ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮಿಕ್‌ ರೈಲು: ಶೇ 90ರಷ್ಟು ಪ್ರಯಾಣಿಕರು ಕಡ್ಡಾಯ

Last Updated 3 ಮೇ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ವಲಸೆ ಕಾರ್ಮಿಕರಿಗಾಗಿ ನೆರವಾಗಲು, ಶ್ರಮಿಕ್‌ ವಿಶೇಷ ರೈಲು ಪ್ರಯಾಣ ಸೇವೆ ಒದಗಿಸಲು ಕನಿಷ್ಠ ಶೇ 90ರಷ್ಟು ಪ್ರಯಾಣಿಕರು ಇರುವುದು ಕಡ್ಡಾಯ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಈ ರೈಲುಗಳ ಟಿಕೆಟ್‌ಗಳನ್ನು ರಾಜ್ಯ ಸರ್ಕಾರಗಳ ಸ್ಥಳೀಯ ಆಡಳಿತಗಳಿಗೆ ನೀಡಲಾಗುತ್ತದೆ. ತಾವು ಅನುಮೋದನೆ ನೀಡುವ ಪ್ರಯಾಣಿಕರಿಂದ ಟಿಕೆಟ್‌ ದರ ಸಂಗ್ರಹಿಸಿ ರೈಲ್ವೆ ಇಲಾಖೆಗೆ ಈ ಆಡಳಿತಗಳೇ ಪಾವತಿಸಬೇಕು ಎಂದು ತಿಳಿಸಿದೆ.

ಪ್ರಾದೇಶಿಕ ವಲಯಗಳಿಗೆ ಇಲಾಖೆಯು ಶ್ರಮಿಕ್‌ ರೈಲುಗಳ ಆಯೋಜನೆ ಸಂಬಂಧ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ರೈಲು ಸಂಚಾರಆರಂಭವಾಗುವ ಸ್ಥಳಗಳ ರಾಜ್ಯ ಸರ್ಕಾರಗಳು ಅಗತ್ಯ ಭದ್ರತೆ ನೀಡಬೇಕು. ಪ್ರಯಾಣಿಕರು ಇಳಿಯುವ ಅಂತಿಮ ತಾಣದಲ್ಲಿ ತಪಾಸಣೆಗೆ ಒಳಪಡಿಸುವ ಹೊಣೆ ಆಯಾ ಸ್ಥಳಿಯ ಆಡಳಿತಗಳದ್ದೇ ಆಗಿದೆ ಎಂದು ತಿಳಿಸಿದೆ.

ಪ್ರಯಾಣಿಕರ ದಟ್ಟಣೆ ಆಧರಿಸಿ ಇಲಾಖೆಯು ಟಿಕೆಟ್‌ಗಳನ್ನು ಮುದ್ರಿಸಿ ನೀಡಲಿದೆ. ಪ್ರಯಾಣ ಆರಂಭವಾಗುವ ನಿಲ್ದಾಣದಲ್ಲೇ ಪ್ರಯಾಣಿಕರಿಗೆ ಆಹಾರದ ಪ್ಯಾಕೇಟ್‌, ನೀರು ಒದಗಿಸಲು ಆಯಾ ಸರ್ಕಾರಗಳೇ ಕ್ರಮವಹಿಸಬೇಕು.12 ಗಂಟೆಗಳ ಅವಧಿ ಮೀರಿದ ಪ್ರಯಾಣದಲ್ಲಿ ಇಲಾಖೆ ಒಂದು ಬಾರಿ ಊಟ ಒದಗಿಸಲಿದೆ ಎಂದು ತಿಳಿಸಿದೆ.

ಪ್ರಯಾಣಿಕರು ಮುಖಗವುಸು ಧರಿಸುವುದು ಕಡ್ಡಾಯ. ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಉತ್ತೇಜನ ನೀಡಬೇಕು. ಶ್ರಮಿಕ್‌ ರೈಲುಗಳ ಪ್ರಯಾಣದ ಅಂತರ 500 ಕಿ.ಮೀಗೂ ಹೆಚ್ಚಿರಲಿದ್ದು, ನಡುವೆ ಯಾವುದೇ ನಿಲುಗಡೆ ಇರುವುದಿಲ್ಲ. ಪ್ರತಿ ರೈಲಿಗೆ ಒಟ್ಟು ಪ್ರಯಾಣಿಕರ ಸಂಖ್ಯೆ 1,200 ಆಗಿರಲಿದೆ ಎಂದು ಇಲಾಖೆಯು ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT