾಗಿ ಸುಗ್ರೀವಾಜ್ಞೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದರು. ಅಲ್ಲದೆ, ಚುನಾವಣೆ ನಂತರ ಮರಳಿ ಅಯೋಧ್ಯೆಗೆ ಬರುವುದಾಗಿ ಹೇಳಿದ್ದ ಅವರು, ಅದರಂತೆ ಭಾನುವಾರ ರಾಮ ಲಲ್ಲಾಕ್ಕೆ ಬಂದು ಪೂಜೆ ಸಲ್ಲಿಸಿದರು. ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಕಳೆದ ವರ್ಷ ನವೆಂಬರ್‌ನಲ್ಲಿ ಅಯೋಧ್ಯೆಯಲ್ಲಿ ವಿಶ್ವ ಹಿಂದೂ ಪರಿಷತ್‌ ವತಿಯಿಂದ ಬೃಹತ್‌ ಸಮಾವೇಶವೇ ನಡೆದಿತ್ತು. ಆಗಲೂ ಸುಗ್ರೀವಾಜ್ಞೆಗೆ ಒತ್ತಾಯಗಳು ಕೇಳಿ ಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT