ಸ್ಪೈಸ್‌ಜೆಟ್‌: 14 ವಿಮಾನಗಳ ಪ್ರಯಾಣ ರದ್ದು

ಶನಿವಾರ, ಮಾರ್ಚ್ 23, 2019
31 °C
ಬ್ರಿಟನ್, ಭಾರತ, ಸರ್ಬಿಯಾ, ಚೀನಾ ಸೇರಿ ಹಲವು ದೇಶದಲ್ಲಿ ಬೋಯಿಂಗ್ 737 ಮ್ಯಾಕ್ಸ್‌ಗೆ ನಿಷೇಧ

ಸ್ಪೈಸ್‌ಜೆಟ್‌: 14 ವಿಮಾನಗಳ ಪ್ರಯಾಣ ರದ್ದು

Published:
Updated:
Prajavani

ನವದೆಹಲಿ: ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ದೇಶದಲ್ಲಿ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನಗಳ ಹಾರಾಟ ನಿಷೇಧಿಸಿರುವುದರಿಂದ ಸ್ಪೈಸ್‌ಜೆಟ್‌ ಇದೇ ಮಾದರಿಯ 14 ವಿಮಾನಗಳ ಹಾರಾಟವನ್ನು ಬುಧವಾರ ರದ್ದುಗೊಳಿಸಿತು.

ಸ್ಪೈಸ್‌ ಜೆಟ್‌ನ ವಾಯುಯಾನ ಸೇವೆಯಲ್ಲಿ ಇಂತಹ ಇನ್ನೂ 12 ವಿಮಾನಗಳು ಇವೆ. ಸದ್ಯ 14 ವಿಮಾನಗಳ ಹಾರಾಟವನ್ನು ಮಾತ್ರ ಬುಧವಾರ ರದ್ದುಗೊಳಿಸಿದೆ. ಇದಕ್ಕೆ ಬದಲಿಯಾಗಿ ಗುರುವಾರ ಹೆಚ್ಚುವರಿ ವಿಮಾನಗಳು ಕಾರ್ಯಾಚರಿಸಲಿವೆ ಎಂದು ಸಂಸ್ಥೆ ಹೇಳಿದೆ.

‘ಹಾರಾಟ ನಡೆಸುವಂತಹ 76 ವಿಮಾನಗಳು ಇದ್ದು, ಇದರಲ್ಲಿ 64 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಪ್ರಯಾಣಿಕರಿಗೆ ಎದುರಾಗುವ ಅನಾನುಕೂಲ ತಗ್ಗಿಸುವ ಮತ್ತು ನಮ್ಮ ಸೇವೆಯನ್ನು ಸಹಜ ಸ್ಥಿತಿಗೆ ತರುವುದರಲ್ಲಿ ನಾವು ವಿಶ್ವಾಸ ಹೊಂದಿದ್ದೇವೆ’ ಎಂದು ಸ್ಪೈಸ್‌ ಜೆಟ್‌ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಇಥಿಯೋಪಿಯಾದ ಅಡಿಸ್‌ ಅಬಾಬದಲ್ಲಿ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ ಭಾನುವಾರ ಪತನಗೊಂಡು ನಾಲ್ವರು ಭಾರತೀಯರು ಸೇರಿ 157 ಪ್ರಯಾಣಿಕರು ದಾರುಣವಾಗಿ ಮೃತಪಟ್ಟಿದ್ದರು. ಈ ಘಟನೆಯ ನಂತರ, ಡಿಜಿಸಿಎ ಈ ಮಾದರಿಯ ಎಲ್ಲ ವಿಮಾನಗಳ ಹಾರಾಟವನ್ನು ಭಾರತದಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಿ, ಮಂಗಳವಾರ ರಾತ್ರಿ ಆದೇಶ ಹೊರಡಿಸಿತ್ತು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಲಯನ್‌ ಏರ್‌ ಸಂಸ್ಥೆಗೆ ಸೇರಿದ ಇದೇ ಮಾದರಿಯ ಬೊಯಿಂಗ್‌ ವಿಮಾನ ಇಂಡೋನೇಷ್ಯಾದಲ್ಲಿ ಪತನವಾಗಿ 180 ಪ್ರಯಾಣಿಕರು ಮೃತಪಟ್ಟಿದ್ದರು. ಯುರೋಪ್‌ ಒಕ್ಕೂಟ ಮತ್ತು ವಿಶ್ವದ ಹಲವು ದೇಶಗಳು ಈಗಾಗಲೇ ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನಗಳನ್ನು ಬಳಸದಂತೆ ನಿಷೇಧ ಹೇರಿವೆ.

 ಸಂಜೆ 4ಕ್ಕೆ ಹಾರಾಟ ಸ್ಥಗಿತ
ದೇಶದಲ್ಲಿ ಬುಧವಾರ ಸಂಜೆ 4 ಗಂಟೆಯಿಂದ ಬೋಯಿಂಗ್‌ 737 ಮಾಕ್ಸ್‌ 8 ಹಾರಾಟ ಸ್ಥಗಿತಗೊಳ್ಳಲಿದೆ ಎಂದು ಡಿಜಿಸಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತದಲ್ಲಿ ಸದ್ಯ ಈ ಮಾದರಿಯ ವಿಮಾನಗಳನ್ನು ಹಾರಾಟಕ್ಕೆ ಬಳಕೆ ಮಾಡುತ್ತಿರುವ ಎಲ್ಲ ವಾಯುಯಾನ ಸಂಸ್ಥೆಗಳಿಗೂ ತಕ್ಷಣವೇ ವಿಮಾನ ಹಾರಾಟ ಸ್ಥಗಿತಗೊಳಿಸಲು ಆದೇಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

 ಇಂಡಿಯನ್‌ ಏರ್‌ಲೈನ್ಸ್‌ನಲ್ಲೂ ಹಾರಾಟ ಸ್ಥಗಿತ
ಇಂಡಿಯನ್‌ ಏರ್‌ಲೈನ್ಸ್‌ನಿಂದ ಕಾರ್ಯಾಚರಿಸುತ್ತಿದ್ದ ಬೋಯಿಂಗ್‌ 737 ಮ್ಯಾಕ್ಸ್‌ 8 ಮಾದರಿಯ ಎಲ್ಲ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಕಾರ್ಯದರ್ಶಿ ಪಿ.ಎಸ್‌.ಖರೋಲ ಬುಧವಾರ ತಿಳಿಸಿದ್ದಾರೆ.

‘ಡಿಜಿಸಿಎ ಆದೇಶದ ನಂತರ ಇಂಡಿಯನ್‌ ಏರ್‌ಲೈನ್ಸ್‌ ಈ ನಿರ್ಧಾರ ಪ್ರಕಟಿಸಿದೆ. ಗುರುವಾರ ನಮಗೆ ನಿಜವಾದ ಸವಾಲು ಎದುರಾಗಲಿದೆ’ ಎಂದು ಅವರು ಹೇಳಿದ್ದಾರೆ.

‘ಸಂಬಂಧಿಸಿದ ವಿವಿಧ ಸಂಸ್ಥೆಗಳು ನೀಡುವ ಅಭಿಪ್ರಾಯಗಳ ಆಧಾರದ ಮೇಲೆ ನಿಷೇಧ ತೆರವು ನಿಂತಿದೆ. ಆದರೆ, ಇದು ಶೀಘ್ರದಲ್ಲಿ ಆಗುವುದಿಲ್ಲ’ ಎಂದು ಡಿಜಿಸಿಎ ಮುಖ್ಯಸ್ಥ ಬಿ.ಎಸ್‌.ಭುಲ್ಲರ್‌ ತಿಳಿಸಿದ್ದಾರೆ.

ಹೆಚ್ಚಿನ ಪ್ರಯಾಣಿಕರಿಗೆ ಸ್ಪೈಸ್‌ ಜೆಟ್‌ ತನ್ನ ಬಳಿ ಇರುವ ಸ್ವಂತ ವಿಮಾನಗಳಲ್ಲೇ ಪ್ರಯಾಣ ಅವಕಾಶ ಕಲ್ಪಿಸಲಿದೆ. ಅಗತ್ಯಬಿದ್ದರೆ ಉಳಿದ ವಾಯುಯಾನ ಸಂಸ್ಥೆಗಳೂ ಸೌಕರ್ಯ ಒದಗಿಸಲಿವೆ. ಜತೆಗೆ ದುಬಾರಿ ಪ್ರಯಾಣ ದರ ವಿಧಿಸದಿರಲು ವಾಯುಯಾನ ಸಂಸ್ಥೆಗಳು ಒಪ್ಪಿವೆ ಎಂದು ಖರೋಲ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !