ಗುರುವಾರ , ಸೆಪ್ಟೆಂಬರ್ 19, 2019
29 °C

ಕಾರ್ಗಿಲ್, ಲೇಹ್‌ನಲ್ಲಿ ಬೃಹತ್ ಸೌರ ವಿದ್ಯುತ್ ಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿ

Published:
Updated:

ನವದೆಹಲಿ: ಕಾರ್ಗಿಲ್ ಮತ್ತು ಲಡಾಕ್‌ನ ಲೇಹ್‌ನಲ್ಲಿ ₹ 50 ಸಾವಿರ ಕೋಟಿ ವೆಚ್ಚದಲ್ಲಿ ಬೃಹತ್ ಸೌರ ವಿದ್ಯುತ್ ಘಟಕ ಸ್ಥಾಪಿಸುವ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ವಿದ್ಯುತ್ ಪೂರೈಕೆ ಮಾರ್ಗ ಮತ್ತು ಯೋಜನೆಯ ಕಾರ್ಯಸಾಧ್ಯತೆ ಗಮನದಲ್ಲಿಟ್ಟುಕೊಂಡು ಸೌರ ವಿದ್ಯುತ್ ಯೋಜನೆಗೆ ಸ್ಥಳ ಗುರುತಿಸಿ ಅಂತಿಮಗೊಳಿಸಲಾಗಿದೆ ಎಂದು ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ತಿಳಿಸಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. 

ಕಾರ್ಗಿಲ್‌ನ ಜಾಂಸ್ಕರ್ ಮತ್ತು ಲೇಹ್‌ನಿಂದ 117 ಕಿ.ಮೀ ದೂರದಲ್ಲಿರುವ ಪಾಂಗ್‌ ಎಂಬಲ್ಲಿ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಲೇಹ್‌ನಿಂದ 250 ಕಿ.ಮೀ ದೂರದಲ್ಲಿರುವ ನ್ಯೋಮಾವನ್ನು ಯೋಜನೆಗೆ ಗುರುತಿಸಲಾಗಿತ್ತು. ಆದರೆ, ವನ್ಯಜೀವಿ ತಾಣ ಇರುವುದರಿಂದ ಪರಿಸರ ಸಚಿವಾಲಯದ ಅನುಮತಿ ಸಿಗುವುದು ಅನುಮಾನವಿತ್ತು. ಹೀಗಾಗಿ ಪಾಂಗ್ ಅನ್ನು ಆಯ್ಕೆ ಮಾಡಲಾಗಿದೆ. ಗುರುತಿಸಲಾಗಿರುವ ಪ್ರದೇಶಗಳಲ್ಲಿ ತಲಾ 2,500 ಮೆಗಾವಾಟ್‌ನಂತೆ ಮೂರು ಘಟಕಗಳಲ್ಲಿ ಒಟ್ಟು 7,500 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದೂ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: 370ನೇ ವಿಧಿ ರದ್ದತಿ ನಂತರ ಮೋದಿ ಭಾಷಣ: ಆ ಮಾತುಗಳು ಪೂರ್ತಿ ಸತ್ಯವಲ್ಲ

ಸೌರ ವಿದ್ಯುತ್‌ ಉತ್ಪಾದನಾ ಕೇಂದ್ರಗಳಿಂದ ಹಿಮಾಚಲ ಪ್ರದೇಶದ ಮನಾಲಿ ಮತ್ತು ಹರಿಯಾಣದ ಕೈತಾಲ್ ಮೂಲಕ ವಿದ್ಯುತ್ ಪೂರೈಕೆಗೆ ಚಿಂತನೆ ನಡೆಸಲಾಗಿದೆ. ಮೊದಲ ಹಂತದಲ್ಲಿ 7,500 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಿ ನಂತರ ಅದನ್ನು 23 ಸಾವಿರ ಮೆಗಾವಾಟ್‌ ವಿದ್ಯುತ್ ಉತ್ಪಾದಿಸುವ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಇಂಧನ ಸಚಿವಾಲಯ ಚಿಂತನೆ ನಡೆಸಿದೆ.

‘ಆರಂಭದಲ್ಲಿ ನ್ಯೋಮಾದಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸುವ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಪರಿಸರ ಸಚಿವಾಲಯದ ಅನುಮತಿ ಸಿಗುವ ಸಾಧ್ಯತೆ ಇಲ್ಲದಿರುವುದರಿಂದ ಪಾಂಗ್ ಅನ್ನು ಆಯ್ದುಕೊಂಡಿದ್ದೇವೆ. ಆದರೆ, ಈ ಜಾಗದಿಂದ ವಿದ್ಯುತ್ ಪೂರೈಕೆಗೆ ಸಮಸ್ಯೆ ಇರುವುದರಿಂದ ಎರಡು ಮಾರ್ಗಗಳನ್ನು (ಹಿಮಾಚಲ ಪ್ರದೇಶದ ಮನಾಲಿ ಮತ್ತು ಹರಿಯಾಣದ ಕೈತಾಲ್) ಆಯ್ಕೆ ಮಾಡಲಾಗಿದೆ. ಒಮ್ಮೆ ಇದನ್ನು ಜಾರಿಗೊಳಿಸಿದರೆ ನಂತರ ಅದು ಕಾರ್ಯಸಾಧುವಾಗುತ್ತದೆ. ಇಲ್ಲವಾದಲ್ಲಿ ವಿದ್ಯುತ್ ಪೂರೈಕೆಗೆ ಹೆಚ್ಚು ವೆಚ್ಚವಾಗಬಹುದು ಎಂದೂ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹೂಡಿಕೆ ನಿಲ್ಲಿಸಿ: ಚೀನಾಕ್ಕೆ ಭಾರತ ಸೂಚನೆ

ಲೇಹ್ ಮತ್ತು ಕಾರ್ಗಿಲ್‌ನಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸುವ ಬಗ್ಗೆ ನವೀಕರಿಸಬಹುದಾದ ಇಂಧನ ಸಚಿವಾಲಯದ ಅಧೀನದಲ್ಲಿ ಬರುವ ‘ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ ಲಿ (ಎಸ್‌ಇಸಿಐ)’ ಈ ವರ್ಷ ಆರಂಭದಲ್ಲಿ ಮನವಿ ಸಲ್ಲಿಸಿತ್ತು.

ಮೊದಲು ಕಾರ್ಗಿಲ್ ಜಿಲ್ಲೆಯ ಜಾಂಸ್ಕರ್ ಉಪ ವಿಭಾಗದಲ್ಲಿ ಘಟಕ ಸ್ಥಾಪಿಸಲಾಗುವುದು. ನಂತರ ಉಳಿದೆರಡು ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

Post Comments (+)