ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಪಾಲರನ್ನು ಭೇಟಿಮಾಡಿದ ನಾಯಕರು

ಬಿಜೆಪಿ ವಿರುದ್ಧ ಶಿವಸೇನಾ ಮತ್ತೆ ಟೀಕಾಸ್ತ್ರ
Last Updated 28 ಅಕ್ಟೋಬರ್ 2019, 20:02 IST
ಅಕ್ಷರ ಗಾತ್ರ

ಮುಂಬೈ: ಅಧಿಕಾರ ಹಂಚಿಕೆ ವಿಚಾರದಲ್ಲಿ ಅಂತಿಮ ತೀರ್ಮಾನಕ್ಕೆ ಬರುವಲ್ಲಿ ಬಿಜೆಪಿ– ಶಿವಸೇನಾ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ. ಇದರ ಮಧ್ಯದಲ್ಲೇ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹಾಗೂ ಶಿವಸೇನಾ ಮುಖಂಡ ದಿವಾಕರ ರಾವತೆ ಅವರು ಸೋಮವಾರ ಪ್ರತ್ಯೇಕವಾಗಿ ರಾಜ್ಯಪಾಲ ಭಗತ್‌ಸಿಂಗ್‌ ಕೊಶಿಯಾರಿ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದರು.

ಇಬ್ಬರು ನಾಯಕರು ರಾಜ್ಯದಲ್ಲಿ ಸರ್ಕಾರ ರಚನೆಯ ಬಗ್ಗೆ ರಾಜ್ಯಪಾಲರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾ
ಗಿದ್ದು, ಮಾತುಕತೆಯ ವಿವರಗಳು ಲಭ್ಯವಾಗಿಲ್ಲ. ‘ಅದು ಸೌಹಾರ್ದ ಭೇಟಿಯಾಗಿತ್ತು’ ಎಂದು ರಾಜಭವನದ ವಕ್ತಾರರು ತಿಳಿಸಿದರು.

ರಾಜ್ಯಪಾಲರ ಭೇಟಿಯ ಬಳಿಕ ಟ್ವೀಟ್‌ ಮಾಡಿರುವ ಫಡಣವೀಸ್‌, ‘ರಾಜ್ಯಪಾಲರಿಗೆ ಶುಭಾಶಯ ತಿಳಿಸಿದ್ದೇನೆ, ಜೊತೆಗೆ ರಾಜ್ಯದ ರಾಜಕೀಯದ ಸ್ಥಿತಿಯನ್ನೂ ಗಮನಕ್ಕೆ ತಂದಿದ್ದೇನೆ’ ಎಂದಿದ್ದಾರೆ.

‘ಸಾಮ್ನಾ’ ಮೂಲಕ ಮೋದಿ–ಬಿಜೆಪಿ ಟೀಕೆ: 50:50ರ ಅನುಪಾತದಲ್ಲಿ ಅಧಿಕಾರ ಹಂಚಿಕೆಗಾಗಿ ಪಟ್ಟುಹಿಡಿದಿ
ರುವ ಶಿವಸೇನಾ, ಮತ್ತೊಮ್ಮೆ ಬಿಜೆಪಿ ಹಾಗೂ ಪ್ರಧಾನಿ ಮೋದಿಯ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದೆ.

ಶಿವಸೇನಾದ ಮುಖವಾಣಿ ‘ಸಾಮ್ನಾ’ ಹಾಗೂ ಅದರ ಹಿಂದಿ ಆವೃತ್ತಿ ‘ದೊಪಹರ್‌ ಕಾ ಸಾಮ್ನಾ’ ಪತ್ರಿಕೆಗಳ ಸಂಪಾದಕೀಯದಲ್ಲಿ ಕೇಂದ್ರವನ್ನು ಟೀಕೆಗೆ ಒಳಪಡಿಸಿರುವ ಶಿವಸೇನಾ, ಪ್ರಸಿದ್ಧ ಹಿಂದಿ ಸಿನಿಮಾ ‘ಶೋಲೆ’ಯಲ್ಲಿ ಬರುವ ‘ಇತನಾ ಸನ್ನಾಟ ಕ್ಯೋಂ ಹೈ ಭಾಯ್‌’ (ಇಷ್ಟೊಂದು ನೀರವತೆ ಯಾಕೆ) ಎಂದು ಬಿಜೆಪಿಯನ್ನು ಚುಚ್ಚಿದೆ.

‘ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವುದಾಗಿ ಕೇಂದ್ರ ಹೇಳಿದೆ. ಆದರೆ, ಒಂದಿಲ್ಲೊಂದು ಪ್ರಕೃತಿ ವಿಕೋಪ ರೈತರನ್ನು ಬಾಧಿಸುತ್ತಲೇ ಇದೆ. ನೋಟು ರದ್ದತಿ, ಜಿಎಸ್‌ಟಿ ಮುಂತಾದ ಕ್ರಮಗಳಿಂದಾಗಿ ಭಾರತದ ಆರ್ಥಿಕತೆ ಕುಸಿತದ ಹಾದಿಯಲ್ಲಿದೆ. ಹೊಸ ಕಂಪನಿಗಳು ನಷ್ಟ ಅನುಭವಿಸುತ್ತಿವೆ, ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಬ್ಯಾಂಕ್‌ಗಳು ದಿವಾಳಿಯಾಗುತ್ತಿವೆ...’ ಎಂದು ಸಾಮ್ನಾದ ಸಂಪಾದಕೀಯದಲ್ಲಿ ಟೀಕಿಸಲಾಗಿದೆ.ಇನ್ನೊಂದೆಡೆ, ಟಿವಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಶಿವಸೇನಾ ಮುಖಂಡ ಸಂಜಯ್‌ ರಾವತ್‌, ‘ರಾಜಕೀಯದಲ್ಲಿ ಯಾರೂ ಸಂತರಲ್ಲ. ಪರ್ಯಾಯ ಸಾಧ್ಯತೆಯ ಬಗ್ಗೆ ಚಿಂತನೆ ಮಾಡುವ ಅನಿವಾರ್ಯತೆಗೆ ಬಿಜೆಪಿ ನಮ್ಮನ್ನು ತಳ್ಳಬಾರದು’ ಎಂಬ ಎಚ್ಚರಿಕೆ ನೀಡಿದ್ದಾರೆ.

ಅಮಿತ್‌ ಶಾ ಭೇಟಿ?

ದೀಪಾವಳಿ ಹಬ್ಬದ ನಂತರವೇ ಸರ್ಕಾರ ರಚನೆಯ ಪ್ರಕ್ರಿಯೆ ಆರಂಭಿಸಲು ಬಿಜೆಪಿ– ಶಿವಸೇನಾ ತೀರ್ಮಾನಿಸಿದ್ದವು. ಆದ್ದರಿಂದ ಒಂದೆರಡು ದಿನಗಳಲ್ಲೇ ಬಿಜೆಪಿ ಅಧ್ಯಕ್ಷ, ಕೇಂದ್ರದ ಗೃಹಸಚಿವ ಅಮಿತ್‌ ಶಾ ಅವರು ಮಹಾರಾಷ್ಟ್ರಕ್ಕೆ ಭೇಟಿನೀಡಿ ಮುಖಂಡ
ರೊಡನೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಪ್ರಸಕ್ತ ಎರಡೂ ಪಕ್ಷ
ಗಳು ಪಕ್ಷೇತರ ಹಾಗೂ ಸಣ್ಣ ಪಕ್ಷಗಳ ಶಾಸಕರನ್ನು ತಮ್ಮತ್ತ ಸೆಳೆದು ಶಕ್ತಿ ವೃದ್ಧಿಸುವ ಪ್ರಯತ್ನದಲ್ಲಿ ತೊಡಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT