ಶನಿವಾರ, ಮಾರ್ಚ್ 6, 2021
20 °C

ಮುಂಬೈ ನಿಲ್ದಾಣದಲ್ಲಿ ‘ಡಾರ್ಕ್’ ಇದ್ದಿದ್ದರೆ ವಿಮಾನ ಹಾರಾಟ ರದ್ದಾಗುತ್ತಿರಲಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರಿ ಮಳೆ ಮತ್ತು ಗಾಳಿಯ ಪರಿಣಾಮ ಸೋಮವಾರ ತಡ ರಾತ್ರಿ ಮುಂಬೈ ವಿಮಾನ ನಿಲ್ದಾಣದ ರನ್‌ ವೇನಲ್ಲಿ ಸ್ಪೈಸ್‌ ಜೆಟ್‌ ವಿಮಾನ ಸಿಲುಕಿಕೊಂಡಿದ್ದರಿಂದ 201 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿತ್ತು ಹಾಗೇ 370 ವಿಮಾನಗಳ ಹಾರಾಟ ವಿಳಂಬವಾಗಿತ್ತು.

ರನ್‌ ವೇನಲ್ಲಿ ಸಿಲುಕಿದ್ದ ವಿಮಾನವನ್ನು ಪಕ್ಕಕ್ಕೆ ಸರಿಸುವಷ್ಟರಲ್ಲಿ ಮಂಗಳವಾರ ತಡ ರಾತ್ರಿಯಾಗಿತ್ತು. ಇದಕ್ಕೆ ಕಾರಣ ‘ಕೆಟ್ಟುನಿಂತ ವಿಮಾನವನ್ನು ಪಕ್ಕಕ್ಕೆ ಸರಿಸುವ ಸಾಧನ‘ (ಡಾರ್ಕ್‌) ಇಲ್ಲದಿರುವುದೇ ಆಗಿತ್ತು. ಭಾನುವಾರ ಮಂಗಳೂರಿನಲ್ಲಿ ಏರ್ ಇಂಡಿಯಾ ವಿಮಾನ ರನ್‌ ವೇಯಿಂದ ಹೊರ ಹೋಗಿತ್ತು. ಅದನ್ನು ಪಕ್ಕಕ್ಕೆ ಸರಿಸಲು ಡಾರ್ಕ್‌ ಸಾಧನವನ್ನು ಅಲ್ಲಿಗೆ ತೆಗೆದುಕೊಂಡು ಹೋಗಲಾಗಿತ್ತು. ಅಲ್ಲಿಂದ ಮುಂಬೈಗೆ ತರಿಸಿಕೊಂಡು ವಿಮಾನವನ್ನು ನಿಲ್ದಾಣದ ಹ್ಯಾಂಗರ್‌ಗೆ ತಂದು ನಿಲ್ಲಿಸಿದಾಗ ಮಂಗಳವಾರ ರಾತ್ರಿಯಾಗಿತ್ತು.  

ದಕ್ಷಿಣ ಏಷ್ಯಾದಲ್ಲೇ ಡಾರ್ಕ್‌ ಸಾಧನ ಇರುವುದು ಒಂದೇ ಒಂದು! ಅದು‌ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಗೆ ಸೇರಿದೆ ಎಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಡಾರ್ಕ್‌ ಸಾಧನದ ಖರೀದಿ ಮತ್ತು ನಿರ್ವಹಣೆಗೆ ಹೆಚ್ಚಿನ ಬಂಡವಾಳ ಬೇಕಿರುವುದರಿಂದ ವಿಮಾನಯಾನ ಕಂಪನಿಗಳು ಈ ಸಾಧನವನ್ನು ಖರೀದಿ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. 

ವಿಮಾನಗಳು ರನ್‌ ವೇನಿಂದ ಜಾರಿದಾಗ ಅಥವಾ ಹೊರ ಹೋಗಿರುವಾಗ ಈ ಡಾರ್ಕ್‌ ಸಾಧನವನ್ನು ಬಳಸಿ ವಿಮಾನಗಳನ್ನು ಪಕ್ಕಕ್ಕೆ ಸರಿಸಲಾಗುತ್ತದೆ. ಈ ಸಾಧನವನ್ನು ಮಂಗಳೂರಿನಿಂದ ಮುಂಬೈಗೆ ತರಿಸಿದಾಗ ಮಂಗಳವಾರ ಮಧ್ಯಾಹ್ನ 1 ಗಂಟೆಯಾಗಿತ್ತು. ನಂತರ ವಿಮಾನವನ್ನು ಪಕಕ್ಕೆ ಸರಿಸಿದಾಗ ರಾತ್ರಿಯಾಯಿತು. ಅಲ್ಲಿಯವರೆಗೂ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿತ್ತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. 

ಬಾರಿ ಮಳೆಯ ಸಂದರ್ಭದಲ್ಲೂ ವಿಮಾನವನ್ನು ಸುರಕ್ಷಿತವಾಗಿ ಇಳಿಸುವುದು ಕಷ್ಟವೇನಲ್ಲ, ಪೈಲಟ್‌ಗಳಿಗೆ ಸರಿಯಾದ ತರಬೇತಿ ಇಲ್ಲದಿರುವುದೇ ಸ್ಪೆಸ್‌ ಜೆಟ್‌ ವಿಮಾನ ರನ್‌ ವೇನಿಂದ ಹೊರ ಹೋಗಲು ಕಾರಣ ಎಂದು ಭಾರತೀಯ ನಾಗರೀಕ ವಿಮಾನಯಾನ ಪ್ರಾಧಿಕಾರದ ಭದ್ರತಾ ಸಲಹೆಗಾರ ಮೋಹನ್‌ ರಂಗನಾಥನ್‌ ಹೇಳಿದ್ದಾರೆ. ವಿಮಾನಗಳು ರನ್‌ವೇಯಿಂದ ಜಾರಿದಾಗ ಅವುಗಳನ್ನು 4 ಗಂಟೆಗಳ ಒಳಗಾಗಿ ದುರಸ್ತಿಪಡಿಸಲು ಅಥವಾ ಪಕ್ಕಕ್ಕೆ ಸರಿಸಲು ಅಗತ್ಯವಿರುವ ಉಪಕರಣಗಳು ವಿಮಾನ ನಿಲ್ದಾಣಗಳಲ್ಲಿ ಇರಬೇಕು ಎಂದು ಅವರು ಹೇಳುತ್ತಾರೆ. 

ಮಳೆಯ ಸಂದರ್ಭದಲ್ಲೂ ವಿಮಾನಗಳು ಲ್ಯಾಂಡಿಂಗ್ ಆಗುವ ವೇಳೆ ರನ್‌ ವೇ ಸ್ಪಷ್ಟವಾಗಿ ಗೋಚರಿಸುವಂತಹ ಬೆಳಕಿನ ವ್ಯವಸ್ಥೆಯನ್ನು ಹೊಂದಿರಬೇಕು. ಹವಾಮಾನ ವೈಪರಿತ್ಯದ ಸಂದರ್ಭಗಳಲ್ಲಿ ನಿಯಂತ್ರಣ ಕೊಠಡಿಯು ಪೈಲಟ್‌ಗಳ ಜೊತೆಗೆ ನಿರಂತರ ಸಂಪರ್ಕವನ್ನು ಹೊಂದಿರಬೇಕು ಎಂದು ನಾಗರಿಕ ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು