ಐಎಸ್‌ಐ ಹೆಣೆದ ಮೋಹಜಾಲದಲ್ಲಿ ಯೋಧರು: ರಾಷ್ಟ್ರ ಭದ್ರತೆಗೆ ಹೊಸ ಆತಂಕ

7

ಐಎಸ್‌ಐ ಹೆಣೆದ ಮೋಹಜಾಲದಲ್ಲಿ ಯೋಧರು: ರಾಷ್ಟ್ರ ಭದ್ರತೆಗೆ ಹೊಸ ಆತಂಕ

Published:
Updated:
Prajavani

ನವದೆಹಲಿ: ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸುಮಾರು 60 ಭಾರತೀಯ ಯೋಧರೊಂದಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‌ಐ) ನಕಲಿ ಫೇಸ್‌ಬುಕ್ ಖಾತೆಗಳನ್ನು ಬಳಸಿ ಸಂಪರ್ಕ ಸಾಧಿಸಿರುವ ಆತಂಕಕಾರಿ ವಿಷಯವನ್ನು ಮಿಲಿಟರಿ ಗುಪ್ತಚರ ವಿಭಾಗದ (ಮಿಲಿಟರಿ ಇಂಟಲಿಜೆನ್ಸ್– ಎಂಐ) ಮೂಲಗಳನ್ನು ಉಲ್ಲೇಖಿಸಿ ಪ್ರಕಟಿಸಿರುವ ‘ದಿ ಪ್ರಿಂಟ್’ ಜಾಲತಾಣದ ಲೇಖನ ಬಹಿರಂಗಪಡಿಸಿದೆ.

ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಮಿಲಿಟರಿ ಇಂಟಲಿಜೆನ್ಸ್ ಸೇನೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ‘ಅಂಕಿತಾ ಚೋಪ್ರಾ’ ಹೆಸರಿನ ಫೇಸ್‌ಬುಕ್ ಅಕೌಂಟ್ ಜೊತೆಗೆ ಹಂಚಿಕೊಳ್ಳುತ್ತಿದ್ದ ಯೋಧನನ್ನು ಈ ತಿಂಗಳ ಆರಂಭದಲ್ಲಿ ಬಂಧಿಸಿತ್ತು. ಭಾರತದ ಯೋಧರನ್ನು ಮೋಹಜಾಲಕ್ಕೆ ಸಿಲುಕಿಸುವ ಪ್ರಯತ್ನಕ್ಕೆ ಐಎಸ್‌ಐ ಈ ಅಕೌಂಟ್ ಬಳಸುತ್ತಿತ್ತು.

ಅಂಕಿತಾ ಚೋಪ್ರಾ ಹೆಸರಿನ ಫೇಸ್‌ಬುಕ್ ಅಕೌಂಟ್ 2016ರಿಂದ ಚಾಲ್ತಿಯಲ್ಲಿದೆ. ಸೆಕ್ಸ್ ಸಂಬಂಧಿಸಿದ ವಿಷಯಗಳ ಚಾಟಿಂಗ್ ಮತ್ತು ಉದ್ರೇಕಕಾರಿ ಚಿತ್ರಗಳನ್ನು ಶೇರ್ ಮಾಡುವ ಮೂಲಕ ಯೋಧರಿಗೆ ಮೋಹಜಾಲ ಬೀಸುತ್ತಿದ್ದ ಏಜೆಂಟ್‌ಗಳು ನಂತರದ ದಿನಗಳಲ್ಲಿ, ಯೋಧರಿಗೆ ಅವರು ಕೆಲಸ ಮಾಡುತ್ತಿರುವ ಸ್ಥಳದ ಚಿತ್ರಗಳನ್ನು ಕಳಿಸಿಕೊಡುವಂತೆ ಪುಸಲಾಯಿಸುತ್ತಿದ್ದರು. ಮೋಹಜಾಲದ (ಹನಿಟ್ರ್ಯಾಪ್) ಬಲೆಗೆ ಸಿಲುಕಿದ್ದ ಯೋಧನೊಬ್ಬ ಅರ್ಜುನ್‌ ಟ್ಯಾಂಕ್‌ನ ಚಿತ್ರಗಳ ಜೊತೆಗೆ ತಾನು ಪಾಲ್ಗೊಂಡಿದ್ದ ಮಿಲಿಟರಿ ಅಭ್ಯಾಸದ ಚಿತ್ರಗಳನ್ನೂ ಕಳಿಸಿಕೊಟ್ಟಿದ್ದ.

‘ಅಕಿಂತಾ ಚೋಪ್ರಾ ಹೆಸರಿನ ನಾನು ಭಾರತೀಯ ಸೇನೆಯ ಮೆಡಿಕಲ್ ಕಾಪ್ಸ್ಟ್‌ನಲ್ಲಿ (ವೈದ್ಯಕೀಯ ಸೇವೆ ಒದಗಿಸುವ ವಿಭಾಗ) ಕ್ಯಾಪ್ಟನ್ ಆಗಿದ್ದೇನೆ’ ಎಂದು ನಕಲಿ ಫೇಸ್‌ಬುಕ್ ಅಕೌಂಟ್ ಮೂಲಕ ಯೋಧರನ್ನು ನಂಬಿಸುವಲ್ಲಿ ಪಾಕ್ ಏಜೆಂಟ್‌ಗಳು ಯಶಸ್ವಿಯಾಗಿದ್ದರು.

ಇದನ್ನೂ ಓದಿ: ಐಎಸ್‌ಐ ಮೋಹಜಾಲದಲ್ಲಿ ಯೋಧರು?

ಹೆಚ್ಚಾಯ್ತು ಆತಂಕ

ಸೂಕ್ಷ್ಮ ಮಾಹಿತಿ ಪಡೆದುಕೊಳ್ಳಲು ಆಯಕಟ್ಟಿನ ಜಾಗದಲ್ಲಿರುವವರಿಗೆ ಚೆಲುವೆಯರ ಮೂಲಕ ಮೋಹಜಾಲ ಒಡ್ಡುವುದು ವಿಶ್ವದ ಬಹುತೇಕ ಎಲ್ಲ ದೇಶಗಳ ಗುಪ್ತಚರ ಜಾಲಗಳು ಅನುಸರಿಸುತ್ತಿರುವ ಹಳೆಯ ಕಾರ್ಯತಂತ್ರ. ಆದರೆ ಯೋಧರಿಗೇ ನೇರವಾಗಿ ಗಾಳಹಾಕಿ, ಅವರನ್ನು ಮೋಹಜಾಲಕ್ಕೆ ಸಿಲುಕಿಸಲು ಸಾಮಾಜಿಕ ಮಾಧ್ಯಮಗಳ ಸಾಮರ್ಥ್ಯವನ್ನು ಇಷ್ಟು ನಾಜೂಕಾಗಿ ಬಳಸಿರುವುದು ದೇಶದ ರಕ್ಷಣಾ ಪರಿಣಿತರ ನಿದ್ದೆಗೆಡಿಸಿದೆ. ಈ ಹಿನ್ನೆಲೆಯಲ್ಲಿ ಇದೀಗ ಸೇನೆ, ವಾಯುಪಡೆ ಮತ್ತು ನೌಕಾಪಡೆಗಳು ತನ್ನ ಎಲ್ಲ ಯೋಧರು ಮತ್ತು ಅಧಿಕಾರಿಗಳಿಗೆ ಆನ್‌ಲೈನ್ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿವೆ. ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ನಿರ್ದೇಶನ ನೀಡಿದೆ.

ಪಾಕ್ ಗುಪ್ತಚರ ಇಲಾಖೆ–ಐಎಸ್‌ಐ ಮೋಹಜಾಲ ಬೀಸುವ ಕೆಲಸವನ್ನು ಹಲವು ಗುಂಪುಗಳಿಗೆ ಹೊರಗುತ್ತಿಗೆಗೆ ನೀಡಿದೆ. ಈ ಗುಂಪುಗಳಿಗೆ ನಿಯಮಿತವಾಗಿ ಹಣ ಸಂದಾಯ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ. ಮಾಹಿತಿ ನೀಡಬಲ್ಲ ವ್ಯಕ್ತಿಯನ್ನು ‘ಪ್ರೇ’ (ಬಲಿಪ್ರಾಣಿ ಅಥವಾ ಮಿಕ) ಗುರುತಿಸಿ, ಪರಿಚಯ ಮಾಡಿಕೊಂಡು ವಿಶ್ವಾಸಗಳಿಸುವುದು ಈ ಗುಂಪುಗಳ ಕೆಲಸ. ಮೋಹಜಾಲಕ್ಕೆ ಸಿಲುಕಿದ ಯೋಧ ಸೂಕ್ಷ್ಮ ಮಾಹಿತಿ ಕಳಿಸಲು ಆರಂಭಿಸಿದ ನಂತರ ಐಎಸ್‌ಐ ನೇರವಾಗಿ ಕಾರ್ಯಾಚರಣೆಗೆ ಇಳಿಯುತ್ತದೆ ಎಂದು ‘ಪ್ರಿಂಟ್’ ವರದಿ ಹೇಳಿದೆ.

ವಿಷಯ ಬಹಿರಂಗಗೊಂಡ ನಂತರ ಎಚ್ಚೆತ್ತಿರುವ ಸೇನೆ ಇದೀಗ ತನ್ನೆಲ್ಲ ಸಿಬ್ಬಂದಿಯ ಸಾಮಾಜಿಕ ಮಾಧ್ಯಮ ಅಕೌಂಟ್‌ಗಳ ಮೇಲೆ ಕಣ್ಣಿಟ್ಟಿದೆ. ಈ ಜವಾಬ್ದಾರಿಯನ್ನು ಹಿರಿಯ ಅಧಿಕಾರಿಗಳೇ ಸ್ವತಃ ಹೊತ್ತುಕೊಂಡಿದ್ದಾರೆ.

ಕಾರ್ಯಾಚರಣೆ ಹೇಗೆ?

ರಾಜಸ್ಥಾನದ ಮರಳುಗಾಡಿನಲ್ಲಿ ಯುದ್ಧ ಟ್ಯಾಂಕ್ ಮುಂದೆ ನಿಂತು ಫೋಟೊ ತೆಗೆಸಿಕೊಂಡ ಯೋಧನೊಬ್ಬ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ ಎಂದಿಟ್ಟುಕೊಳ್ಳಿ. ತಕ್ಷಣ ಒಂದಿಷ್ಟು ಜನರು ಲೈಕ್ ಮಾಡುತ್ತಾರೆ ಅಥವಾ ಶೇರ್ ಮಾಡುತ್ತಾರೆ. ಫೇಸ್‌ಬುಕ್‌ನಲ್ಲಿ ಈ ವಿಷಯವ ಬಹುಬೇಗನೇ ಹರಡುತ್ತದೆ. ಇಂಥ ಮಾಹಿತಿಯನ್ನೇ ಕಲೆಹಾಕಿ ವಿಶ್ವೇಷಿಸುವ ಐಎಸ್‌ಐ ಮೋಹಜಾಲದ ತಂಡಗಳು ತಮ್ಮ ಸಂಭಾವ್ಯ ಬಲಿಯನ್ನು (ಪ್ರೇ) ಗುರುತಿಸಿಕೊಂಡು, ಬಲೆ ಬೀಸಲು ಕಾರ್ಯತಂತ್ರ ಹೆಣೆಯುತ್ತವೆ.

ಅಧಿಕಾರಿಗಳು ಮತ್ತು ಯೋಧರನ್ನು ನಿರ್ವಹಿಸಲು ಐಎಸ್‌ಐ ಪ್ರತ್ಯೇಕ ಕಾರ್ಯತಂತ್ರ ಅನುಸರಿಸುತ್ತಿದೆ. ಈ ತಂಡದ ಸದಸ್ಯರು ಯೋಧರನ್ನು ನೇರವಾಗಿ ಸಂಪರ್ಕಿಸಿ, ಬೇಗನೇ ವಿಶ್ವಾಸಗಳಿಸುತ್ತಾರೆ. ಪರಿಚಯವಾದ ಕೆಲವೇ ದಿನಗಳಲ್ಲಿ ನಿರ್ದಿಷ್ಟ ಮಾಹಿತಿ ಕಳುಹಿಸಲು ಪುಸಲಾಯಿಸುತ್ತಾರೆ. ಆದರೆ ಅಧಿಕಾರಿಗಳ ವಿಚಾರದಲ್ಲಿ ಬಳಕೆಯಾಗುವ ಭಾಷೆ ಮತ್ತು ಕಾರ್ಯತಂತ್ರ ಸಂಪೂರ್ಣ ಭಿನ್ನ. ಆದರೆ ಒಮ್ಮೆ ಅಧಿಕಾರಿಯೊಬ್ಬರ ವಿಶ್ವಾಸ ಗಳಿಸಲು ಸಾಧ್ಯವಾದರೆ ಸಿಗುವ ಮಾಹಿತಿಯೂ ಸಾಕಷ್ಟು ಮಹತ್ವದ್ದೇ ಆಗಿರುತ್ತದೆ ಎನ್ನುವುದು ಐಎಸ್‌ಐ ಅರಿಯದ ಸಂಗತಿಯೇನಲ್ಲ.

ಕಳೆದ ವರ್ಷ ಪಾಕ್ ಮೂಲದ ಫೇಸ್‌ಬುಕ್ ಅಕೌಂಟ್‌ಗಳೊಂದಿಗೆ ಅತಿಸೂಕ್ಷ್ಮಿ ಮಾಹಿತಿ ಹಂಚಿಕೊಳ್ಳುತ್ತಿದ್ದಾಗ ಸಿಕ್ಕಿಬಿದ್ದಿದ್ದ ವಾಯುಪಡೆಯ ಗ್ರೂಪ್‌ ಕ್ಯಾಪ್ಟನ್ ಒಬ್ಬರನ್ನು ಬಂಧಿಸಿದ್ದು ನಿಮಗೆ ನಿನಪಿರಬಹುದು. ಇವರ ಮೂಲಕ ಸಾಕಷ್ಟು ಮಹತ್ವದ ಮಾಹಿತಿ ಐಎಸ್‌ಐ ಪಾಲಾಗಿತ್ತು. ಈ ಅಧಿಕಾರಿಯನ್ನು ಮೋಹಜಾಲಕ್ಕೆ ಸಿಲುಕಿಸಲು ಸಾಕಷ್ಟು ಸಮಯ ಮತ್ತು ಸುಧಾರಿತ ಕಾರ್ಯತಂತ್ರವನ್ನು ಐಎಸ್‌ಐ ಅನುಸರಿಸಿತ್ತು. ಈ ಅಧಿಕಾರಿ ಗೌಪ್ಯ ರಕ್ಷಣಾ ದಾಖಲೆಗಳ ಫೋಟೊ ತೆಗೆದು ವಾಟ್ಸ್ಯಾಪ್ ಮೂಲಕ ಐಎಸ್‌ಐ ಏಜೆಂಟ್‌ಗಳಿಗೆ ಕಳುಹಿಸಿದ್ದರು ಎಂದು ‘ಪ್ರಿಂಟ್’ ವರದಿ ಉಲ್ಲೇಖಿಸಿದೆ.

ಭಾರತೀಯ ಯೋಧರೊಂದಿಗೆ ಸಂಪರ್ಕ ಸಾಧಿಸಿರುವ ಹಲವು ಫೇಸ್‌ಬುಕ್ ಅಕೌಂಟ್‌ಗಳನ್ನು ಪಾಕಿಸ್ತಾನದಲ್ಲಿ ಪುರುಷರೇ ನಿರ್ವಹಿಸುತ್ತಿದ್ದಾರೆ. ಮೋಹಜಾಲದ ತಂಡಗಳು ಪಶ್ಚಿಮ (ಪಾಕ್) ಗಡಿಯಲ್ಲಿ ನಿಯೋಜಿತರಾದ ಯೋಧರನ್ನೇ ಗುರಿಯಾಗಿಸುತ್ತಿರುವುದು ಗುಪ್ತಚರ ಇಲಾಖೆಯ ತನಿಖೆ ವೇಳೆ ತಿಳಿದುಬಂದಿದೆ.

‘ಉತ್ತರ ವಲಯದಲ್ಲಿ ಇಂಟರ್ನೆಟ್ ಸಂಪರ್ಕ ಸಾಮಾನ್ಯವಾಗಿ ದುರ್ಬಲವಾಗಿರುತ್ತದೆ. ಯೋಧರಿಗೂ ಮೈತುಂಬಾ ಕೆಲಸವಿರುತ್ತದೆ. ಆದರೆ ಪಶ್ಚಿಮ ಗಡಿಯಲ್ಲಿ ಹಾಗಲ್ಲ. ಅಲ್ಲಿ ಇಂಟರ್ನೆಟ್‌ ಸದಾ ಸಿಗುತ್ತದೆ. ಯೋಧರಿಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕಾಲಕಳೆಯಲು ಸಾಕಷ್ಟು ಸಮಯವೂ ಸಿಗುತ್ತದೆ’ ಎಂದು ಸೇನಾ ಮೂಲಗಳು ಹೇಳುತ್ತವೆ.

ಸೋಷಿಯಲ್ ಮೀಡಿಯಾ ನಿಯಮಗಳು

ರಕ್ಷಣಾ ಪಡೆಗಳಿಗಾಗಿ ರೂಪಿಸಿರುವ ಸೋಷಿಯಲ್ ಮೀಡಿಯಾ ನಿಯಮಗಳು ಇಂತಿವೆ...

* ಸಾಮಾಜಿಕ ಮಾಧ್ಯಮಗಳಲ್ಲಿ ಪಾರ್ನ್ (ಅಶ್ಲೀಲ ವೆಬ್‌ಸೈಟ್) ನೋಡುವಂತಿಲ್ಲ

* ಸಮವಸ್ತ್ರದಲ್ಲಿರುವ ಚಿತ್ರಗಳನ್ನು ಹಂಚಿಕೊಳ್ಳುವಂತಿಲ್ಲ

* ತಮ್ಮ ರ‍್ಯಾಂಕ್ (ಹುದ್ದೆ), ಯೂನಿಟ್ ಮತ್ತು ಕೆಲಸ ಮಾಡುವ ಸ್ಥಳ, ಕೆಲಸದ ವಿವರ ನೀಡಿದರೆ ಬಹುಮಾನ ಸಿಗುತ್ತದೆ ಎಂದು ಆಮಿಷ ಒಡ್ಡುವ ಯಾವುದೇ ಜಾಹೀರಾತು ಕ್ಲಿಕ್ ಮಾಡುವಂತಿಲ್ಲ

* ಅಪರಿಚಿತರ ಫ್ರೆಂಡ್‌ ರಿಕ್ವೆಸ್ಟ್ ಒಪ್ಪಿಕೊಳ್ಳಬಾರದು

* ಯೋಧರ ಕುಟುಂಬದ ಸದಸ್ಯರು ಸಹ ಮಿಲಿಟರಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಹಂಚಿಕೊಳ್ಳುವಂತಿಲ್ಲ

* ವೈಯಕ್ತಿಕ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳಲ್ಲಿ ಮಿಲಿಟರಿ ಮಾಹಿತಿ ಸಂಗ್ರಹಿಸುವಂತಿಲ್ಲ

ಬರಹ ಇಷ್ಟವಾಯಿತೆ?

 • 21

  Happy
 • 0

  Amused
 • 2

  Sad
 • 0

  Frustrated
 • 7

  Angry

Comments:

0 comments

Write the first review for this !