ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಹಿಂಸಾ’ಕ್ಕೆ ಬಡ್ತಿ ಭಾಗ್ಯ; ಆರ್ಥಿಕ ಲಾಭ ಇಲ್ಲ!

Last Updated 5 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬಡ್ತಿ ಮೀಸಲು ಕಾಯ್ದೆ–2002’ ಅನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪು ಅನುಷ್ಠಾನದಿಂದ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ 20,000ಕ್ಕೂ ಹೆಚ್ಚು ನೌಕರರಿಗೆ ಬಡ್ತಿ ಭಾಗ್ಯ ಸಿಕ್ಕಿದರೂ, ಹಿಂಬಾಕಿ (ಅರಿಯರ್ಸ್‌) ಲಾಭ ಸಿಗುವುದಿಲ್ಲ.

ಅಷ್ಟೇ ಅಲ್ಲ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರು ಹಿಂಬಡ್ತಿ ಪಡೆದರೂ ಮುಂಬಡ್ತಿ ಹುದ್ದೆ ನಿರ್ವಹಿಸಿದ ಅವಧಿಯಲ್ಲಿ ಗಳಿಸಿದ ಹೆಚ್ಚುವರಿ ವೇತನ ಮೊತ್ತ ಮರು ಪಾವತಿಸಬೇಕಾಗುತ್ತದೆ ಎಂಬ ಆತಂಕ ಇಲ್ಲ.

ಕೋರ್ಟ್‌ ತೀರ್ಪು ಅನುಷ್ಠಾನ, ಮುಂಬಡ್ತಿ ನಿರೀಕ್ಷೆಯಲ್ಲಿದ್ದ ನೌಕರರ ಮೊಗದಲ್ಲಿ ಸಂತಸ ಮೂಡಿಸಿದೆ. ಆದರೆ, ಉನ್ನತ ಹುದ್ದೆಗಳಲ್ಲಿದ್ದು ಇದೀಗ 2–3 ಹಂತ ಕೆಳಗಿನ ವೃಂದದ ಹುದ್ದೆಗಳಿಗೆ ಹಿಂಬಡ್ತಿ ಪಡೆಯುವ ಅಧಿಕಾರಿಗಳು ಏನು ಮಾಡಬೇಕೆಂದು ತೋಚದ ಸ್ಥಿತಿಯಲ್ಲಿದ್ದಾರೆ.

ಈ ಪೈಕಿ ಹಲವರು ನಿವೃತ್ತಿ ಅಂಚಿನಲ್ಲಿದ್ದಾರೆ. ಹಿಂಬಡ್ತಿಯಿಂದ ಆಗುವ ಮುಜುಗರ ತಪ್ಪಿಸಲು ಅನೇಕ ಅಧಿಕಾರಿಗಳು ದೀರ್ಘ ರಜೆ ಪಡೆಯಲು ನಿರ್ಧರಿಸಿ, ಈಗಾಗಲೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ (ಡಿಪಿಎಆರ್) ಮಾಹಿತಿ ನೀಡಿದ್ದಾರೆ.

ಇದೇ 16ರೊಳಗೆ ಎಲ್ಲ ಇಲಾಖೆಗಳು ಹಿಂಬಡ್ತಿ– ಮುಂಬಡ್ತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಈ ಆದೇಶ ಪಾಲಿಸಲು ವಿಫಲವಾದ ಇಲಾಖೆಗಳ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ರಾಜ್ಯ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಎಚ್ಚರಿಕೆ ನೀಡಿದ್ದಾರೆ.

ಬಡ್ತಿ ಮೀಸಲು ಕಾಯ್ದೆ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ, ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಾಮಾನ್ಯ (ಅಹಿಂಸಾ) ವರ್ಗದ ನೌಕರರ ಸಂಘದ ಅಧ್ಯಕ್ಷ ಎಂ. ನಾಗರಾಜ್, ‘ಸರ್ಕಾರ ಸಂಘರ್ಷ ಬಿಟ್ಟು ತೀರ್ಪು ಜಾರಿಗೆ ಮುಂದಾದ ಪರಿಣಾಮ ಅಹಿಂಸಾ ವರ್ಗದ ಸಾವಿರಾರು ನೌಕರರು ಮುಂಬಡ್ತಿ ಪಡೆಯಲಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು.

ಮುಂಬಡ್ತಿ  ನೀಡುವ ಸಂದರ್ಭದಲ್ಲಿ ರಾಜ್ಯ ಸರ್ಕಾರ 1978ರಲ್ಲಿ ಹೊರಡಿಸಿದ ಆದೇಶ ಪಾಲಿಸಬೇಕಾಗುತ್ತದೆ. ಅದರಲ್ಲಿ ಮೀಸಲಾತಿ ವರ್ಗದವರಿಗೆ (ಪರಿಶಿಷ್ಟ ಜಾತಿಗೆ ಶೇ 15 ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ 3) ಒಟ್ಟು ಶೇ 18 ಪ್ರಾತಿನಿಧ್ಯ ದೊರಕುವಂತೆ ಬಡ್ತಿ ಮೀಸಲಾತಿಗೆ ಅವಕಾಶ ಇದೆ. ಈ ಆದೇಶ ಎಲ್ಲ ಇಲಾಖೆಗಳಲ್ಲಿ ಲೋವರ್‌ ಕ್ಲಾಸ್‌–1 ಹುದ್ದೆಯವರೆಗೆ ಮಾತ್ರ ಅನ್ವಯ ಆಗುತ್ತದೆ.

ಉದಾಹರಣೆಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಪೊಲೀಸ್‌ ಇಲಾಖೆಯಲ್ಲಿ ಡಿವೈಎಸ್‌ಪಿ, ಕಂದಾಯ ಇಲಾಖೆಯಲ್ಲಿ ಉಪ ಆಯುಕ್ತ, ಸಚಿವಾಲಯದಲ್ಲಿ ಅಧೀನ ಕಾರ್ಯದರ್ಶಿ, ಶಿಕ್ಷಣ ಇಲಾಖೆಯಲ್ಲಿ ಉಪ ನಿರ್ದೇಶಕ ಹುದ್ದೆಯವರೆಗೆ ಬಡ್ತಿ ಮೀಸಲು ನೀಡಬಹುದಾಗಿದೆ. ಬಳಿಕದ ಹುದ್ದೆಗಳಿಗೆ (ಸೀನಿಯರ್‌ ಕ್ಲಾಸ್‌) ಬಡ್ತಿ ಮೀಸಲಾತಿ ಅನ್ವಯವಾಗುವುದಿಲ್ಲ.

ಆದರೆ, ರಾಜ್ಯ ಸರ್ಕಾರ 2002ರಲ್ಲಿ ತಂದ ಕಾಯ್ದೆಯಲ್ಲಿ ಮೀಸಲಾತಿ ಅನ್ವಯ ಬಡ್ತಿ ನೀಡಿದ ಬಳಿಕ ತತ್ಪರಿಣಾಮ ಜ್ಯೇಷ್ಠತೆ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಸೀನಿಯರ್‌ ಕೆಟಗರಿ ಕ್ಲಾಸ್‌–1 ಹುದ್ದೆಯಲ್ಲೂ ಪ್ರಾತಿನಿಧ್ಯ ಪಡೆಯಲು ಅವಕಾಶ ಸಿಕ್ಕಿತ್ತು.

ಸುಪ್ರೀಂ ಕೋರ್ಟ್‌ ತೀರ್ಪಿನ ಪರಿಣಾಮ, ಮೀಸಲಾತಿ ಅನ್ವಯ ಬಡ್ತಿ ನೀಡಿದ ಬಳಿಕ ತತ್ಪರಿಣಾಮ ಜ್ಯೇಷ್ಠತೆ ನೀಡಲು ಅವಕಾಶ ಇಲ್ಲ. ಅಷ್ಟೇ ಅಲ್ಲ, ಮೀಸಲಾತಿ ವರ್ಗದವರಿಗೆ ಶೇ 18ರಷ್ಟು ಹುದ್ದೆಗಳನ್ನು ಹೊರತುಪಡಿಸಿ ಉಳಿದ ನೌಕರರಿಗೆ ಹಿಂಬಡ್ತಿ ನೀಡಲೇಬೇಕಾದ ಅನಿವಾರ್ಯತೆ ರಾಜ್ಯ ಸರ್ಕಾರಕ್ಕೆ ಎದುರಾಗಿದೆ.‌

9ರಂದು ‘ಅಹಿಂಸಾ’ ಸಭೆ
‘ಸುಪ್ರೀಂ ಕೋರ್ಟ್‌ ತೀರ್ಪು ಅನುಷ್ಠಾನದಿಂದ ನೌಕರನೊಬ್ಬನಿಗೆ ಎರಡು ವರ್ಷಗಳ ಹಿಂದೆಯೇ ಬಡ್ತಿ ಸಿಗಬೇಕಿತ್ತಾದರೂ, ಆ ಎರಡು ವರ್ಷಗಳ ಹಿಂಬಾಕಿಯನ್ನು ಸರ್ಕಾರ ಪಾವತಿಸಬೇಕಿಲ್ಲ. ಯಾಕೆಂದರೆ, ಬಡ್ತಿ ಹುದ್ದೆಯನ್ನು ಆತ ನಿರ್ವಹಿಸಿಲ್ಲ. ಅಷ್ಟೇ ಅಲ್ಲ, ಹಿಂಬಡ್ತಿ ಪಡೆದ ನೌಕರ ಮುಂಬಡ್ತಿ ಹುದ್ದೆಯಲ್ಲಿದ್ದ ಅವಧಿಯಲ್ಲಿ ಕೆಲಸ ನಿರ್ವಹಿಸಿದ ಕಾರಣಕ್ಕೆ ಸರ್ಕಾರಕ್ಕೆ ಹಣ ಮರುಪಾವತಿಸಬೇಕಿಲ್ಲ ಎಂದು ಅಹಿಂಸಾ ಅಧ್ಯಕ್ಷ ಎಂ. ನಾಗರಾಜ್ ವಿವರಿಸಿದರು.

‘ಸರ್ಕಾರದ ತಪ್ಪು ನೀತಿಯಿಂದ ಅಹಿಂಸಾ ನೌಕರು ಬಡ್ತಿ ವಂಚಿತರಾಗಿದ್ದಾರೆ. ಹೀಗಾಗಿ, ಹಿಂಬಾಕಿ ಪಡೆಯುವುದು ಹಕ್ಕು. ಮೊದಲು ತೀರ್ಪು ಅನುಷ್ಠಾನಗೊಳ್ಳಲಿ. ಹಿಂಬಾಕಿ ನೀಡುವಂತೆ ಒತ್ತಾಯಿಸಿ ಮತ್ತೆ ಕೋರ್ಟ್‌ ಮೆಟ್ಟಿಲೇರುತ್ತೇವೆ. ಸರ್ಕಾರ ತೆಗೆದುಕೊಂಡ ಕ್ರಮದ ಬಗ್ಗೆ ಚರ್ಚಿಸಲು ಇದೇ 9ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಪುರಭವನದಲ್ಲಿ ಸಭೆ ಸೇರಲಿದ್ದೇವೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT