ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಬೆಂಬಲದಿಂದ ಟಿಕೆಟ್‌ ಪಡೆದ ಹರತಾಳು ಹಾಲಪ್ಪ

ಸಾಗರ ಕ್ಷೇತ್ರದಲ್ಲಿ ಗೋಪಾಲಕೃಷ್ಣ ಬೇಳೂರಿಗೆ ತಪ್ಪಿದ ಟಿಕೆಟ್, ಕುತೂಹಲ ಹುಟ್ಟಿಸಿದ ಅವರ ಮುಂದಿನ ನಡೆ
Last Updated 17 ಏಪ್ರಿಲ್ 2018, 10:48 IST
ಅಕ್ಷರ ಗಾತ್ರ

ಸಾಗರ: ಇಲ್ಲಿನ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಅನ್ನು ಹರತಾಳು ಹಾಲಪ್ಪ ಅವರಿಗೆ ಬಿಜೆಪಿ ವರಿಷ್ಠರು ನೀಡಿದ್ದು, ಮತ್ತೊಬ್ಬಆಕಾಂಕ್ಷಿಯಾಗಿದ್ದ ಗೋಪಾಲಕೃಷ್ಣ ಬೇಳೂರು ಅವರಿಗೆ ‘ಶಾಕ್’ ನೀಡಿದ್ದಾರೆ.

ತಿಂಗಳಿಗೂ ಮುಂಚಿನಿಂದ ಈ ಕ್ಷೇತ್ರದ ರಾಜಕೀಯ ವಲಯದಲ್ಲಿ ಬಿಜೆಪಿ ಟಿಕೆಟ್‌ ಯಾರಿಗೆ ಎನ್ನುವುದೇ ಪ್ರಮುಖ ಚರ್ಚೆಯ ವಸ್ತುವಾಗಿತ್ತು. ಈಗ ಅಧಿಕೃತವಾಗಿ ಹಾಲಪ್ಪ ಅವರ ಹೆಸರು ಕಾಣಿಸಿಕೊಂಡಿರುವುದು ಬೇಳೂರು ಬೆಂಬಲಿಗರಿಗೆ ತೀವ್ರ ನಿರಾಶೆ ಉಂಟುಮಾಡಿದೆ. ಬೇಳೂರು ಅವರನ್ನು ಹಾಲಪ್ಪ ಹಿಂದಿಕ್ಕಲು ಕಾರಣವಾದ ಅಂಶಗಳೇನು ಎನ್ನುವ ಬಗ್ಗೆ ರಾಜಕೀಯ ವಲಯದಲ್ಲಿ ವಿಶ್ಲೇಷಣೆ ನಡೆಯುತ್ತಿದೆ.

ಸೊರಬ ಕ್ಷೇತ್ರದ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಹಾಲಪ್ಪ ಅವರನ್ನು ಸಾಗರ ಕ್ಷೇತ್ರಕ್ಕೆ ಬರಮಾಡಿಕೊಂಡಿದ್ದೇ ಬಿ.ಎಸ್‌.ಯಡಿಯೂರಪ್ಪ. ಕುಮಾರ್‌ ಬಂಗಾರಪ್ಪ ಬಿಜೆಪಿಗೆ ಸೇರ್ಪಡೆಯಾದ ನಂತರ ಸೊರಬದಲ್ಲಿ ಅವರಿಗೆ ಟಿಕೆಟ್‌ ನೀಡುವ ಸಲುವಾಗಿ ಬಿಎಸ್‌ವೈ ಈ ತಂತ್ರ ಹೂಡಿದ್ದರು. ಇದರ ಫಲವಾಗಿಯೇ ಆರು ತಿಂಗಳಿಗೂ ಹೆಚ್ಚು ಕಾಲದಿಂದ ಹಾಲಪ್ಪ ಈ ಕ್ಷೇತ್ರದಲ್ಲಿ ಸಕ್ರಿಯರಾಗಿ ಓಡಾಡುತ್ತಿದ್ದರು. ಇದು ಬೇಳೂರು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.

ಹಾಲಪ್ಪ ಅವರಿಗೆ ಸಾಗರದ ಟಿಕೆಟ್‌ ಖಚಿತ ಎಂದು ಕಳೆದ ತಿಂಗಳು ಯಡಿಯೂರಪ್ಪ ಶಿವಮೊಗ್ಗದಲ್ಲಿ ಘೋಷಿಸಿದ್ದರು. ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಬಂದಿದ್ದಾಗ ಬೇಳೂರು ಹೆಸರು ಮುಂಚೂಣಿಗೆ ಬಂದಿತ್ತು. ಈ ಹಂತದಲ್ಲಿ ತೀವ್ರ ನಿರಾಶರಾಗಿದ್ದ ಹಾಲಪ್ಪ ಕಾಂಗ್ರೆಸ್‌ ಸೇರಲು ಮುಂದಾಗಿದ್ದರು. ನಂತರ ಯಡಿಯೂರಪ್ಪ ಅವರೇ ಟಿಕೆಟ್‌ ಕೊಡಿಸುವ ಖಚಿತ ಭರವಸೆ ನೀಡಿದ್ದರಿಂದ ಹಾಲಪ್ಪ ತಮ್ಮ ನಿರ್ಧಾರ ಬದಲಿಸಿದರು ಎನ್ನಲಾಗಿದೆ.

ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಬೇಳೂರು ಭಿನ್ನಮತೀಯರ ಗುಂಪಿನಲ್ಲಿ ಕಾಣಿಸಿಕೊಂಡಿದ್ದರು. ಬಿಎಸ್‌ವೈ ಕೆಜೆಪಿ ಕಟ್ಟಿದಾಗ ಅವರ ಜೊತೆ ಹೆಜ್ಜೆ ಹಾಕದೆ ಜೆಡಿಎಸ್‌ ಸೇರಿದ್ದರು. ಇದೇ ಅವರಿಗೆ ಟಿಕೆಟ್‌ ತಪ್ಪಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಹಾಲಪ್ಪ ಅವರಿಗೆ ಸಾಗರ ಕ್ಷೇತ್ರದ ಟಿಕೆಟ್ ನೀಡದೇ ಇದ್ದರೆ ಸೊರಬ, ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಿಗೆ ತೊಂದರೆ ಆಗಬಹುದು ಎಂಬ ಲೆಕ್ಕಾಚಾರ ಕೂಡ ಈ ನಿರ್ಧಾರದಲ್ಲಿ ಕೆಲಸ ಮಾಡಿದೆ ಎಂದು ಹೇಳಲಾಗುತ್ತಿದೆ.

ಹಾಲಪ್ಪ ಹಾಗೂ ಬೇಳೂರು ನಡುವೆ ಪಕ್ಷ ರಾಜಕಾರಣವನ್ನು ಮೀರಿದ ವೈಯಕ್ತಿಕ ಹಗೆತನವಿದೆ. ಹಾಲಪ್ಪ ಪರ ಪ್ರಚಾರ ಮಾಡುವುದು ಕಷ್ಟ ಎಂದು ಮಾಧ್ಯಮದ ಎದುರು ಸೋಮವಾರ ಬೇಳೂರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಗೋಪಾಲಕೃಷ್ಣ ಅವರ ಮುಂದೆ ಪಕ್ಷೇತರ ಅಥವಾ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುವ ಒಂದು ದಾರಿ ಇದೆ. ತಮ್ಮ ಮಾವ ಕಾಗೋಡು ತಿಮ್ಮಪ್ಪ ಅವರಿಗೆ ಬೆಂಬಲ ಸೂಚಿಸುವ ಮೂಲಕ ಭವಿಷ್ಯದಲ್ಲಿ ಕಾಂಗ್ರೆಸ್‌ನ ಸ್ಥಳೀಯ ನಾಯಕನಾಗಿ ರೂಪುಗೊಳ್ಳುವ ಮತ್ತೊಂದು ದಾರಿಯೂ ಇದೆ. ಬೇಳೂರು ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವರೋ ಕಾದು ನೋಡಬೇಕು.
ಎಂ.ರಾಘವೇಂದ್ರ

ಬಿಜೆಪಿ ಪ್ರಚಾರ ವಾಹನದ ಮೇಲೆ ಕಲ್ಲು ತೂರಾಟ

ಗೋಪಾಲಕೃಷ್ಣ ಬೇಳೂರು ಅವರಿಗೆ ಟಿಕೆಟ್‌ ದೊರಕಲಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಇಲ್ಲಿನ ಶಿವಮೊಗ್ಗ ರಸ್ತೆಯಲ್ಲಿ ನಿಲ್ಲಿಸಿದ್ದ ಬಿಜೆಪಿಯ ಪ್ರಚಾರ ವಾಹನದ ಮೇಲೆ ಸೋಮವಾರ ಕಲ್ಲು ತೂರಲಾಗಿದೆ.

ಎಲ್‌ಇಡಿ ಸೌಲಭ್ಯ ಹೊಂದಿದ್ದ ಈ ವಾಹನದ ಮೇಲೆ ಬೇಳೂರು ಬೆಂಬಲಿಗರು ಎನ್ನಲಾದ ಕೆಲವರು ಕಲ್ಲು ತೂರಿದ ಪರಿಣಾಮ ಗಾಜುಗಳು ಒಡೆದಿವೆ. ಪೊಲೀಸರು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಕಲ್ಲು ತೂರಿದವರು ಪರಾರಿಯಾಗಿದ್ದಾರೆ.

 ಎಸ್‌ಪಿಎಂ.ರಸ್ತೆಯಲ್ಲಿರುವ ಬಿಜೆಪಿ ಕಚೇರಿಯ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ. ನರೇಂದ್ರ ಮೋದಿ ಅವರ ಭಾವಚಿತ್ರವಿರುವ ಕಿಟಕಿಯ ಪಕ್ಕದಲ್ಲಿ ಕಲ್ಲು ತೂರಿದ ಪರಿಣಾಮ ಕಿಟಕಿಯ ಗಾಜು ಒಡೆದಿದೆ. ಬಿಜೆಪಿ ಕಚೇರಿ ಎದುರು ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ.

**

ಗೋಪಾಲಕೃಷ್ಣ ಅವರಿಗೆ ಟಿಕೆಟ್‌ ನೀಡದೆ ಇರುವುದು ತೀವ್ರ ಬೇಸರ ತಂದಿದೆ. ಮಂಗಳವಾರ ಅವರು ಸಾಗರಕ್ಕೆ ಬರುತ್ತಿದ್ದಾರೆ. ಬೆಂಬಲಿಗರ ಜೊತೆ ಸಭೆ ನಡೆಸಿ ಮುಂದಿನ ನಡೆ ಏನು ಎನ್ನುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು – ಭೀಮನೇರಿ ಶಿವಪ್ಪ, ಬಿಜೆಪಿ ಮುಖಂಡ.

**

ಸಾಗರ ಕ್ಷೇತ್ರದ ಟಿಕೆಟ್‌ ದೊರಕಿರುವುದು ಖುಷಿ ತಂದಿದೆ. ಪಕ್ಷದ ಜಿಲ್ಲಾ ಮುಖಂಡರ ಜೊತೆ ಚರ್ಚಿಸಿ ಗೊಂದಲಗಳನ್ನು ಬಗೆಹರಿಸಲು ಮುಂದಾಗುತ್ತೇನೆ. ಏ.20ರಂದು ನಾಮಪತ್ರ ಸಲ್ಲಿಸುತ್ತೇನೆ – ಹರತಾಳು ಹಾಲಪ್ಪ, ಸಾಗರ ಕ್ಷೇತ್ರದ ಬಿಜೆಪಿ ಸ್ಪರ್ಧಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT