ಯಾವ ರಕ್ಷಣಾ ಒಪ್ಪಂದಗಳಲ್ಲಿಯೂ ಸೋನಿಯಾ, ರಾಹುಲ್‌ ಹಸ್ತಕ್ಷೇಪ ಮಾಡಿಲ್ಲ: ಆಂಟನಿ

7
ಸುಳ್ಳು ಸೃಷ್ಟಿಸಲು ತನಿಖಾ ಸಂಸ್ಥೆಗಳ ದುರ್ಬಳಕೆ: ಕೇಂದ್ರದ ವಿರುದ್ಧ ಮಾಜಿ ರಕ್ಷಣಾ ಸಚಿವ ತೀಕ್ಷ್ಣ ಟೀಕೆ

ಯಾವ ರಕ್ಷಣಾ ಒಪ್ಪಂದಗಳಲ್ಲಿಯೂ ಸೋನಿಯಾ, ರಾಹುಲ್‌ ಹಸ್ತಕ್ಷೇಪ ಮಾಡಿಲ್ಲ: ಆಂಟನಿ

Published:
Updated:

ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್ ಖರೀದಿ ಪ್ರಕ್ರಿಯೆ ಸೇರಿದಂತೆ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಯಾವ ರಕ್ಷಣಾ ಒಪ್ಪಂದಗಳಲ್ಲೂ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಮತ್ತು  ರಾಹುಲ್‌ ಗಾಂಧಿ ಹಸ್ತಕ್ಷೇಪ ಮಾಡಿಲ್ಲ ಎಂದು ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ ಹೇಳಿದ್ದಾರೆ.

ಪ್ರಕರಣದ ಬಂಧಿತ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್‌ ಮಿಷೆಲ್‌ ವಿಚಾರಣೆ ಸಂದರ್ಭದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಹೆಸರು ಪ್ರಸ್ತಾಪಿಸಿದ್ದಾನೆ ಎಂದು ಜಾರಿ ನಿರ್ದೇಶನಾಲಯ ದೆಹಲಿ ನ್ಯಾಲಯಾಲಯಕ್ಕೆ ತಿಳಿಸಿದ ನಂತರ ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ದಾಳಿ ತೀವ್ರಗೊಂಡಿದೆ. ಇದರ ಬೆನ್ನಲ್ಲೇ ಪಕ್ಷದ ಹಿರಿಯ ನಾಯಕರ ರಕ್ಷಣೆಗೆ ಮುಂದಾಗಿರುವ ಆಂಟನಿ, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಸಂಸತ್ ಭವನದ ಹೊರಗೆ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಿಜೆಪಿ ಮತ್ತು ಕೇಂದ್ರ ಸರ್ಕಾರವು ಸುಳ್ಳುಗಳನ್ನು ಹುಟ್ಟು ಹಾಕಲು ಜಾರಿ ನಿರ್ದೇಶನಾಲಯದಂತಹ (ಇ.ಡಿ) ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಯಾವುದೇ ದಾಖಲೆಗಳಿಲ್ಲದೆ ರಕ್ಷಣಾ ವಿಷಯಗಳನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ’ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್‌ ರಫೇಲ್‌ ಯುದ್ಧ ವಿಮಾನ ಹಗರಣವನ್ನು ಬಯಲಿಗೆಳೆದಿರುವುದಕ್ಕೆ ಪ್ರತಿಯಾಗಿ ನರೇಂದ್ರ ಮೋದಿ ಸರ್ಕಾರ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಒಪ್ಪಂದವನ್ನು ಹೆಣೆದಿದೆ. ಜನರ ಗಮನ ಬೇರೆಡೆ ಸೆಳೆಯಲು ನಿರಾಧಾರ ಆರೋಪಗಳನ್ನು ಮಾಡುತ್ತಿದೆ ಎಂದು ಆಂಟನಿ ಟೀಕಿಸಿದ್ದಾರೆ.

‘ಕಂಪನಿ ಪರ ಒಲವು ತೋರಿದ್ದು ಮೋದಿ ಸರ್ಕಾರ’

‘ರಕ್ಷಣಾ ಸಾಮಗ್ರಿಗಳನ್ನು ಪೂರೈಸುವ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆ ಯುಪಿಎ ಸರ್ಕಾರ ಶಿಫಾರಸು ಮಾಡಿತ್ತು. ಆದರೆ, ನಂತರ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರವೇ ಆ ಶಿಫಾರಸನ್ನು ಕಡೆಗಣಿಸಿ ಕಂಪನಿಗೆ ಕ್ಲೀನ್‌ಚಿಟ್‌ ನೀಡಿತ್ತು’ ಎಂದು ಆಂಟನಿ ಹೇಳಿದ್ದಾರೆ.

ಕಾಂಗ್ರೆಸ್ ಈ ಪ್ರಕರಣವನ್ನು ಮರೆಮಾಚಲು ಹೊರಟಿದ್ದೇ ಆಗಿದ್ದಲ್ಲಿ ನಾವೇಕೆ ಸಿಬಿಐ ತನಿಖೆಗೆ ಆದೇಶಿಸುತ್ತಿದ್ದೆವು? ಹೋರಾಟ ನಡೆಸಲು ಏಕೆ ಇಟಲಿಗೆ ತೆರಳಿದ್ದೆವು ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ‘ಹೆಲಿಕಾಪ್ಟರ್‌ ಖರೀದಿ ಒಪ್ಪಂದದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್‌ ಮಿಷೆಲ್, ಗಾಂಧಿ ಕುಟುಂಬದ ಹಳೆಯ ಸ್ನೇಹಿತ. ಕಾಂಗ್ರೆಸ್‌ ನಾಯಕರ ಕುಟುಂಬ ಹಾಗೂ ಮಿಷೆಲ್‌ ನಡುವಣ ಸ್ನೇಹ, ಸಂಬಂಧ ನಿನ್ನೆ, ಮೊನ್ನೆಯದಲ್ಲ. ಹಲವಾರು ವರ್ಷಗಳಷ್ಟು ಹಳೆಯದ್ದು’ ಎಂದು ಹೇಳಿದ್ದರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !