ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮಿಕ ವಿಶೇಷ ರೈಲು: ಶೀಘ್ರವೇ ಬೆಂಗಳೂರಿಗೆ ವಲಸೆ ಕಾರ್ಮಿಕರು

ನೋಂದಣಿ ಮಾಡದವರಿಗಾಗಿ ಇಂದು ಮೊದಲ ರೈಲು
Last Updated 11 ಮೇ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ಲಾಕ್‌ಡೌನ್‌ ಸಂದರ್ಭ ದೆಹಲಿ, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಸಿಲುಕಿರುವ ಕರ್ನಾಟಕದ ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ವಲಸೆ ಕಾರ್ಮಿಕರನ್ನು ‘ಶ್ರಮಿಕ ವಿಶೇಷ’ ರೈಲು ಶೀಘ್ರವೇ ಕರೆದೊಯ್ಯಲಿದೆ.

ಈಗಾಗಲೇ ‘ಸೇವಾ ಸಿಂಧು’ ಸಹಾಯವಾಣಿಯಲ್ಲಿ ನೋಂದಣಿ ಮಾಡಿಸಿರುವವರನ್ನು ಈ ರೈಲಿನ ಮೂಲಕ ಉಚಿತವಾಗಿ ಕರೆದೊಯ್ಯಲು ಕ್ರಮ ಕೈಗೊಳ್ಳಲಾಗುವುದು. ರೈಲು ಹೊರಡುವ ಸಮಯ ಮತ್ತು ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು ಎಂದು ಕರ್ನಾಟಕ ಭವನದ ಮೂಲಗಳು ತಿಳಿಸಿವೆ.

ಒಟ್ಟು 956 ಜನ ನೋಂದಣಿ ಮಾಡಿಸಿದ್ದಾರೆ. ಆ ಪೈಕಿ 800 ಜನರನ್ನು ಮೂಲ ಜಿಲ್ಲೆಗಳಿಗೆ ಕರೆಸಿಕೊಳ್ಳಲು ಆಯಾ ಜಿಲ್ಲಾಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ. ಇನ್ನಿತರರಿಗೆ ಪ್ರಯಾಣಕ್ಕೆ ಅವಕಾಶ ದೊರೆಯಬೇಕಿದೆ. ಎಲ್ಲರನ್ನೂ ನವದೆಹಲಿ ರೈಲು ನಿಲ್ದಾಣದಲ್ಲಿ ಕಡ್ಡಾಯ ಆರೋಗ್ಯ ತಪಾಸಣೆಗೆ ಒಳಪಡಿಸಿ, ಕೊರೊನಾ ಸೋಂಕಿನಿಂದ ಮುಕ್ತರಾಗಿದ್ದಲ್ಲಿ ಮಾತ್ರ ಕರೆದೊಯ್ಯಲಾಗುತ್ತದೆ.

ಬೆಂಗಳೂರು ತಲುಪಿದ ನಂತರ ಪ್ರತಿಯೊಬ್ಬರನ್ನೂ ಮತ್ತೆ ತಪಾಸಣೆಗೆ ಒಳಪಡಿಸಿ ಅವರವರ ಜಿಲ್ಲಾ ಕೇಂದ್ರಕ್ಕೆ ಕರೆದೊಯ್ದು, ಸರ್ಕಾರ ವ್ಯವಸ್ಥೆ ಮಾಡಿದ ಸ್ಥಳಗಳಲ್ಲಿ ಕ್ವಾರಂಟೈನ್‌ ಮಾಡಲಾಗುತ್ತದೆ. 14 ದಿನಗಳ
ನಂತರ ಮತ್ತೊಮ್ಮೆ ತಪಾಸಣೆಗೆ ಒಳಪಡಿಸಿ ‘ನೆಗೆಟಿವ್‌’ ವರದಿ ಬಂದವರನ್ನು ಮನೆಗೆ ಕಳುಹಿಸಿಕೊಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ನೋಂದಾಯಿಸದವರಿಗೆ ಇಂದು ರೈಲು

‘ಸೇವಾ ಸಿಂಧು’ ಸಹಾಯವಾಣಿ ಅಡಿ ನೋಂದಣಿ ಮಾಡಿಕೊಳ್ಳದ ಸಾರ್ವಜನಿಕರಿಗೆ ಮತ್ತೊಂದು ಹವಾನಿಯಂತ್ರತ ರೈಲು ಇಲ್ಲಿಂದ ಇದೇ 12ರಂದು ಬೆಂಗಳೂರಿಗೆ ತೆರಳಲಿದೆ.

ಮಂಗಳವಾರ ಬೆಂಗಳೂರಿನಿಂದ ದೆಹಲಿಗೆ ಮತ್ತು ದೆಹಲಿಯಿಂದ ಬೆಂಗಳೂರಿನ ನಡುವೆ ಸಂಚರಿಸಲಿರುವ ಈ ರೈಲಿನ ಮೂಲಕ ಪ್ರಯಾಣ ಮಾಡಲು ಬಯಸುವವರು ಆನ್‌ಲೈನ್‌ನಲ್ಲಿ ಐಆರ್‌ಸಿಟಿಸಿ ವೆಬ್‌ಸೈಟ್‌ ಮೂಲಕ ಟಿಕೆಟ್‌ ಕಾದಿರಿಸುವುದು ಕಡ್ಡಾಯ.

ಈ ರೈಲಿನ ಮೂಲಕ ಪ್ರಯಾಣ ಮಾಡಲು ಬಯಸುವವರಿಗಾಗಿ ಸೋಮವಾರ ಸಂಜೆ 4ರಿಂದಲೇ ಆನ್‌ಲೈನ್‌ ಟಿಕೆಟ್‌ ಬುಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಯಾವುದೇ ಏಜೆನ್ಸಿಗಳಿಗೆ ಟಿಕೆಟ್‌ ಹಂಚಿಕೆಗೆ ಅನುಮತಿ ನೀಡಲಾಗಿಲ್ಲ. ಭೋಪಾಲ್‌, ನಾಗಪುರ, ಸಿಕಂದ್ರಾಬಾದ್‌, ಗುಂತಕಲ್‌, ಅನಂತಪುರ ಮಾರ್ಗವಾಗಿ ಬೆಂಗಳೂರು ತಲುಪುವ ರೈಲಿನ ಹವಾನಿಯಂತ್ರಿತ ಪ್ರತಿ ಬೋಗಿಯಲ್ಲಿ 52 ಜನರಿಗೆ ಪ್ರಯಾಣಕ್ಕೆ ಅವಕಾಶ ದೊರೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT