ಶನಿವಾರ, ಜೂಲೈ 4, 2020
28 °C
ಆರು ಮಾರ್ಗಗಳಲ್ಲಿ ರೈಲು ಸಂಚಾರ; ಮಾಸ್ಕ್‌ ಕಡ್ಡಾಯ

ಶ್ರಮಿಕ ವಿಶೇಷ ರೈಲು: ವಲಸೆ ಕಾರ್ಮಿಕರ ನಿಟ್ಟುಸಿರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ತಲುಪಿಸಲು ರೈಲ್ವೆ ಇಲಾಖೆಯು ಆರಂಭಿಸಿರುವ ‘ಶ್ರಮಿಕ ವಿಶೇಷ’ ರೈಲು ಸೇವೆ ಶುಕ್ರವಾರ ಬೆಳಗಿನ ಜಾವ ಶುರುವಾಯಿತು. ಪ್ರಯಾಣಿಕರು ಹಾಗೂ ರೈಲ್ವೆ ಸಿಬ್ಬಂದಿ ಅಂತರ ಕಾಯ್ದುಕೊಳ್ಳುವಂತೆ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿತ್ತು. 

ಈ ಸರಣಿಯ ಮೊದಲ ರೈಲು ತೆಲಂಗಾಣದ ಲಿಂಗಂಪಲ್ಲಿಯಿಂದ ಜಾರ್ಖಂಡ್‌ನ ಹಾತಿಯಾಗೆ ಪ್ರಯಾಣಿಸಿತು. ಇನ್ನೂ ಐದು ಮಾರ್ಗಗಳಲ್ಲಿ ಶುಕ್ರವಾರ ರಾತ್ರಿ ರೈಲುಗಳ ಸಂಚಾರ ನಿಗದಿಯಾಗಿವೆ. ಕೇರಳದ ಆಲವಾವದಿಂದ ಭುವನೇಶ್ವರ, ನಾಸಿಕ್‌ನಿಂದ ಲಖನೌ, ನಾಸಿಕ್‌ನಿಂದ ಭೋಪಾಲ್‌, ಜೈಪುರದಿಂದ ಪಟ್ನಾ, ಹಾಗೂ ಕೋಟಾದಿಂದ ಹಾತಿಯಾಗೆ ನಿರಾಶ್ರಿತ ಕಾರ್ಮಿಕರನ್ನು ಹೊತ್ತು ಪ್ರಯಾಣಿಸಲಿವೆ. 

ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಲಾಕ್‌ಡೌನ್ ಘೋಷಣೆ ವೇಳೆ ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದ ಜನರನ್ನು ಈ ರೈಲುಗಳು ಕರೆದೊಯ್ಯಲಿವೆ. 

‘ಪ್ರಯಾಣಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿದ ಬಳಿಕವಷ್ಟೇ ರಾಜ್ಯಗಳು ಅವರನ್ನು ರೈಲಿನಲ್ಲಿ ಕಳುಹಿಸಿಕೊಡಲಿವೆ’ ಎಂದು ಇಲಾಖೆಯ ವಕ್ತಾರ ರಾಜೇಶ್ ದತ್ ಬಾಜಪೈ ತಿಳಿಸಿದ್ದಾರೆ.

ಗೋಪ್ಯತೆ ಕಾಪಾಡಿದ್ದ ಇಲಾಖೆ
ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಲು ವಿಶೇಷ ರೈಲು ಓಡಿಸುವ ನಿರ್ಧಾರ ಮಾಡಿದ್ದ ಇಲಾಖೆಯು, ಪ್ರಯಾಣಿಕರ ದಟ್ಟಣೆ ಉಂಟಾಗದಂತೆ ತಪ್ಪಿಸಲು ಸಾಕಷ್ಟು ಗೋಪ್ಯತೆ ಕಾಪಾಡಿಕೊಂಡಿತ್ತು. ವಿಶೇಷ ರೈಲು ಓಡಿಸಲಾಗುತ್ತದೆ ಎಂಬ ವದಂತಿಯಿಂದಾಗಿ ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ಈ ಹಿಂದೆ ಸಾಕಷ್ಟು ಸಂಖ್ಯೆಯ ಪ್ರಯಾಣಿಕರು ರೈಲ್ವೆ ನಿಲ್ದಾಣಗಳಿಗೆ ದೌಡಾಯಿಸಿ ಸಮಸ್ಯೆ ಉಂಟಾಗಿತ್ತು. 

ಅಂತರರಾಜ್ಯ ರೈಲು ಪ್ರಯಾಣಕ್ಕೆ ಗುರುವಾರ ರಾತ್ರಿಯಷ್ಟೇ ಕೇಂದ್ರ ಗೃಹಸಚಿವಾಲಯ ಅನುಮತಿ ನೀಡಿತ್ತು. ರೈಲ್ವೆ ಇಲಾಖೆಯಿಂದ ಸಂಬಂಧಿಸಿದ ರೈಲ್ವೆ ವಲಯಕ್ಕೆ  ರಾತ್ರಿ 11 ಗಂಟೆಗೆ ಮಾಹಿತಿ ತಲುಪಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ 4.50ಕ್ಕೆ ಮೊದಲ ರೈಲು ತೆಲಂಗಾಣದಿಂದ ಹೊರಟಿತು. ಇದರಲ್ಲಿ 1,300 ವಲಸೆ ಕಾರ್ಮಿಕರು ಪ್ರಯಾಣಿಸಿದರು.

400 ರೈಲುಗಳನ್ನು ಇಲಾಖೆ ಸನ್ನದ್ಧವಾಗಿ ಇರಿಸಿಕೊಂಡಿದೆ. ಸಾವಿರ ವಿಶೇಷ ರೈಲು ಓಡಿಸಲೂ ಸಿದ್ಧತೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.  

ಪ್ರಯಾಣ ವೆಚ್ಚ ರಾಜ್ಯಗಳ ಹೆಗಲಿಗೆ
ವಿಶೇಷ ರೈಲುಗಳಲ್ಲಿ ಪ್ರಯಾಣಿಸುವ ವಲಸೆ ಕಾರ್ಮಿಕರ ಪ್ರಯಾಣ ವೆಚ್ಚವನ್ನು ರಾಜ್ಯ ಸರ್ಕಾರಗಳು ಭರಿಸಲಿವೆ ಎಂದು ಶುಕ್ರವಾರ ಹೊರಡಿಸಿದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸ್ಲೀಪರ್‌ ದರ್ಜೆಯ ಟಿಕೆಟ್ ಜತೆಗೆ ಸೂಪರ್‌ಫಾಸ್ಟ್ ದರವನ್ನು (ಪ್ರತಿ ಪ್ರಯಾಣಿಕನ ಊಟ ₹30 ಹಾಗೂ ಕುಡಿಯುವ ನೀರಿನ ₹20 ದರ) ರಾಜ್ಯ ಸರ್ಕಾರಗಳು ಪಾವತಿಸಬೇಕಿದೆ. ಆರು ಮಾರ್ಗಗಳಲ್ಲಿ ಸದ್ಯಕ್ಕೆ ಅನುಮತಿ ನೀಡಲಾಗಿದೆ. 

ರೈಲ್ವೆ ಇಲಾಖೆ ಕೈಗೊಂಡ ಕ್ರಮಗಳು
*ಎಲ್ಲ ಪ್ರಯಾಣಿಕರೂ ಮಾಸ್ಕ್ ಧರಿಸುವುದು ಕಡ್ಡಾಯ

*ಪ್ರಯಾಣಿಕರಿಗೆ ಆಹಾರ, ನೀರು ಒದಗಿಸಲು ವ್ಯವಸ್ಥೆ

*ಒಂದು ಬೋಗಿಯಲ್ಲಿ 54 ಪ್ರಯಾಣಿಕರಿಗೆ ಮಾತ್ರ ಅವಕಾಶ

*ಪ್ರಯಾಣಿಕರು ಅಂತರ ಕಾಪಾಡುಕೊಳ್ಳುವುದರ ಮೇಲೆ ನಿಗಾ ವಹಿಸಲು ರೈಲ್ವೆ ಸುರಕ್ಷತಾ ದಳ ನಿಯೋಜನೆ

*ರೋಗ ಲಕ್ಷಣಗಳಿಲ್ಲದ ಜನರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು