ಭಾನುವಾರ, ಸೆಪ್ಟೆಂಬರ್ 15, 2019
30 °C

ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ: ಭಾರತೀಯ ಯೋಧ ಹುತಾತ್ಮ

Published:
Updated:

ರಜೌರಿ‌: ಗಡಿ ನಿಯಂತ್ರಣಾ ರೇಖೆಯ ನೌಶೆರಾ ಸೆಕ್ಟರ್‌ ಬಳಿ ಪಾಕಿಸ್ತಾನ ಸೇನೆಯು ಶನಿವಾರ ಕದನ ವಿರಾಮ ಉಲ್ಲಂಘಿಸಿದ್ದು, ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಈ ವೇಳೆ ಭಾರತವೂ ಪ್ರತಿರೋಧ ತೋರಿದೆ. 

ಲ್ಯಾನ್ಸ್‌ ನಾಯ್ಕ್‌, ಡೆಹ್ರಾಡೂನ್‌ ಮೂಲದ ಸಂದೀಪ್‌ ತಪ್ಪಾ(35) ಹತ ಯೋಧ. ಭಾರತೀಯ ಸೇನೆಯಲ್ಲಿ ಅವರು 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು ಎಂದು ಭಾರತೀಯ ಸೇನೆಯ ವಕ್ತಾರ ಲೆಫ್ಟಿನೆಂಟ್‌ ದೇವೇಂದ್ರ ಆನಂದ್‌ ಹೇಳಿದ್ದಾರೆ. 

‘ಅವರೊಬ್ಬ ವೀರ ಯೋಧ. ಅವರ ಸೇವೆ ಮತ್ತು ತ್ಯಾಗಕ್ಕೆ ಭಾರತ ಎಂದೆಂದಿಗೂ ಋಣಿಯಾಗಿರುತ್ತದೆ,’ ಎಂದೂ ಅವರು ಹೇಳಿದ್ದಾರೆ. 

‘ನೌಶೆರಾ ಸೆಕ್ಟರ್‌ನಲ್ಲಿ ಪಾಕಿಸ್ತಾನವೂ ಶನಿವಾರ ಬೆಳಗ್ಗೆ 6.30ರಲ್ಲಿ ಅಪ್ರಚೋದಿತ ದಾಳಿ ನಡೆಸಿದೆ. ಇದಕ್ಕೆ ಭಾರತವೂ ಪ್ರತಿರೋಧ ತೋರಿದೆ. ಎರಡೂ ದೇಶಗಳ ನಡುವೆ ಗುಂಡಿನ ಕಾಳಗ ನಡೆದಿದೆ. ಸದ್ಯ ಪರಿಸ್ಥಿತಿ ತಹಬದಿಗೆ ಬಂದಿದೆ,’ ಎಂದು ದೇವೇಂದ್ರ ಆನಂದ್‌  ತಿಳಿಸಿದ್ದಾರೆ. 

ಭಾರತವೂ ಪೂಂಛ್‌ ವಲಯದಲ್ಲಿ ಕದನ ವಿರಾಮ ಉಲ್ಲಂಘಿಸಿ ನಾಲ್ವರು ಯೋಧರನ್ನು ಕೊಂದಿದೆ ಎಂದು ಪಾಕಿಸ್ತಾನ ಎರಡು ದಿನಗಳ ಹಿಂದಷ್ಟೇ ಆರೋಪಿಸಿತ್ತು. ಆದರೆ, ಭಾರತ ಈ ಆರೋಪಗಳನ್ನು ತಳ್ಳಿ ಹಾಕಿತ್ತು. ಈ ಬೆಳವಣಿಗೆ ಹಸಿಯಾಗಿರುವಾಗಲೇ ಪಾಕ್‌ ಕದನ ವಿರಾಮ ಉಲ್ಲಂಘಿಸಿದೆ. 

Post Comments (+)