ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಹಿಂಜರಿತ ತಡೆಗೆ ಎಫ್‌ಡಿಐ ಮೊರೆ

ವಿವಿಧ ವಲಯಗಳ ವಿದೇಶಿ ನೇರ ಹೂಡಿಕೆ ಪ್ರಮಾಣ ಏರಿಕೆ: ಕೇಂದ್ರ ಸಂಪುಟ ನಿರ್ಧಾರ
Last Updated 3 ಸೆಪ್ಟೆಂಬರ್ 2019, 8:55 IST
ಅಕ್ಷರ ಗಾತ್ರ

ನವದೆಹಲಿ: ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುವುದನ್ನು ತಡೆಯಲು ಕೇಂದ್ರ ಸರ್ಕಾರವು ಹಲವು ಕ್ರಮಗಳಿಗೆ ಮುಂದಾಗಿದೆ. ಒಂದೇ ಬ್ರ್ಯಾಂಡ್‌ ಚಿಲ್ಲರೆ ಮಾರಾಟ, ಡಿಜಿಟಲ್‌ ಮಾಧ್ಯಮ, ಕಲ್ಲಿದ್ದಲು ಗಣಿಗಾರಿಕೆ ಮತ್ತು ತಯಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆಯ (ಎಫ್‌ಡಿಐ) ನಿಯಮಗಳನ್ನು ಸಡಿಲಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಹೂಡಿಕೆದಾರ ಸ್ನೇಹಿಯಾದ ಹಲವು ಕ್ರಮಗಳನ್ನು ಕೈಗೊಂಡಿದೆ. ಏಕ ಬ್ರ್ಯಾಂಡ್‌ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಶೇ 30ರಷ್ಟು ಭಾರತೀಯ ಸರಕುಗಳು ಇರಬೇಕು ಎಂಬ ನಿಯಮವನ್ನು ಸಡಿಲ ಮಾಡಲಾಗಿದೆ. ಹಾಗೆಯೇ, ಗುತ್ತಿಗೆ ತಯಾರಿಕೆ ಹಾಗೂ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ನೂರರಷ್ಟು ಎಫ್‌ಡಿಐಗೂ ಅವಕಾಶ ನೀಡಲಾಗಿದೆ.

ಒಂದೇ ಬ್ರ್ಯಾಂಡ್‌ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಪ್ರತಿ ವರ್ಷ ಶೇ 30ರಷ್ಟು ಭಾರತೀಯ ಸರಕು ಮಾರಾಟವಾಗಬೇಕು ಎಂಬ ನಿಯಮ ಇದೆ. ಆದರೆ, ಐದು ವರ್ಷದ ವಹಿವಾಟು ಸರಾಸರಿಯಲ್ಲಿ ಶೇ 30ರಷ್ಟು ದೇಶೀಯ ಸರಕುಗಳು ಮಾರಾಟವಾದರೆ ಸಾಕು ಎಂದು ನಿಯಮವನ್ನು ಸರಳಗೊಳಿಸಲಾಗಿದೆ. ಹಾಗೆಯೇ, ಶೇ 30ರಷ್ಟು ಭಾರತೀಯ ಸರಕನ್ನು ರಫ್ತು ಮಾಡುವುದಕ್ಕೂ ಅವಕಾಶ ಕೊಡಲಾಗಿದೆ.

ಒಂದೇ ಬ್ರಾಂಡ್‌ ಚಿಲ್ಲರೆ ಮಾರಾಟ ಸಂಸ್ಥೆಗಳು ಮಳಿಗೆಗಳನ್ನು ಆರಂಭಿಸುವುದಕ್ಕೆ ಮುನ್ನವೇ ಆನ್‌ಲೈನ್‌ ಮೂಲಕ ಮಾರಾಟ ಆರಂಭಿಸಲು ಅವಕಾಶ ನೀಡಲಾಗಿದೆ. ಇದು ಕೂಡ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಬಹುದು ಎನ್ನಲಾಗಿದೆ. ಇದರಿಂದಾಗಿ ಉದ್ಯೋಗ ಸೃಷ್ಟಿಯಾಗಲಿದೆ ಮತ್ತು ಡಿಜಿಟಲ್‌ ಪಾವತಿ ಹೆಚ್ಚಳವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಕಳೆದ ಕೆಲವು ವರ್ಷಗಳಲ್ಲಿ ಭಾರತದ ಅರ್ಥ ವ್ಯವಸ್ಥೆಯ ಪ್ರಗತಿ ಉತ್ತಮವಾಗಿತ್ತು. ಆದರೆ, ಮೂರು– ನಾಲ್ಕು ತ್ರೈಮಾಸಿಕಗಳಲ್ಲಿ ಪ್ರಗತಿ ಕುಂಠಿತಗೊಂಡಿದೆ. ಒಟ್ಟು ದೇಶೀ ಉತ್ಪನ್ನವು 20 ತ್ರೈಮಾಸಿಕಗಳ ಹಿಂದಿನ ಮಟ್ಟಕ್ಕೆ ಹೋಗಿದೆ. ಅಟೊಮೊಬೈಲ್‌, ರಿಯಲ್‌ ಎಸ್ಟೇಟ್‌, ದಿನ ಬಳಕೆ ವಸ್ತುಗಳು, ಬ್ಯಾಂಕೇತರ ಹಣಕಾಸು ವಲಯದಲ್ಲಿ ಭಾರಿ ಹಿಂಜರಿತ ಇದೆ ಎಂಬ ವಿಚಾರ ಆತಂಕ ಮೂಡಿಸಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕಳೆದ ವಾರವಷ್ಟೇ ಹಲವು ಸುಧಾರಣಾ ಕ್ರಮಗಳನ್ನು ಘೋಷಿಸಿದ್ದರು.ಈಗಿನ ಸ್ಥಿತಿಯಿಂದ ಆರ್ಥಿಕ ವ್ಯವಸ್ಥೆಗೆ ಉತ್ತೇಜನ ನೀಡುವುದಕ್ಕಾಗಿ ಆಟೊ ಮೊಬೈಲ್‌ ಸೇರಿ ಕೆಲವು ವಲಯಗಳಿಗೆ ಉತ್ತೇಜನ ಕ್ರಮಗಳನ್ನು ನಿರ್ಮಲಾ ಘೋಷಿಸಿದ್ದರು. ಈಗಿನ ಎಫ್‌ಡಿಐ ನಿಯಮ ಸಡಿಲಿಕೆಯು ವಿದೇಶಿ ಹೂಡಿಕೆಯನ್ನು ಇನ್ನಷ್ಟು ಸುಗಮಗೊಳಿಸುವ ನಿರೀಕ್ಷೆ ಇದೆ.

ಡಿಜಿಟಲ್‌ ಪೋರ್ಟಲ್‌: ಶೇ 26 ಎಫ್‌ಡಿಐ

ಸುದ್ದಿ ಮತ್ತು ಪ್ರಚಲಿತ ವ್ಯವಹಾರ ವಾಹಿನಿಗಳಲ್ಲಿ ಶೇ 49ರಷ್ಟು ಎಫ್‌ಡಿಐಗೆ ಈಗ ಅವಕಾಶ ಇದೆ. ಡಿಜಿಟಲ್‌ ಮಾಧ್ಯಮದಲ್ಲಿಯೂ ಸುದ್ದಿ ಮತ್ತು ಪ್ರಚಲಿತ ವ್ಯವಹಾರ ಪೋರ್ಟಲ್‌ಗಳಲ್ಲಿ ಶೇ 26ರಷ್ಟು ಎಫ್‌ಡಿಐಗೆ ಈಗ ಅವಕಾಶ ಕಲ್ಪಿಸಲಾಗಿದೆ.

ಸಕ್ಕರೆ ರಫ್ತಿಗೆ ಸಬ್ಸಿಡಿ ಸಿಹಿ

60 ಲಕ್ಷ ಟನ್‌ ಸಕ್ಕರೆ ರಫ್ತಿಗೆ ₹6,268 ಕೋಟಿ ಸಹಾಯಧನ ನೀಡಲು ನಿರ್ಧರಿಸಲಾಗಿದೆ. ಕಬ್ಬು ಬೆಳೆಯುವ ಪ್ರಮುಖ ರಾಜ್ಯಗಳಾದ ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಈ ವರ್ಷ ವಿಧಾನಸಭೆ ಚುನಾವಣೆ ಇದ್ದು, ಅದನ್ನು ದೃಷ್ಟಿಯಲ್ಲಿರಿಸಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಈ ನಿರ್ಧಾರದಿಂದಾಗಿ, ಕಾರ್ಖಾನೆಗಳಲ್ಲಿ ಸಂಗ್ರಹವಾಗಿರುವ ಸಕ್ಕರೆಯನ್ನು ವಿಲೇವಾರಿ ಮಾಡಲು ಮತ್ತು ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳು ಬಾಕಿ ಇರಿಸಿಕೊಂಡಿರುವ ಮೊತ್ತ ಪಾವತಿಸಲು ಸಾಧ್ಯವಾಗಲಿದೆ.

ಕಬ್ಬು ಬೆಳೆಗೆ ಸರ್ಕಾರವು ನೀಡುತ್ತಿರುವ ಸಹಾಯಧನದ ವಿಚಾರವು ವಿಶ್ವ ವ್ಯಾಪಾರ ಸಂಸ್ಥೆಯ ಅಂಗಳಕ್ಕೆ ಈಗಾಗಲೇ ತಲುಪಿದೆ. ಸಕ್ಕರೆ ಉತ್ಪಾದಿಸುವ ದೇಶಗಳಾದ ಆಸ್ಟ್ರೇಲಿಯಾ, ಬ್ರೆಜಿಲ್‌ ಮತ್ತು ಗ್ವಾಟೆಮಾಲಾ ದೂರು ನೀಡಿವೆ. ಇಂತಹ ಸಹಾಯಧನವು ಸಕ್ಕರೆ ಮಾರುಕಟ್ಟೆಯನ್ನು ಏರುಪೇರು ಮಾಡುತ್ತದೆ ಎಂದು ಈ ದೇಶಗಳು ಆರೋಪಿಸಿವೆ.

ಮುಂದಿನ ವರ್ಷ ಜಾಗತಿಕ ಮಾರುಕಟ್ಟೆಯಲ್ಲಿ ಸುಮಾರು 40 ಲಕ್ಷ ಟನ್‌ ಸಕ್ಕರೆ ಕೊರತೆಯಾಗಬಹುದು ಎಂಬ ಅಂದಾಜು ಮಾಡಲಾಗಿದೆ. ಸರ್ಕಾರದ ಸಕಾಲಿಕ ಘೋಷಣೆಯಿಂದಾಗಿ ಭಾರತದ ಸಕ್ಕರೆ ಉದ್ಯಮಕ್ಕೆ ದೊಡ್ಡ ನೆರವು ಸಿಗಬಹುದು ಎಂದು ಹೇಳಲಾಗುತ್ತಿದೆ. ಪ್ರತಿ ಸಕ್ಕರೆ ಕಾರ್ಖಾನೆಯು ಯಾವ ಪ್ರಮಾಣದ ಸಕ್ಕರೆ ರಫ್ತು ಮಾಡಬಹುದು ಎಂಬುದನ್ನು ಆಹಾರ ಸಚಿವಾಲಯವು ನಿರ್ಧರಿಸಲಿದೆ.

75 ಹೊಸ ವೈದ್ಯಕೀಯ ಕಾಲೇಜು

ಹೊಸದಾಗಿ 75 ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಆರ್ಥಿಕ ವ್ಯವಹಾರಗಳ ಸಂಪುಟ ಉಪಸಮಿತಿ ಬುಧವಾರ ಒಪ್ಪಿಗೆ ಕೊಟ್ಟಿದೆ.ಹೊಸ ಕಾಲೇಜುಗಳ ಆರಂಭದಿಂದ ಸುಮಾರು 15,700 ವೈದ್ಯಕೀಯ ಸೀಟುಗಳು ಹೆಚ್ಚುವರಿಯಾಗಿ ಲಭ್ಯವಾಗಲಿವೆ.

2021–22ರ ವೇಳೆಗೆ ವಿವಿಧ ಜಿಲ್ಲಾಸ್ಪತ್ರೆಗಳ ಜತೆ ಈ ಕಾಲೇಜುಗಳು ಕಾರ್ಯಾರಂಭ ಮಾಡಲಿವೆ.ವೈದ್ಯಕೀಯ ಸೌಲಭ್ಯ ವಂಚಿತ ಪ್ರದೇಶಗಳಲ್ಲಿ ಈ ಕಾಲೇಜುಗಳನ್ನು ತೆರೆಯಲಾಗುತ್ತದೆ.

ಮೊದಲ ಹಂತದಲ್ಲಿ 58 ಹಾಗೂ ಎರಡನೇ ಹಂತದಲ್ಲಿ 24 ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿತ್ತು. 58ರ ಪೈಕಿ 39 ಕಾಲೇಜುಗಳು ಶೀಘ್ರವೇ ಕಾರ್ಯಾರಂಭ ಮಾಡಿದ್ದು, ಉಳಿದವು 2021ರ ವೇಳೆಗೆ ಸಜ್ಜುಗೊಳ್ಳಲಿವೆ.

ಒಪ್ಪಂದಕ್ಕೆ ಅನುಮೋದನೆ: ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ ವಿಚಾರದಲ್ಲಿ ಗ್ಯಾಂಬಿಯಾ–ಭಾರತದ ನಡುವೆ ಏರ್ಪಟ್ಟಿರುವ ಒಪ್ಪಂದಕ್ಕೆ ಸಂಪುಟ ಅನುಮೋದನೆ ನೀಡಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜುಲೈ 31ರಂದು ಗ್ಯಾಂಬಿಯಾದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಭಾರತದ ಆಯುಷ್ ವೈದ್ಯಕೀಯ ಪದ್ಧತಿಯ ಲಾಭ ಅಲ್ಲಿನ ಜನರಿಗೂ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT