ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳದ ಕೆಲವೆಡೆ ಹಿಂಸಾಚಾರ

6ನೇ ಹಂತ:ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿದ ಟಿಎಂಸಿ ಕಾರ್ಯಕರ್ತರು
Last Updated 12 ಮೇ 2019, 19:29 IST
ಅಕ್ಷರ ಗಾತ್ರ

ಕೋಲ್ಕತ್ತ: ಆರನೇ ಹಂತದಲ್ಲಿ ಏಳು ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳ ಮತದಾನ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಹಲವೆಡೆ ಬಿಜೆಪಿ– ಟಿಎಂಸಿ ಕಾರ್ಯಕರ್ತರ ಮಧ್ಯೆ ಘರ್ಷಣೆ ಹಾಗೂ ಹಿಂಸಾಚಾರಗಳು ನಡೆದಿವೆ. ಉಳಿದ ರಾಜ್ಯಗಳಲ್ಲಿ ಮತದಾನ ಶಾಂತಿಯುತವಾಗಿತ್ತು.

ಪಶ್ಚಿಮ ಬಂಗಾಳದ ಘಾಟಲ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಐಪಿಎಸ್‌ ಅಧಿಕಾರಿ ಭಾರತಿ ಘೋಷ್‌ ಅವರ ಮೇಲೆ ಎರಡು ಬಾರಿ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಭಾರತಿ ಅವರ ವಾಹನ
ವನ್ನೂ ಪೊಲೀಸರು ವಶಪಡಿಸಿಕೊಂಡಿದ್ದರಿಂದ ಅವರು ಮೊದಲು ದೇವಸ್ಥಾನದಲ್ಲಿ, ನಂತರ ಪೊಲೀಸ್‌ ಠಾಣೆಯಲ್ಲಿ ರಕ್ಷಣೆ ಪಡೆಯುವ ಸ್ಥಿತಿ ಉಂಟಾಗಿತ್ತು.

ಭಾರತಿ ಅವರು ಕೇಶ್‌ಪುರದ ಒಂದು ಮತಗಟ್ಟೆಯೊಳಗೆ ಪ್ರವೇಶಿಸುವ ಪ್ರಯತ್ನ ನಡೆಸಿದರು. ಆಗ ಅವರನ್ನು ಟಿಎಂಸಿ ಕಾರ್ಯಕರ್ತರು ತಡೆದರು. ಅಲ್ಲಿಂದ ಅವರು ಇನ್ನೊಂದು ಮತಗಟ್ಟೆಯತ್ತ ಹೊರಟಾಗ ಅವರ ವಾಹನದತ್ತ ಟಿಎಂಸಿ ಕಾರ್ಯಕರ್ತರು ಕಲ್ಲುಗಳನ್ನು ಎಸೆದರು. ಈ ಸಂದರ್ಭದಲ್ಲಿ ಭಾರತಿ ಅವರ ಅಂಗರಕ್ಷಕರಲ್ಲಿ ಒಬ್ಬರು ಗಾಯಗೊಂಡರು.

‘ಭಾರತಿ ಅವರ ಅಂಗರಕ್ಷಕರು ಗುಂಡು ಹಾರಿಸಿದ್ದರಿಂದ ಟಿಎಂಸಿ ಕಾರ್ಯಕರ್ತರೊಬ್ಬರು ಗಾಯಗೊಂಡಿದ್ದಾರೆ’ ಎಂದು ಆ ಪಕ್ಷದ ಸ್ಥಳೀಯ ನಾಯಕರು ಆರೋಪಿಸಿದ್ದಾರೆ. ಬಿಜೆಪಿಯವರು ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಇಡೀ ಘಟನೆಯ ಬಗ್ಗೆ ವರದಿ ನೀಡುವಂತೆ ಚುನಾವಣಾ ಆಯೋಗ ಸೂಚಿಸಿದೆ.

ಇದಾಗಿ ಸ್ವಲ್ಪ ಹೊತ್ತಿನಲ್ಲಿ ಟಿಎಂಸಿ ಕಾರ್ಯಕರ್ತರು ಎನ್ನಲಾದ ಕೆಲವರು ಕೇಶ್‌ಪುರ ಮಾರುಕಟ್ಟೆಯ ಸಮೀಪ ಭಾರತಿ ಅವರ ವಾಹನದ ಮೇಲೆ ಭಾರಿ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಿದರು. ಚುನಾವಣೆ ನಡೆಯುವ ಪ್ರದೇಶದಲ್ಲಿ ಓಡಾಡಲು ಭಾರತಿ ಅವರು ವಾಹನ ಪರವಾನಗಿಯನ್ನೂ ಪಡೆಯದಿರುವುದರಿಂದ ಪೊಲೀಸರು ಅವರ ವಾಹನವನ್ನು ವಶಪಡಿಸಿಕೊಂಡರು. ಈ ಸಂದರ್ಭದಲ್ಲಿ ಪರಿಸ್ಥಿತಿ ಕೈಮೀರಿ ಹೋಯಿತು. ಭಾರತಿ ಅವರು ಸಮೀಪದ ದೇವಸ್ಥಾನವೊಂದರಲ್ಲಿ ಆಶ್ರಯ ಪಡೆದರು. ಆದರೆ ಗುಂಪು ಅಲ್ಲಿಗೂ ಧಾವಿಸಿ ಕಲ್ಲು ತೂರಾಟ ನಡೆಸಿತು. ಅದಾದ ಬಳಿಕ ಅವರು ಸಮೀಪದಲ್ಲೇ ಇದ್ದ ಕೇಶ್‌ಪುರ ಪೊಲೀಸ್‌ ಠಾಣೆಗೆ ಹೋಗಿ ಆಶ್ರಯ ಪಡೆದರು. ಅಲ್ಲಿ ಪೊಲೀಸರು ಲಾಠಿ ಬೀಸಿ ಗುಂಪನ್ನು ಚದುರಿಸಿದರು.

ಭಾರತಿ ಮಾತ್ರವಲ್ಲ, ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ, ಮೇದಿನಿಪುರ ಕ್ಷೇತ್ರದ ಅಭ್ಯರ್ಥಿ ದಿಲೀಪ್‌ ಘೋಷ್‌ ಅವರ ಕಾರನ್ನು ಸಹ ಟಿಎಂಸಿ ಕಾರ್ಯಕರ್ತರು ತಡೆದಿದ್ದರು.

‘ಕೇಂದ್ರದ ಭದ್ರತಾ ಪಡೆಯವರು ಐದು ಕಡೆಗಳಲ್ಲಿ ಗುಂಡು ಹಾರಿಸಿದ್ದರಿಂದ ಮೂವರು ಗಾಯಗೊಂಡಿದ್ದಾರೆ’ ಎಂದು ರಾಜ್ಯದ ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT