ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಘೋಷಿತ ತುರ್ತುಪರಿಸ್ಥಿತಿ: ವಿಪಕ್ಷ ಕಳವಳ

ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಪ್ರತಿಭಟನೆ * ನಿಷೇಧಾಜ್ಞೆ ಜಾರಿ, ಇಂಟರ್ನೆಂಟ್ ಸ್ಥಗಿತಕ್ಕೆ ವ್ಯಾಪಕ ಆಕ್ರೋಶ
Last Updated 20 ಡಿಸೆಂಬರ್ 2019, 1:14 IST
ಅಕ್ಷರ ಗಾತ್ರ

ನವದೆಹಲಿ:ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ. ತುರ್ತುಪರಿಸ್ಥಿತಿಗಿಂತಲೂ ಅತ್ಯಂತ ಕೆಟ್ಟ ಸ್ಥಿತಿ ದೇಶದಲ್ಲಿದೆ ಎಂದು ವಿರೋಧ ಪಕ್ಷಗಳು ತೀವ್ರ ಕಳವಳ ವ್ಯಕ್ತಪಡಿಸಿವೆ. ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ದೇಶದ ಜನರು ಎತ್ತುತ್ತಿರುವ ದನಿಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರವು ಬಲಪ್ರಯೋಗಿಸುತ್ತಿದೆ ಎಂದು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

ಕಾಯ್ದೆಯನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ದೆಹಲಿಯ ಹಲವೆಡೆ ಇಂಟರ್ನೆಂಟ್ ಸಂಪರ್ಕವನ್ನು ಸ್ಥಗಿತಗೊಳಿಸಲಾಯಿತು. ದೆಹಲಿ ಮೆಟ್ರೊ ಮಾರ್ಗಗಳಲ್ಲಿ 20 ನಿಲ್ದಾಣಗಳ ಬಾಗಿಲು ಹಾಕಲಾಯಿತು. ಇವೆಲ್ಲವೂ ತುರ್ತುಪರಿಸ್ಥಿತಿಯ ಕ್ರಮಗಳು ಎಂದು ವಿರೋಧ ಪಕ್ಷಗಳು ಟೀಕಿಸಿವೆ.

‘ದೇಶದಲ್ಲಿ ತುರ್ತುಪರಿಸ್ಥಿತಿಗಿಂತಲೂ ಕೆಟ್ಟ ಪರಿಸ್ಥಿತಿ ಇರುವುದನ್ನು ಇಂಟರ್ನೆಂಟ್ ಸ್ಥಗಿತ, ಮೆಟ್ರೊ ಸ್ಥಗಿತ, ಪ್ರತಿಭಟನಕಾರರು ಮತ್ತು ವಿದ್ಯಾರ್ಥಿಗಳ ಬಂಧನವು ತೋರಿಸುತ್ತಿವೆ.ವಿಶ್ವದಲ್ಲೇ ಹೆಚ್ಚು ಬಾರಿ ಇಂಟರ್ನೆಟ್‌ ಸ್ಥಗಿತಗೊಳಿಸಿದ ದೇಶ ಎಂಬ ಅಪಕೀರ್ತಿಗೆ ಭಾರತ ಪಾತ್ರವಾಗಿದೆ. ಪ್ರಜಾಸತ್ತಾತ್ಮಕವಾದ ಪ್ರತಿಭಟನೆಯನ್ನು ಸರ್ಕಾರವು ಹತ್ತಿಕ್ಕುತ್ತಿರುವ ರೀತಿಯನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು ಸರ್ವಾಧಿಕಾರ ರಾಷ್ಟ್ರವಾಗಿ ರೂಪಾಂತರವಾಗುತ್ತಿದೆ ಎಂದು ಯೆಚೂರಿ ಕಳವಳ ವ್ಯಕ್ತಪಡಿಸಿದ್ದಾರೆ.

‘ಸಹಜಸ್ಥಿತಿಯ ಹೆಸರಿನಲ್ಲಿ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಹೇರಲಾಗುತ್ತಿದೆ. ಕಾಶ್ಮೀರದಲ್ಲೂ ಇಂಥಹದ್ದೇ ‘ಸಹಜಸ್ಥಿತಿ’ ಇದೆ. ಈಗ ಅದನ್ನು ಇಡೀ ದೆಶದ ಮೇಲೆ ಹೇರಲಾಗುತ್ತಿದೆ. ಇಡೀ ದೇಶ ಕುದಿಯುತ್ತಿದೆ. ಬಿಜೆಪಿ ನರಭಕ್ಷಕನಂತೆ ವರ್ತಿಸುತ್ತಿದೆ’ ಎಂದು ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಜನರ ಅಸಮ್ಮತಿಯನ್ನು ಕೇಳಲು ಇಷ್ಟಪಡದ ಸರ್ಕಾರವು ನಿಷೇಧಾಜ್ಞೆ ಹೇರುತ್ತಿದೆ, ಇಂಟರ್ನೆಟ್ ಸ್ಥಗಿತಗೊಳಿಸುತ್ತಿದೆ. ಇದು ಸರ್ವಾಧಿಕಾರಿ ನಡೆ. ಬಿಜೆಪಿಗೆ ನಾಚಿಕೆಯಾಗಬೇಕು’ ಎಂದು ಕಾಂಗ್ರೆಸ್‌ ಟ್ವೀಟ್ ಮಾಡಿದೆ.

ಸಾರ್ವಜನಿಕರ ಆಕ್ರೋಶ:ದೆಹಲಿಯಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

‘ದೇಶದಲ್ಲಿ ತುರ್ತುಪರಿಸ್ಥಿತಿ ಇದೆಯೇ’ ಎಂದು ಹಲವರು‍ಪ್ರಶ್ನಿಸಿದ್ದಾರೆ.

ಪ್ರತಿಭಟಿಸದಂತೆ ಎಚ್ಚರಿಕೆ:ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಬಾರದು ಎಂದು ದೆಹಲಿಯ ಏಮ್ಸ್‌ ತನ್ನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಎಚ್ಚರಿಕೆ ನೀಡಿತ್ತು. ಇದೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

*****

ಜನರ ದನಿಯನ್ನು ಹತ್ತಿಕ್ಕುವ ಉದ್ದೇಶದಿಂದ ಕಾಲೇಜುಗಳನ್ನು ಮುಚ್ಚುವ, ದೂರವಾಣಿ ಮತ್ತು ಇಂಟರ್‌ನೆಟ್‌ ಸ್ಥಗಿತಗೊಳಿಸುವ ಹಕ್ಕು ಸರ್ಕಾರಕ್ಕಿಲ್ಲ
-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ರಾಮಚಂದ್ರ ಗುಹಾ, ಯೋಗೇಂದ್ರ ಯಾದವ್‌ ಅವರಂತಹ ಚಿಂತಕರನ್ನು ಬಂಧಿಸುವ ಮೂಲಕ ಸತ್ಯಾಗ್ರಹದ ಕಿಚ್ಚು ಹಚ್ಚಿದ ಸರ್ಕಾರದ ಮೂರ್ಖತನವನ್ನು ಅಭಿನಂದಿಸುತ್ತೇನೆ

-ಕಮಲ್‌ ಹಾಸನ್‌, ನಟ, ರಾಜಕಾರಣಿ

ಪ್ರಗತಿಶೀಲ ಪ್ರಜಾತಂತ್ರದಲ್ಲಿ ಶಾಂತಿಯುತವಾಗಿ ಧ್ವನಿ ಎತ್ತಿದವರನ್ನು ಹಿಂಸಿಸುವುದು ತಪ್ಪು. ಪ್ರತಿಯೊಂದು ಧ್ವನಿಗೂ ಮಹತ್ವವಿದೆ. ಪ್ರತೀ ಧ್ವನಿಯೂ ಬದಲಾವಣೆಗೆ ಕೊಡುಗೆ ನೀಡುತ್ತದೆ

-ಪ್ರಿಯಾಂಕಾ ಛೋಪ್ರಾ, ಬಾಲಿವುಡ್‌ ನಟಿ

1980ರಲ್ಲಿ ಹುಟ್ಟಿರುವ ಬಿಜೆಪಿಯು, 1970ರ ಪೌರತ್ವ ದಾಖಲೆಗಳನ್ನು ಒದಗಿಸುವಂತೆ ದೇಶದ ಜನರನ್ನು ಕೇಳುತ್ತಿದೆ
-ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ಪೌರತ್ವ (ತಿದ್ದುಪಡಿ) ಕಾಯ್ದೆಯು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಸ್ವಂತದ ಸಂವಿಧಾನದ ಒಂದು ಭಾಗವಾಗಿದೆ
- ಡಿ.ರಾಜಾಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ

ಜನಮತ ಗಣನೆಗೆ ಮಮತಾ ಸವಾಲು

ಕೋಲ್ಕತ್ತ (ಪಿಟಿಐ): ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಹಾಗೂ ಪ್ರಸ್ತಾಪಿತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಬಗ್ಗೆ ವಿಶ್ವಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಜನಮತಗಣನೆ ನಡೆಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಪೌರತ್ವ ಕಾಯ್ದೆ ವಿರುದ್ಧಈಗ ನಡೆಯುತ್ತಿರುವಪ್ರತಿಭಟನೆಯನ್ನು ಹಿಂದೂ–ಮುಸ್ಲಿಂ ಸಮುದಾಯಗಳ ನಡುವಿನ ಹೋರಾಟಎಂಬಂತೆ ಬಿಂಬಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಮಮತಾ ಗಂಭೀರ ಆರೋಪ ಮಾಡಿದ್ದಾರೆ.

‘ಮುಸ್ಲಿಮರು ಧರಿಸುವ ಟೋಪಿಗಳನ್ನು ಬಿಜೆಪಿಖರೀದಿಸುತ್ತಿದ್ದು, ಅವುಗಳನ್ನು ತನ್ನ ಕಾರ್ಯಕರ್ತರಿಗೆ ಹಂಚುತ್ತಿದೆ ಎಂಬ ಮಾಹಿತಿ ನನಗೆ ಸಿಕ್ಕಿದೆ. ಈ ಟೋಪಿಗಳನ್ನು ಧರಿಸಿಹಿಂಸಾಚಾರದ ವೇಳೆ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಲಾಗುತ್ತಿದೆ ಎಂಬ ಆರೋಪವಿದೆ’ ಎಂದು ಮಮತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT