ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಇಂದು ಕೇಂದ್ರದಿಂದ ಪ್ಯಾಕೇಜ್‌?

ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಸಾಧ್ಯತೆ
Last Updated 27 ಜನವರಿ 2019, 19:30 IST
ಅಕ್ಷರ ಗಾತ್ರ

ನವದೆಹಲಿ: ರೈತರ ಆದಾಯ ಹೆಚ್ಚಳ ಮತ್ತು ಕೃಷಿ ಕ್ಷೇತ್ರದ ಸಂಕಷ್ಟ ಪರಿಹಾರಕ್ಕೆ ಕೇಂದ್ರ ಸರ್ಕಾರ ಸೋಮವಾರ ಪ‍್ಯಾಕೇಜ್‌ ಘೋಷಿಸುವ ಸಾಧ್ಯತೆ ಇದೆ. ಸೋಮವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ‍್ಯಾಕೇಜ್‌ಗೆ ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯಕುಸಿತ ಪರಿಹಾರಕ್ಕೆ ಕೃಷಿ ಸಚಿವಾಲಯವು ಪ್ರಸ್ತಾವ ಸಿದ್ಧಪಡಿಸಿದೆ. ಸಚಿವ ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ ಈ ವಿಚಾರ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಸಂಕಷ್ಟ ಪರಿಹಾರಕ್ಕಾಗಿ ಅಲ್ಪಾವಧಿ ಮತ್ತು ದೀರ್ಘಾವಧಿ ಕ್ರಮಗಳನ್ನು ಕೃಷಿ ಸಚಿವಾಲಯವು ಶಿಫಾರಸು ಮಾಡಿದೆ. ಈ ಕ್ರಮಗಳನ್ನು ಜಾರಿಗೆ ತರಬೇಕಿದ್ದರೆ ಭಾರಿ ಮೊತ್ತ ಬೇಕಾಗುತ್ತದೆ. ಹಾಗಾಗಿ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದು ಅಗತ್ಯ.

2019–20ರ ಬಜೆಟ್‌ಗೆ ಮುನ್ನ ಕೃಷಿಪ್ಯಾಕೇಜ್‌ ಘೋಷಣೆ ಸಾಧ್ಯತೆ ಇದೆ ಎಂದುಕೃಷಿ ಸಚಿವ ರಾಧಾಮೋಹನ್‌ ಸಿಂಗ್‌ ಅವರು ಇತ್ತೀಚೆಗೆ ಹೇಳಿದ್ದರು. ಕೇಂದ್ರದ ಬಜೆಟ್‌ ಫೆ. 1ರಂದು ಮಂಡನೆ ಆಗಲಿದೆ.

ಯಾವುದೇ ಹೊಸ ಯೋಜನೆಯನ್ನು ಜಾರಿಗೆ ತರಲು ಬೇಕಾದಷ್ಟು ಸಮಯ ಸರ್ಕಾರದ ಬಳಿ ಇಲ್ಲ. ಕೆಲವೇ ವಾರಗಳಲ್ಲಿ ಲೋಕಸಭಾ ಚುನಾವಣೆ ಬರಲಿದೆ. ಹಾಗಾಗಿ, ಚುನಾವಣೆಯಲ್ಲಿ ಲಾಭ ಆಗಬಹುದಾದಂತಹ ಮತ್ತು ತ್ವರಿತವಾಗಿ ಜಾರಿ ಮಾಡಲು ಸಾಧ್ಯವಾಗುವ ಯೋಜನೆಯನ್ನು ಸರ್ಕಾರ ರೂಪಿಸಬೇಕಾಗುತ್ತದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ.

ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಳಿಕ ರೈತರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ರಾಜ್ಯಗಳಲ್ಲಿ ಸೋಲಲು ರೈತರ ಆಕ್ರೋಶವೇ ಕಾರಣ ಎಂಬುದನ್ನು ಸರ್ಕಾರ ಮನಗಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಬಾರಿ ಇಳುವರಿ ಹೆಚ್ಚಳದಿಂದಾಗಿ ಕೃಷಿ ಉತ್ಪನ್ನಗಳ ಬೆಲೆ ಕುಸಿದಿರುವುದು ರೈತರ ಸಂಕಷ್ಟಕ್ಕೆ ಮುಖ್ಯ ಕಾರಣವಾಗಿದೆ.

ಪ್ರಸ್ತಾವಗಳು

*ಬೆಳೆ ಸಾಲವನ್ನು ಸರಿಯಾಗಿ ಮರುಪಾವತಿ ಮಾಡಿದ ರೈತರಿಗೆ ಬಡ್ಡಿ ಮನ್ನಾ ಮಾಡುವುದು ಕೃಷಿ ಸಚಿವಾಲಯದ ಪ್ರಸ್ತಾವದಲ್ಲಿ ಸೇರಿದೆ. ಇದಕ್ಕಾಗಿ ₹15 ಸಾವಿರ ಕೋಟಿ ಬೇಕಾಗುತ್ತದೆ.

* ಆಹಾರ ಬೆಳೆಗಳ ವಿಮಾ ಕಂತಿನ ಸಂಪೂರ್ಣ ಮೊತ್ತವನ್ನು ಮನ್ನಾ ಮಾಡುವ ಪ್ರಸ್ತಾವ ಇದೆ.

* ನಿಗದಿತ ಮೊತ್ತವನ್ನು ರೈತರಿಗೆ ಬ್ಯಾಂಕ್‌ ಖಾತೆ ಮೂಲಕ ನೀಡುವ ಪ್ರಸ್ತಾವ ಪರಿಶೀಲನೆಯಲ್ಲಿದೆ. ತೆಲಂಗಾಣ ಮತ್ತು ಒಡಿಶಾ ರಾಜ್ಯ ಸರ್ಕಾರಗಳು ಇಂತಹ ಯೋಜನೆ ಜಾರಿಗೆ ತಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT