ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಯೂಟರ್‌ಗೆ ಕಣ್ಗಾವಲು ಕೇಂದ್ರಕ್ಕೆ ‘ಸುಪ್ರೀಂ’ ನೋಟಿಸ್‌

Last Updated 14 ಜನವರಿ 2019, 19:30 IST
ಅಕ್ಷರ ಗಾತ್ರ

ನವದೆಹಲಿ: ಕಂಪ್ಯೂಟರ್‌ಗಳ ಮೇಲೆ ಕಣ್ಗಾವಲು ಇರಿಸಲು ಕೇಂದ್ರದ 10 ಸಂಸ್ಥೆಗಳಿಗೆ ಅವಕಾಶ ನೀಡಿ ಕೇಂದ್ರ ಸರ್ಕಾರ ಕಳೆದ ಡಿಸೆಂಬರ್‌ 20ರಂದು ಹೊರಡಿಸಿದ ಅಧಿಸೂಚನೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆಗೆ ಎತ್ತಿಕೊಂಡಿದೆ.

ಅಧಿಸೂಚನೆಗೆ ತಡೆ ಕೊಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಆರು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ಕೊಟ್ಟಿದೆ.

ವಕೀಲರಾದ ಎಂ.ಎಲ್‌. ಶರ್ಮಾ, ಅಮಿತ್‌ ಸಾಹ್ನಿ, ಶ್ರೇಯಾ ಸಿಂಘಾಲ್‌, ತೃಣಮೂಲ ಕಾಂಗ್ರೆಸ್‌ ಶಾಸಕಿ ಮಹುವಾ ಮೊಯಿತ್ರಾ, ‘ಇಂಟರ್‌ನೆಟ್‌ ಫ್ರೀಡಂ ಫೌಂಡೇಶನ್‌’ ಜತೆಯಾಗಿ ಈ ಅರ್ಜಿ ಸಲ್ಲಿಸಿವೆ. ಜನರ ಮೇಲೆ ಗೂಢಚಾರಿಕೆ ನಡೆಸಲು ಈ ಅಧಿಸೂಚನೆಯು ಸರ್ಕಾರಕ್ಕೆ ಅವಕಾಶ ಕೊಡುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠ ಅರ್ಜಿಯ ವಿಚಾರಣೆ ನಡೆಸಿತು. 2009ರಲ್ಲಿಯೇ ಈ ನಿಯಮವನ್ನು ರೂಪಿಸಲಾಗಿದೆ. ಆಗ ಅದನ್ನು ಪ್ರಶ್ನಿಸದೆ ಈಗ ಪ್ರಶ್ನಿಸಲು ಕಾರಣವೇನು ಎಂದು ಪೀಠವು ಕೇಳಿದೆ.

ಖಾಸಗಿತನದ ಹಕ್ಕಿನ ಬಗ್ಗೆ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಪೀಠವು ಇತ್ತೀಚೆಗೆ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅರ್ಜಿದಾರರ ವಕೀಲರು ವಾದಿಸಿದರು.

ಅಧಿಸೂಚನೆಗೆ ತಕ್ಷಣವೇ ತಡೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ ಪೀಠವು, ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಲು ನಿರ್ಧರಿಸಿತು. ಮಾಹಿತಿ ತಂತ್ರಜ್ಞಾನ ಕಾಯ್ದೆಯ 69ನೇ ಸೆಕ್ಷನ್‌ಗೆ 2008ರಲ್ಲಿಯೇ ತಿದ್ದುಪಡಿ ಮಾಡಲಾಗಿದೆ. ದೇಶದ ಸಮಗ್ರತೆ, ಭದ್ರತೆ, ರಾಜ್ಯಗಳ ಭದ್ರತೆ, ವಿದೇಶ ಸಂಬಂಧದ ಹಿತಾಸಕ್ತಿ ಅಥವಾ ಯಾವುದೇ ಅಪರಾಧದ ತನಿಖೆ, ಅಪರಾಧ ಎಸಗಲು ಕುಮ್ಮಕ್ಕು ನೀಡುವುದನ್ನು ತಡೆಯಲು ಜನರ ಮೇಲೆ ಕಣ್ಗಾವಲು ಇರಿಸುವ ಅಧಿಕಾರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಈ ತಿದ್ದುಪಡಿಯು ನೀಡುತ್ತದೆ.

ಆದರೆ, ಕಣ್ಗಾವಲು ಇರಿಸಲು ಏನು ಕಾರಣ ಎಂಬುದನ್ನು ಆದೇಶದಲ್ಲಿ ಲಿಖಿತವಾಗಿ ದಾಖಲಿಸಬೇಕು. ಕಳೆದ ಡಿ.20ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಯಾವುದೇ ಕಾರಣವನ್ನು ಉಲ್ಲೇಖಿಸಿಲ್ಲ. ಹಾಗಾಗಿ, ಯಾರ ಮೇಲೆ ಬೇಕಿದ್ದರೂ ಕಣ್ಗಾವಲು ಇರಿಸುವ ಅವಕಾಶ ಗುಪ್ತಚರ ಇಲಾಖೆ, ಸಿಬಿಐ, ರಾ ಸೇರಿ 10 ಸಂಸ್ಥೆಗಳಿಗೆ ದೊರೆತಿದೆ.

ಮುಖ್ಯಾಂಶಗಳು

* ಆರು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚನೆ

* 2009ರಲ್ಲಿ ಪ್ರಶ್ನಿಸದೆ ಈಗ ಪ್ರಶ್ನಿಸಲು ಕಾರಣವೇನು?

* ಅಧಿಸೂಚನೆಗೆ ತಕ್ಷಣವೇ ತಡೆ ನೀಡಲು ಸಾಧ್ಯವಿಲ್ಲ ಎಂದ ಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT