ಭಾನುವಾರ, ಡಿಸೆಂಬರ್ 8, 2019
23 °C

ಪತ್ನಿ, ನಾದಿನಿಗೆ ಗುಂಡಿಟ್ಟು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಯೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾಟ್ನಾ: ಸೇನಾ ಯೋಧರೊಬ್ಬರು ಪಾಟ್ನಾ ಬಳಿಯ ಸೈದಾಬಾದ್ ಪ್ರದೇಶದಲ್ಲಿ ಭಾನುವಾರ ಚಲಿಸುತ್ತಿದ್ದ ಕಾರಿನಲ್ಲಿಯೇ ತಮ್ಮಿಬ್ಬರು ಮಕ್ಕಳ ಮುಂದೆ ಪತ್ನಿ ಮತ್ತು ನಾದಿನಿಗೆ ಗುಂಡಿಟ್ಟು ಕೊಂದಿದ್ದು, ಬಳಿಕ ತಾವು ಗುಂಡು ಹಾರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಲಿಗಂಜ್‌ ಡಿಎಸ್‌ಪಿ ಮನೋಜ್ ಕುಮಾರ್ ಪಾಂಡೆ ಮಾತನಾಡಿ, ಗುಜರಾತಿಗೆ ನಿಯೋಜನೆಗೊಂಡಿದ್ದ 33 ವರ್ಷದ ವಿಷ್ಣು ಕುಮಾರ್ ಶರ್ಮಾ ಎಂಬ ಯೋಧ, ತನ್ನ ಪತ್ನಿ ದಮನಿ ಶರ್ಮಾ ಮತ್ತು ನಾದಿನಿ ಡಿಂಪಲ್ ಶರ್ಮಾರಿಗೆ ಗುಂಡಿಟ್ಟು ಹತ್ಯೆಮಾಡಿದ್ದಾರೆ. ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಕಳೆದ ಎರಡು ತಿಂಗಳಿಂದಲೂ ವಿಷ್ಣು ಡೆಂಗೆಯಿಂದ ಬಳಲುತ್ತಿದ್ದರು. ಅನಾರೋಗ್ಯದಿಂದಾಗಿ ವಿಷ್ಣು ನಡವಳಿಕೆಯು ಇತ್ತೀಚಿನ ದಿನಗಳಲ್ಲಿ ಬದಲಾಗಿತ್ತು. ತಮ್ಮ ಗ್ರಾಮ ಅರಾದಿಂದ ಚಿಕಿತ್ಸೆಗೆಂದು ಪಾಟ್ನಾಕ್ಕೆ ತೆರಳುತ್ತಿದ್ದರು. ಮುಂಬದಿ ಸೀಟಿನಲ್ಲಿ ತಾತನ ಬಳಿಯಲ್ಲಿ ಕುಳಿತುಕೊಂಡಿದ್ದ ಇಬ್ಬರು ಮಕ್ಕಳು ಸುರಕ್ಷಿತವಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕೃತ್ಯಕ್ಕೆ ಬಳಸಿದ್ದ ಬಂದೂಕು, ವಿಷ್ಣುವಿನ ಗುರುತಿನ ಚೀಟಿ ಮತ್ತು ಕಾರನ್ನು ವಶಕ್ಕೆ ಪಡೆಯಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ವಿಷ್ಣುವಿನ ಏಳು ವರ್ಷದ ಪುತ್ರ ಸುದ್ದಿಗಾರರೊಂದಿಗೆ ಮಾತನಾಡಿ, ಘಟನೆಯ ವೇಳೆ ತನ್ನ ತಂದೆ, ತಾಯಿ ಮತ್ತು ಇತರರು ಕಾರಿನಲ್ಲಿದ್ದರು. ಮೊದಲಿಗೆ ಆಂಟಿಗೆ ಶೂಟ್ ಮಾಡಿದ ಅಪ್ಪ ಅಮ್ಮನಿಗೂ ಶೂಟ್ ಮಾಡಿದರು. ಬಳಿಕ ತಾನು ಶೂಟ್ ಮಾಡಿಕೊಂಡರು. ನಂತರ ನನ್ನ ತಾತ ಕಾರಿನಿಂದ ಕೆಳಗಿಳಿದು ಸಹಾಯಕ್ಕಾಗಿ ಮೊರೆಯಿಟ್ಟರು ಎಂದು ಹೇಳಿದ್ದಾನೆ.

ಬೋಜಪುರ ಜಿಲ್ಲೆಯ ಲಾಲ್‌ಗಂಜ್ ನಿವಾಸಿಯಾಗಿದ್ದ ವಿಷ್ಣು ಮತ್ತು ಪತ್ನಿ ನಡುವೆ ಘಟನೆಗೂ ಮುನ್ನ ವಿಚಾರವೊಂದಕ್ಕೆ ಜಗಳ ನಡೆದಿತ್ತು. ವಿಷ್ಣು ಗುಜರಾತಿನಿಂದ ರಜೆ ಮೇರೆಗೆ ಚಿಕಿತ್ಸೆ ಪಡೆಯಲೆಂದು ಆಗಮಿಸಿದ್ದರು. ಕೆಲ ದಿನಗಳಿಂದ ವಿಷ್ಣು ಅಸಾಮಾನ್ಯವಾಗಿ ವರ್ತಿಸುತ್ತಿದ್ದರು ಮತ್ತು ಬೇಗ ತಾಳ್ಮೆ ಕಳೆದುಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು