ಬೂಟಿನಿಂದ ಹೊಡೆದಿದ್ದ ಬಿಜೆಪಿ ಸಂಸದನಿಗೆ ಟಿಕೆಟ್ ನಿರಾಕರಣೆ

ಗುರುವಾರ , ಏಪ್ರಿಲ್ 25, 2019
26 °C

ಬೂಟಿನಿಂದ ಹೊಡೆದಿದ್ದ ಬಿಜೆಪಿ ಸಂಸದನಿಗೆ ಟಿಕೆಟ್ ನಿರಾಕರಣೆ

Published:
Updated:
Prajavani

ಲಖನೌ: ಅಧಿಕೃತ ಸಭೆಯಲ್ಲಿ ಶಾಸಕರಿಗೆ ಶೂನಿಂದ ಹೊಡೆದಿದ್ದ ಸಂತ ಕಬೀರ್ ನಗರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಶರದ್ ತ್ರಿಪಾಠಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. 

ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ತಮ್ಮ ಹೆಸರಿಲ್ಲ ಎಂದು ಆಕ್ಷೇಪಿಸಿದ್ದ ತ್ರಿಪಾಠಿ, ಶಾಸಕ ರಾಕೇಶ್ ಬಘೆಲ್ ಅವರಿಗೆ ಎಲ್ಲರೆದುರೇ ಬೂಟಿನಿಂದ ಬಾರಿಸಿದ್ದರು.

ತ್ರಿಪಾಠಿ ಅವರಿಗೆ ಮತ್ತೆ ಟಿಕೆಟ್ ನೀಡುವುದನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. 

ತ್ರಿಪಾಠಿ ಅವರನ್ನು ಕೈಬಿಟ್ಟರೆ ಬ್ರಾಹ್ಮಣ ಸಮುದಾಯದ ವಿರೋಧ ಒಂದು ಕಡೆ; ಟಿಕೆಟ್ ನೀಡಿದರೆ ಪ್ರಬಲ ಠಾಕೂರ್ ಸಮುದಾಯದ ಮುಖಂಡ ಬಘೆಲ್ ಅವರ ವಿರೋಧ ಮತ್ತೊಂದು ಕಡೆ. ಇದಕ್ಕೆ ಪರಿಹಾರ ಕಂಡುಕೊಂಡಿರುವ ಬಿಜೆಪಿ, ತ್ರಿಪಾಠಿ ಅವರ ತಂದೆ ರಮಾಪತಿ ರಾಮ್ ತ್ರಿಪಾಠಿ ಅವರಿಗೆ ಪಕ್ಕದ ದೇವರಿಯಾ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿದೆ. ರಮಾಪತಿ ಅವರು ಉತ್ತರ ಪ್ರದೇಶ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ. 

ಟಿಕೆಟ್ ಸಿಗದಿದ್ದಕ್ಕೆ ತೀವ್ರ ಅಸಮಾಧಾನಗೊಂಡಿರುವ ತ್ರಿಪಾಠಿ, ಬೆಂಬಲಿಗರ ಸಭೆ ಕರೆದು ಮುಂದಿನ ನಡೆ ಬಗ್ಗೆ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಗೋರಖಪುರದ ಹಾಲಿ ಸಂಸದ, ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದ ಪ್ರವೀಣ್ ನಿಷಾದ್ ಅವರನ್ನು ಸಂತ ಕಬೀರ್ ನಗರ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ. ಭೋಜಪುರಿ ಸಿನಿಮಾ ನಟ ರವಿ ಕಿಶನ್ ಅವರಿಗೆ ಯೋಗಿ ತವರು ಗೋರಖಪುರದ ಟಿಕೆಟ್ ನೀಡಿ, ಬಿಜೆಪಿ ಅಚ್ಚರಿ ಮೂಡಿಸಿದೆ. 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !