ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಸೇನೆ ಬಲಿಷ್ಠವಾಗುವುದು ಕಾಂಗ್ರೆಸ್‌ಗೆ ಬೇಕಿಲ್ಲ: ಮೋದಿ

ಸೋನಿಯಾ ಗಾಂಧಿ ಲೋಕಸಭಾ ಕ್ಷೇತ್ರದಲ್ಲಿ ವಾಗ್ದಾಳಿ
Last Updated 16 ಡಿಸೆಂಬರ್ 2018, 13:01 IST
ಅಕ್ಷರ ಗಾತ್ರ

ರಾಯ್‌ ಬರೇಲಿ (ಉತ್ತರ ಪ್ರದೇಶ): ಭಾರತೀಯ ಸೇನೆ ಬಲಿಷ್ಠವಾಗುವುದು ಕಾಂಗ್ರೆಸ್‌ಗೆ ಬೇಕಾಗಿಲ್ಲ. ಹೀಗಾಗಿ ರಕ್ಷಣಾ ಒಪ್ಪಂದದ ಬಗ್ಗೆ ಅಪಸ್ವರ ಎತ್ತುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಲೋಕಸಭಾ ಕ್ಷೇತ್ರ ರಾಯ್‌ ಬರೇಲಿಯಲ್ಲಿ ಭಾನುವಾರ ನಡೆದ ಸರ್ಕಾರಿ ಸಮಾರಂಭದಲ್ಲಿ 50 ನಿಮಿಷ ಮಾತನಾಡಿದ ಅವರು, ಅರ್ಧಗಂಟೆಯನ್ನು ರಫೇಲ್‌ ಮತ್ತು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿಗೆ ಮೀಸಲಿಟ್ಟರು.

‘ರಕ್ಷಣಾ ಸಚಿವಾಲಯ, ರಕ್ಷಣಾ ಸಚಿವರು, ಭಾರತೀಯ ವಾಯುಪಡೆ ಅಧಿಕಾರಿಗಳು ಮತ್ತು ಫ್ರಾನ್ಸ್‌ ಸರ್ಕಾರದ ವಿರುದ್ಧ ಬೊಬ್ಬೆ ಹೊಡೆಯುತ್ತಿದ್ದ ಕಾಂಗ್ರೆಸ್‌ಗೆ ಈಗ ಸುಪ್ರೀಂ ಕೋರ್ಟ್‌ ಕೂಡ ಸುಳ್ಳುಗಾರನಂತೆ ಕಾಣತೊಡಗಿದೆ’ ಎಂದು ಮೋದಿ ಟೀಕಿಸಿದರು.

‘ಶಸ್ತ್ರಾಸ್ತ್ರ ದಲ್ಲಾಳಿಗಳಾದ ಒಟ್ಟಾವಿಯೊ ಕ್ವಟ್ರೊಚಿ ಮತ್ತು ಕ್ರಿಶ್ಚಿಯನ್‌ ಮಿಷೆಲ್‌ ಅಂಥವರನ್ನು ಕೇಂದ್ರ ಸರ್ಕಾರ ರಕ್ಷಣಾ ಒಪ್ಪಂದದಿಂದ ದೂರವಿಟ್ಟಿರುವುದು ಕಾಂಗ್ರೆಸ್‌ ಆಕ್ರೋಶಕ್ಕೆ ಕಾರಣ’ ಎಂದು ಅವರು ಕುಹಕವಾಡಿದರು.

ರಫೇಲ್‌ ಒಪ್ಪಂದದಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕ್ಲೀನ್‌ ಚಿಟ್‌ ನೀಡಿದ ನಂತರ ಹತಾಶಗೊಂಡಿರುವ ಕಾಂಗ್ರೆಸ್‌ ಪಕ್ಷ ಈ ದೇಶದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಜನರಲ್ಲಿ ಅಪನಂಬುಗೆ ಹುಟ್ಟು ಹಾಕುವ ಪ್ರಯತ್ನ ನಡೆಸಿದೆ ಎಂದು ಮೋದಿ ಹರಿಹಾಯ್ದರು.

ಐದು ರಾಜ್ಯಗಳ ಚುನಾವಣಾ ಸೋಲಿನ ನಂತರ ಮೊದಲ ಬಾರಿಗೆ ಪ್ರಧಾನಿ ಭಾಗವಹಿಸಿದ ಮೊದಲ ಸಾರ್ವಜನಿಕ ಸಮಾರಂಭ ಇದಾಗಿದೆ.

ಬೋಫೊರ್ಸ್‌ ಸೇರಿದಂತೆ ಕಾಂಗ್ರೆಸ್‌ ಸರ್ಕಾರ ಅವಧಿಯಲ್ಲಿ ನಡೆದಿದ್ದ ಎಲ್ಲ ರಕ್ಷಣಾ ಒಪ್ಪಂದಗಳಲ್ಲಿ ‘ಕ್ವಟ್ರೋಚಿ ಮಾಮಾ’ ಶಾಮೀಲಾಗಿದ್ದಾರೆ ಎಂದು ದೂರಿದರು.

ದುಬೈನಿಂದ ಸಿಬಿಐ ಅಧಿಕಾರಿಗಳು ಇತ್ತೀಚೆಗೆ ಬಂಧಿಸಿ ಕರೆತಂದ ಆಗಸ್ಟಾವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಒಪ್ಪಂದದ ದಲ್ಲಾಳಿ ಕ್ರಿಶ್ಚಿಯನ್‌ ಮಿಷೆಲ್‌ ಕುರಿತು ಪ್ರಸ್ತಾಪಿಸಿದ ಮೋದಿ, ‘ನಾವು ಈಗಾಗಲೇ ಒಬ್ಬ ಅಂಕಲ್‌ನನ್ನು ಹಿಡಿದು ಭಾರತಕ್ಕೆ ಕರೆ ತಂದಿದ್ದೇವೆ’ ಎಂದರು.

ಶಸ್ತಾಸ್ತ್ರ ದಲ್ಲಾಳಿ ಕ್ರಿಶ್ಚಿಯನ್‌ ಮಿಷೆಲ್‌ ರಕ್ಷಣೆಗೆ ಕಾಂಗ್ರೆಸ್‌ ತನ್ನ ವಕೀಲರನ್ನು ಕೋರ್ಟ್‌ಗೆ ಕಳಿಸಿರುವುದನ್ನು ದೇಶದ ಜನತೆ ಗಮನಿಸುತ್ತಿದ್ದಾರೆ ಎಂದು ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT