ಏಕಕಾಲಕ್ಕೆ ಚುನಾವಣೆ: ಕಾಂಗ್ರೆಸ್‌ ವಿರೋಧ

7

ಏಕಕಾಲಕ್ಕೆ ಚುನಾವಣೆ: ಕಾಂಗ್ರೆಸ್‌ ವಿರೋಧ

Published:
Updated:

ನವದೆಹಲಿ/ಅಮರಾವತಿ: ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.

ಕೇಂದ್ರದ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕಲ್ಪನೆ ’ಸಂವಿಧಾನ ವಿರೋಧಿ’ ಮತ್ತು ‘ವಿವೇಚನಾರಹಿತ’ ಎಂದು ಕಾಂಗ್ರೆಸ್‌ ಟೀಕಿಸಿದೆ.

ಏಕಕಾಲಕ್ಕೆ ಚುನಾವಣೆ ಸಾಧಕ–ಬಾಧಕ ಚರ್ಚಿಸಲು ಕಾನೂನು ಆಯೋಗ ಇತ್ತೀಚೆಗೆ ರಾಜಕೀಯ ಪಕ್ಷಗಳ ಜತೆ ನಡೆಸಿದ ಸಮಾಲೋಚನಾ ಸಭೆಯಿಂದ ದೂರ ಉಳಿದಿದ್ದ ಕಾಂಗ್ರೆಸ್‌, ಮಿತ್ರ ಪಕ್ಷಗಳ ಜತೆ ಚರ್ಚಿಸಿದ ಬಳಿಕ ತನ್ನ ನಿಲುವು ಪ್ರಕಟಿಸುವುದಾಗಿ ಹೇಳಿತ್ತು.

ವೈಎಸ್‌ಆರ್‌ ಕಾಂಗ್ರೆಸ್‌ ಬೆಂಬಲ
ಏಕಕಾಲಕ್ಕೆ ಚುನಾವಣೆಗೆ ಆಂದ್ರ ಪ್ರದೇಶದ ಪ್ರಮುಖ ವಿರೋಧ ಪಕ್ಷ ಮತ್ತು ಜಗಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ಬೆಂಬಲ ಸೂಚಿಸಿದೆ.

ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ನೇತೃತ್ವದ ಆಡಳಿತಾರೂಢ ತೆಲುಗುದೇಶಂ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದೆ.

‘ಈ ನಿರ್ಧಾರದಿಂದ ಲಾಭ ಮತ್ತು ಹಾನಿ ಸಮ ಪ್ರಮಾಣದಲ್ಲಿ ಆಗಲಿವೆ. ಪ್ರಾದೇಶಿಕ ಪಕ್ಷಗಳಿಗೆ ಹಿನ್ನಡೆಯಾದರೆ, ಚುನಾವಣಾ ವೆಚ್ಚ ಗಣನೀಯವಾಗಿ ತಗ್ಗಲಿದೆ ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಅಭಿಪ್ರಾಯಪಟ್ಟಿದೆ.

ಅಗತ್ಯ ಬಿದ್ದರೆ ಸಂವಿಧಾನ ತಿದ್ದುಪಡಿ ಮಾಡುವಂತೆ ಕಾನೂನು ಆಯೋಗಕ್ಕೆ ಸಲ್ಲಿಸಿದ 9 ಪುಟಗಳ ಪತ್ರದಲ್ಲಿ ಅದು ಸಲಹೆ ಮಾಡಿದೆ.

ಏಕಕಾಲಕ್ಕೆ ಚುನಾವಣೆ ವಿಚಾರವಾಗಿ ದೇಶದ ರಾಜಕೀಯ ಪಕ್ಷಗಳು ವಿಭಿನ್ನ ನಿಲುವು ತಾಳಿವೆ. ಬಹುತೇಕ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳು ಕೇಂದ್ರದ ಪ್ರಸ್ತಾಪವನ್ನು ವಿರೋಧಿಸಿವೆ.

ಎನ್‌ಡಿಎ ಅಂಗಪಕ್ಷ ಸೇರಿ ನಾಲ್ಕೈದು ರಾಜಕೀಯ ಪಕ್ಷಗಳು ಮಾತ್ರ ಪ್ರಸ್ತಾಪದ ಪರ ಧ್ವನಿ ಎತ್ತಿವೆ. ಬಿಜೆಪಿ ಇನ್ನೂ ತನ್ನ ನಿಲುವನ್ನು ಪ್ರಕಟಿಸಿಲ್ಲ.  

 

 

 

 

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !