ಐಎಸ್‌ಐ ಮೋಹಜಾಲದಲ್ಲಿ ಯೋಧರು?

7
ಒಬ್ಬ ಯೋಧನನ್ನು ಬಂಧಿಸಿದ ರಾಜಸ್ಥಾನ ಪೊಲೀಸರು

ಐಎಸ್‌ಐ ಮೋಹಜಾಲದಲ್ಲಿ ಯೋಧರು?

Published:
Updated:

ನವದೆಹಲಿ: ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐನ ಶಂಕಿತ ಗೂಢಚಾರಿಣಿಯೊಬ್ಬಳ ಮೋಹದ ಜಾಲಕ್ಕೆ (ಹನಿಟ್ರ್ಯಾ‍ಪ್‌) ಭಾರತೀಯ ಸೇನೆಯ ಕನಿಷ್ಠ 50 ಯೋಧರು ಸಿಲುಕಿರುವ ಶಂಕೆ ಇದೆ.

ಹನಿಟ್ರ್ಯಾಪ್‌ಗೆ ಸಿಲುಕಿ ಸೇನೆಯ ರಹಸ್ಯ ಮಾಹಿತಿ ಸೋರಿಕೆ ಮಾಡಿದ ಯೋಧನೊಬ್ಬನನ್ನು ನಾಲ್ಕು ತಿಂಗಳ ವಿಚಾರಣೆ ನಡೆಸಿದ ಬಳಿಕ ರಾಜಸ್ಥಾನ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ರೋಹಟಕ್‌ ನಿವಾಸಿ ಸೋಮವೀರ್‌ ಸಿಂಗ್‌ ಎಂಬ ಯೋಧನನ್ನು ಹೆಚ್ಚಿನ ವಿಚಾರಣೆಗಾಗಿ ಜ.19ರವರೆಗೆ ನ್ಯಾಯಾಲಯವು ರಾಜಸ್ಥಾನ ಪೊಲೀಸರ ವಶಕ್ಕೆ ಒಪ್ಪಿಸಿದೆ. ರಾಜಸ್ಥಾನದ ಜೈಸಲ್ಮೇರ್‌ ಸಶಸ್ತ್ರ ಪಡೆಯಲ್ಲಿ ಆತ ಕಾರ್ಯನಿರ್ವಹಿಸುತ್ತಿದ್ದ.

ಫೇಸ್‌ಬುಕ್‌ ಸ್ನೇಹ: 2016ರಲ್ಲಿ ಸೋಮವೀರ್‌ ಫೇಸ್‌ಬುಕ್‌ ಮೂಲಕ ಐಎಸ್‌ಐನ ಶಂಕಿತ ಮಹಿಳಾ ಏಜೆಂಟ್‌ ಜತೆ ಸಂಪರ್ಕಕ್ಕೆ ಬಂದಿದ್ದ. ಅದಾದ ನಂತರ ಆಕೆಯ ಜತೆ ನಿರಂತರ ಸಂಪರ್ಕದಲ್ಲಿದ್ದ.

ಸದಾ ಆನ್‌ಲೈನ್‌ನಲ್ಲಿ ಚಾಟ್‌ ಮಾಡುತ್ತಿದ್ದ ಯೋಧನ ಚಲನವಲನ ಮತ್ತು ಚಟುವಟಿಕೆಗಳ ಮೇಲೆ ಗುಪ್ತಚರ ಇಲಾಖೆ ಹಲವು ತಿಂಗಳಿಂದ ಕಣ್ಣಿಟ್ಟಿತ್ತು.

ರಾಜಸ್ಥಾನ ಪೊಲೀಸರು ಮತ್ತು ಗುಪ್ತಚರ ಇಲಾಖೆ ಅಧಿಕಾರಿಗಳು ನಾಲ್ಕು ತಿಂಗಳಿಂದ ಯೋಧನ ವಿಚಾರಣೆ ನಡೆಸುತ್ತಿದ್ದರು. ಅರ್ಜುನ್‌ ಟ್ಯಾಂಕ್‌ ಸಮರಾಭ್ಯಾಸ ಸೇರಿದಂತೆ ಭಾರತೀಯ ಸೇನೆಯ ಹಲವು ರಹಸ್ಯ ಮಾಹಿತಿ ಮತ್ತು ಚಿತ್ರಗಳನ್ನು ಸೋಮವೀರ್‌ ಶಂಕಿತ ಐಎಸ್‌ಐ ಏಜೆಂಟ್‌ ಜತೆ ಹಂಚಿಕೊಂಡಿದ್ದಾನೆ.

ವಿಚಾರಣೆ ವೇಳೆ ಈ ವಿಷಯ ದೃಢಪಡುತ್ತಲೇ ಪೊಲೀಸರು ಆತನನ್ನು ವಶಕ್ಕೆ ಪಡೆದರು.

ಒಬ್ಬಳೇ ಗೂಢಚಾರಿಣಿ!

ಐಎಸ್‌ಐ ಮಹಿಳಾ ಏಜೆಂಟ್‌ ಹನಿಟ್ರ್ಯಾಪ್‌ ಬಲೆಗೆ ಸೋಮವೀರ್‌ ಮಾತ್ರವಲ್ಲ, ಇನ್ನೂ 50 ಯೋಧರು ಸಿಲುಕಿರುವ ಶಂಕೆ ಇದೆ. ಇದು ಸೇನಾಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.

ಅನಿಕಾ ಚೋಪ್ರಾ ಎಂಬ ನಕಲಿ ಫೇಸ್‌ಬುಕ್‌ ಹೆಸರಿನಲ್ಲಿ ಐಎಸ್‌ಐ ಗೂಢಚಾರಿಣಿ ಭಾರತದ ಯೋಧರನ್ನು ಬಲೆಗೆ ಕೆಡವಿದ್ದಾಳೆ. ಅನಿಕಾ ಚೋಪ್ರಾ ಹೆಸರಿನ ಖಾತೆ ಪರಿಶೀಲಿಸಿದಾಗ ಜುನಾಗಡದ ಸೇನಾ ನರ್ಸಿಂಗ್‌ ಶಿಬಿರದಲ್ಲಿ ಕ್ಯಾಪ್ಟನ್‌ ಆಗಿರುವುದಾಗಿ ನಮೂದಿಸಲಾಗಿದೆ. 
ಸೇನೆಯ ಸಿಬ್ಬಂದಿಯ ಸಾಮಾಜಿಕ ಜಾಲತಾಣ ಬಳಕೆ ಮೇಲೆ ಹಲವು ಕಠಿಣ ನಿರ್ಬಂಧ ವಿಧಿಸಲಾಗಿದೆ. ಸೇನಾಸಮವಸ್ತ್ರದಲ್ಲಿರುವ ಚಿತ್ರಗಳನ್ನು ಅಪ್‌ಲೋಡ್‌ ಮಾಡುವಂತಿಲ್ಲ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !