ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಮುಖ್ಯಮಂತ್ರಿ ಮೋದಿ ಹೇಳಿದ್ದು, ಪ್ರಧಾನಿ ಮೋದಿ ಹೇಳದೆ ಉಳಿದದ್ದು

Last Updated 2 ಸೆಪ್ಟೆಂಬರ್ 2018, 7:45 IST
ಅಕ್ಷರ ಗಾತ್ರ

ನವದೆಹಲಿ: ಪತ್ರಿಕಾಗೋಷ್ಠಿಗಳಿಂದ ಗಾವುದ ದೂರ ಉಳಿಯುವ ಪ್ರಧಾನಿ ನರೇಂದ್ರ ಮೋದಿ ಆಕಾಶವಾಣಿಯ ‘ಮನ್‌ ಕಿ ಬಾತ್‌’ನಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ಅಭಿಮಾನಿಗಳು, ಕಾರ್ಯಕರ್ತರು, ವಿವಿಧ ಮೋರ್ಚಾಗಳ ಸದಸ್ಯರೊಂದಿಗೆ ಸಂವಹನಕ್ಕೆ ‘ನಮೋ ಅ್ಯಪ್’ ವೇದಿಕೆಯಾಗಿದೆ. ಇಷ್ಟೆಲ್ಲದರ ಜೊತೆಗೆ ನಮ್ಮ ಪ್ರಧಾನಿ ಸಾಮಾಜಿಕ ಮಾಧ್ಯಮ ಬಳಕೆಯಲ್ಲಿಯೂ ಹಿಂದೆ ಬಿದ್ದಿಲ್ಲ. ‘ನನ್ನ ಟ್ವಿಟರ್ ಖಾತೆ ನಿರ್ವಹಿಸುವವನು ನಾನೇ’ ಎಂದು ಹೆಮ್ಮೆಯಿಂದ ಮಾಹಿತಿ ಹಕ್ಕು ಅರ್ಜಿಗೆ ಉತ್ತರ ಕೊಟ್ಟಿರುವ ನಮ್ಮ ಪ್ರಧಾನಿ ಟ್ವಿಟರ್‌ನಲ್ಲಿ 4 ಕೋಟಿ ಹಿಂಬಾಲಕರನ್ನು ಹೊಂದಿರುವಸ್ಟಾರ್ ಕೂಡಾ ಹೌದು.

ಬದುಕು, ವಿಶ್ವ, ಅಷ್ಟೇಕೆ ಸೂರ್ಯನ ಬೆಳಕು ಬೀಳುವ ಎಲ್ಲದರ ಬಗ್ಗೆ ಮೋದಿ ಮನಸ್ಸಿನಲ್ಲಿ ಯಾವ ಅಭಿಪ್ರಾಯಗಳಿವೆ? ಮೊದಲೇ ಗುರುತು ಮಾಡಿಕೊಟ್ಟ ಪ್ರಶ್ನೆಗಳಿಗೆ ಮಾತ್ರ ಸಂದರ್ಶನಗಳಲ್ಲಿ ಉತ್ತರ ಹೇಳುವ ಪ್ರಧಾನಿ,ಪತ್ರಿಕಾಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ ಅವರ ಟ್ವಿಟರ್‌ ಒಂದೇ ಅವರ ಮನಸ್ಸಿನ ಅಭಿವ್ಯಕ್ತಿ ಎಂದು ಅನೇಕರು ಭಾವಿಸಿಕೊಳ್ಳುತ್ತಿದ್ದಾರೆ.

ಹಾಸ್ಯ ಕಲಾವಿದ ಆಕಾಶ್ಬ್ಯಾನರ್ಜಿ ಅವರಿಗೂ ಇಂಥದ್ದೇ ಅಭಿಪ್ರಾಯವಿತ್ತು. ತಮ್ಮನ್ನು ತಾವು ‘ಇನ್‌ವೇಸ್ಟಿಗೇಟರ್ ಇನ್‌ ಚೀಫ್’ ಎಂದು ಕರೆದುಕೊಳ್ಳುವ ಆಕಾಶ್,ಟ್ವಿಟರ್ಸ್ಟಾರ್ ನರೇಂದ್ರ ಮೋದಿ ಅವರ 18 ಸಾವಿರ ಟ್ವಿಟ್‌ಗಳನ್ನು ವಿಶ್ಲೇಷಿಸಿ ಯುಟ್ಯೂಬ್‌ ವಿಡಿಯೊ ಮೂಲಕ ತಾವು ಕಂಡುಕೊಂಡಿದ್ದನ್ನು ಸಾರಿ ಹೇಳಿದ್ದಾರೆ.ಕಾಲಕ್ಕೆ ತಕ್ಕಂತೆಮೋದಿ ಅವರಮಾತು ಹೇಗೆ ಬದಲಾಯಿತು?ಪ್ರಧಾನಿಯಾಗುವ ಮೊದಲು ಯಾವ ಪದಗಳನ್ನು ಹೆಚ್ಚು ಬಳಸುತ್ತಿದ್ದರು?ಪ್ರಧಾನಿಯಾದ ನಂತರ ಯಾವ ಪದಗಳ ಬಳಕೆ ಕಡಿಮೆಯಾಯಿತು ಎಂಬುದನ್ನು ಆಧಾರ ಸಮೇತ ಮಂಡಿಸಿದ್ದಾರೆ.

ಆಕಾಶ್ ಬ್ಯಾನರ್ಜಿ ಮಾತಿನ ಅಕ್ಷರರೂಪ ಇಲ್ಲಿದೆ. ಇದೇ ಲೇಖನದ ಕೊನೆಗೆ ವಿಡಿಯೊ ಸಹ ಇದೆ. 1.35 ಲಕ್ಷಕ್ಕೂ ಹೆಚ್ಚು ಜನರು ವಿಡಿಯೊ ನೋಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ವರ್ಷಗಳಲ್ಲಿ ಒಂದೂಪತ್ರಿಕಾಗೋಷ್ಠಿ ಮಾಡಲಿಲ್ಲ. ಹೀಗಾಗಿಯೇ ನರೇಂದ್ರ ಮೋದಿ ಅಲ್ಲ, ಮನ್‌ ಮೋದಿ ಸಿಂಗ್ ಆಗಿಬಿಟ್ಟಿದ್ದಾರೆ. ಮೂರ್ನಾಲ್ಕು ಸಂದರ್ಶನಗಳನ್ನು ಕೊಟ್ಟಿದ್ದಾರೆ ಆದರೂ, ಅದು ಅವರ ಮೆಚ್ಚಿನವರಿಗೆ ಮಾತ್ರ. ಇಂಥ ಸಂದರ್ಶನಗಳಲ್ಲಿಯೂ ಪ್ರಶ್ನೋತ್ತರಗಳು ಕಡಿಮೆಯೇ ಇರುತ್ತಿದ್ದವು. ರೇಡಿಯೊದಲ್ಲಿ ‘ಮನ್‌ ಕಿ ಬಾತ್‌’ ಮಾತಾಡ್ತಾರೆ. ಆದರೆ ಅದು, ನಮ್ಮನೆಯ ತಾತಂದಿರು ಕೊಡುವ ಸಲಹೆಗಳ ಧಾಟಿಯಲ್ಲಿ ಇರುವುದೇ ಹೆಚ್ಚು. ವಾಸ್ತವಾಂಶಗಳು ಕಡಿಮೆ.ಹೀಗಿರುವಾಗ ಮೋದಿ ಅವರ ನಿಜವಾದ ಮನದ ಮಾತು ಅರ್ಥ ಮಾಡಿಕೊಳ್ಳುವುದು ಹೇಗೆ?

ಆದರೂ ಒಂದು ದಾರಿ ಇದೆ. ಅದು ಮೋದಿ ಅವರ ನಿಜವಾದ ಮನದ ಮಾತನ್ನು ತೆರೆದಿಡುತ್ತದೆ. 2014ರ ಚುನಾವಣೆಗೆ ಮೊದಲು ಮತ್ತು ನಂತರ ಅವರ ಮಾತು ಹೇಗೆಲ್ಲಾ ಬದಲಾಯಿತು ಎಂಬುದನ್ನು ನೇರಾನೇರ ಹೇಳಿಬಿಡುತ್ತೆ. ಆ ದಾರಿ ಯಾವುದು ಗೊತ್ತಾಯ್ತಾ? ಅದು ಟ್ವಿಟರ್ (twitter.com/narendramodi).

ನಾವು ನರೇಂದ್ರ ಮೋದಿ ಅವರ 17,890 ಟ್ವಿಟ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು, ಅವೆಲ್ಲವುಗಳ ವಿಸ್ತೃತ ವಿಶ್ಲೇಷಣೆ ಮಾಡಿದೆವು.2010–14ರ ಅವಧಿಯಲ್ಲಿ 3,900 ಟ್ವಿಟ್‌ ಮಾಡಿರುವ ಮೋದಿ,2014–18ರ ಅವಧಿಯಲ್ಲಿ 13,990 ಟ್ವಿಟ್ ಮಾಡಿದ್ದಾರೆ. 2010–14ಕ್ಕೆ ಹೋಲಿಸಿದರೆ, 2014–18ರ ಅವಧಿಯಲ್ಲಿ ಅಂದರೆ ಪ್ರಧಾನಿಯಾದ ನಂತರಅವರ ಟ್ವಿಟ್‌ಗಳ ಸಂಖ್ಯೆ ಮೂರುಪಟ್ಟು ಹೆಚ್ಚಾಗಿದೆ. ದೇಶವನ್ನು ಸಂಭಾಳಿಸುವುದರ ಜೊತೆಜೊತೆಗೆ ಟ್ವಿಟರ್ ಖಾತೆಯನ್ನೂ ನಿರ್ವಹಿಸುವುದು ಹುಡುಗಾಟದ ಮಾತೇ?

ಟ್ವಿಟರ್‌ನಲ್ಲಿ ಒಂದೇಒಂದು ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಿನೋಡಿ, ಎಲ್ಲರೂ ನಿಮ್ಮನ್ನು ಸರಿಮಾಡಲು ನಾ ಮುಂದು, ತಾ ಮುಂದು ಎಂದು ಓಡಿ ಬರುತ್ತಾರೆ. ಮೋದಿ ಅವರ ಟ್ವಿಟರ್ ಖಾತೆ ನಿರ್ವಹಿಸುವವರು ಯಾರು? ಈ ಪ್ರಶ್ನೆ ಕೇಳಿದ ಆರ್‌ಟಿಐ ಅರ್ಜಿಗೆ ಮೋದಿ ‘ನಾನು’ ಎಂದು ಉತ್ತರಿಸಿದ್ದರು. ಧ್ಯೇಯದತ್ತ ಮುನ್ನಡೆಯುತ್ತಿರುವ ಇಂಥ ತಂತ್ರಜ್ಞಾನ ಸ್ನೇಹಿ ಪ್ರಧಾನಿ ಇನ್ನೆಲ್ಲಿ ಸಿಗಲು ಸಾಧ್ಯ. ತಗೊಳಿ ಒಂದು ಹ್ಯಾಷ್‌ಟ್ಯಾಗ್ ಮಾಡೋಣ #BestPMever.

ಮೋದಿ ಅವರ ನಿಜವಾದ ಮನದ ಮಾತು ಅವರ ಟ್ವಿಟರ್‌ನಲ್ಲಿ ಸಿಗುತ್ತೆ ಎನ್ನುವುದೂ ಖಾತ್ರಿ.2014ಕ್ಕೂ ಮೊದಲು ಬರುತ್ತಿದ್ದ ಟ್ವಿಟ್‌ಗಳಲ್ಲಿದೇಶಭಕ್ತಿಗೆ ಸಂಬಂಧಿಸಿದ್ದು(ಉದಾ: ಭಾರತ್‌ ಮಾತಾಕಿ ಜೈ) ಟ್ವಿಟ್‌ಗಳುಶೇ15, ಅಧಿಕಾರದಲ್ಲಿದ್ದ ಸರ್ಕಾರವನ್ನು ಟೀಕಿಸಲು ಶೇ 43ರಷ್ಟು ಟ್ವೀಟ್‌ಗಳು ಮೀಸಲಿದ್ದವು. 2014ರ ನಂತರ ಸರ್ಕಾರದ ನೀತಿಗಳಿಗೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳಲು ಶೇ 37,ದೇಶಭಕ್ತಿಗೆಸಂಬಂಧಿಸಿದ ಟ್ವಿಟ್‌ಗಳು ಶೇ 45ರಷ್ಟು, ಶುಭಕೋರಿದ ಟ್ವಿಟ್‌ಗಳ ಪ್ರಮಾಣವೇಶೇ 8ರಷ್ಟಿದೆ. ಇದನ್ನು ಗಮನಿಸಿದರೆ 2019ರ ಚುನಾವಣೆ ಯಾವುದರ ಆಧಾರದ ಮೇಲೆ ನಡೆಯಲಿದೆ ಎಂಬುದನ್ನು ಊಹಿಸಬಹುದು.

ಮೋದಿ ಅವರು 2010ರಿಂದ 2014 ಮತ್ತು 2014ರಿಂದ 2018ರ ವರೆಗೆ ಟ್ವಿಟ್‌ನಲ್ಲಿ ವಿಷಯಗಳಿಗೆ ನೀಡಿರುವ ಪ್ರಾಮುಖ್ಯತೆ ಪೈ ನಕ್ಷೆ.
ಮೋದಿ ಅವರು 2010ರಿಂದ 2014 ಮತ್ತು 2014ರಿಂದ 2018ರ ವರೆಗೆ ಟ್ವಿಟ್‌ನಲ್ಲಿ ವಿಷಯಗಳಿಗೆ ನೀಡಿರುವ ಪ್ರಾಮುಖ್ಯತೆ ಪೈ ನಕ್ಷೆ.

ಚುನಾವಣೆ ಪೂರ್ವದಲ್ಲಿ ಮೋದಿ ವಾರ್‌ ಮೂಡ್‌ನಲ್ಲಿದ್ದರು. 2014ರ ಮೊದಲು ಹೆಚ್ಚು ರಿಟ್ವಿಟ್ ಆದ ಮೋದಿ ಅವರ ಟ್ವಿಟ್‌ನ ವಿಷಯಗಳು ಯಾವುದು ಗೊತ್ತೆ?ಪಾಕಿಸ್ತಾನ ಮತ್ತು ಚೀನಾ ಗಡಿ ವಿವಾದಗಳು (7000 ರಿಟ್ವಿಟ್), ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳ (7000 ರಿಟ್ವಿಟ್),ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ (4500 ರಿಟ್ವಿಟ್).2014ರ ಲೋಕಸಭೆ ಚುನಾವಣೆಯ ನಂತರ ಪಾಕಿಸ್ತಾನ, ತೈಲಬೆಲೆ ಏರಿಕೆ ಕುರಿತು ಟ್ವಿಟ್‌ಗಳು ಸಿಗುವುದೇ ಇಲ್ಲ.

ಆದರೆ 2014ರ ನಂತರ ಜನಪ್ರಿಯವಾದ ಟ್ವಿಟ್‌ಗಳು ಯಾವುದು ಗೊತ್ತೆ? ಮುಂಜಾನೆ ಯೋಗ (27000 ರಿಟ್ವಿಟ್), ತ್ರಿವಳಿ ತಲಾಖ್ ಕುರಿತು ಸುಪ್ರಿಂಕೋರ್ಟ್‌ ತೀರ್ಪಿಗೆ ಸ್ವಾಗತ (22000 ರಿಟ್ವಿಟ್), ಪಂದ್ಯ ಗೆದ್ದ ಕ್ರಿಕೆಟ್ ತಂಡಕ್ಕೆ ಶುಭಾಶಯ (20000 ರಿಟ್ವಿಟ್), ನೋಟು ಅಮಾನ್ಯೀಕರಣದ ಬಗ್ಗೆ ಜನರ ಅಭಿಪ್ರಾಯ ಸಂಗ್ರಹದ ನಮೋಆ್ಯಪ್ ಮೂಲಕ ಸಮೀಕ್ಷೆಗೆ ಕರೆಕೊಟ್ಟಿದ್ದ ಟ್ವಿಟ್ ಸಹ ಸಾಕಷ್ಟು ಜನಪ್ರಿಯವಾಗಿತ್ತು. ಮೋದಿ ಪ್ರಧಾನಿಯಾದ ನಂತರ ಜನಪ್ರಿಯವಾಗಿದ್ದ ಟ್ವಿಟ್‌ಗಳ ಪೈಕಿ ಸರ್ಕಾರಕ್ಕೆ ಸಂಬಂಧಿಸಿದ್ದ ಟ್ವಿಟ್ ಇದೊಂದೇ ಆಗಿತ್ತು. ಆದರೆಅದೂ ಕೆಲಸಕ್ಕೆ ಬಾರದ ನಿರ್ಧಾರವಾಗಿತ್ತು ಎಂದು ಈಗ ರಿಸರ್ವ್‌ ಬ್ಯಾಂಕ್ ಹೇಳಿಬಿಟ್ಟಿದೆ. ಶೇ99.30 ಪ್ರಮಾಣದ ನೋಟುಗಳು ಬ್ಯಾಂಕ್‌ಗಳಿವೆ ವಾಪಸ್ ಬಂದಿವೆ ಎಂದು ರಿಸರ್ವ್ ಬ್ಯಾಂಕ್ ಈಗ ಹೇಳಿದೆ. ಕಪ್ಪು ಹಣ ಎಲ್ಲಿ ಹೋಯ್ತು ಮೋದಿಜಿ?

ನೋಟು ಅಮಾನ್ಯೀಕರಣ, ಕಪ್ಪುಹಣದ ಬಗ್ಗೆ ಮೋದಿ ತುಟಿಕ್‌ಪಿಟಿಕ್ ಎಂದಿಲ್ಲ. ಟ್ವಿಟರ್‌ನಲ್ಲಿಯೂ ಸದ್ದು ಮಾಡಿಲ್ಲ. ಮೋದಿ ಅವರು ಕೇವಲ ಕಾಳಧನದ ಬಗ್ಗೆ ಮಾತ್ರವಲ್ಲ, ದಿನನಿತ್ಯ ಜನರನ್ನು ಬಾಧಿಸುವ ಎಷ್ಟೋ ವಿಷಯಗಳ ಬಗ್ಗೆಯೂ ಮಾತನಾಡಿಲ್ಲ. ಉದಾ: ಇಂಧನ ಬೆಲೆ ಹೆಚ್ಚಳ (ಒಂದು ಬಾರಿ), ಅಗತ್ಯವಸ್ತುಗಳ ಬೆಲೆ ಏರಿಕೆ (ಆರುಬಾರಿ), ಎನ್‌ಪಿಎ (ಎರಡು ಬಾರಿ), ರೈತರ ಆತ್ಮಹತ್ಯೆ (ಎರಡು ಬಾರಿ), ಭ್ರಷ್ಟರನ್ನು ಶಿಕ್ಷಿಸುವ ಕುರಿತು (ಎರಡು ಬಾರಿ), ಆಡಳಿತಶಾಹಿ (ಒಮ್ಮೆಯೂ ಇಲ್ಲ), ಅತ್ಯಾಚಾರಗಳು (ಒಮ್ಮೆಯೂ ಇಲ್ಲ), ಯುವಜನರ ನಿರುದ್ಯೋಗ (ಎರಡು ಬಾರಿ),

ಜನಪ್ರಿಯ ಪದಗಚ್ಛಗಳು:‘2014ಕ್ಕೂ ಮೊದಲು ಮೋದಿ ಅವರ ಟ್ವಿಟ್‌ಗಳಲ್ಲಿ ಜನಪ್ರಿಯವಾಗಿದ್ದ ಪದಗಳು...ಗುಜರತ್‌, ಕಾಂಗ್ರೆಸ್‌, ಅಭಿವೃದ್ಧಿ, ವಿವೇಕಾನಂದ, ರೈತ, ಮಹಿಳೆ, ಭ್ರಷ್ಟಾಚಾರ ಪದಗಳನ್ನು ಟ್ವಿಟ್‌ನಲ್ಲಿ ಹೆಚ್ಚಾಗಿ ಬಳಸಿದ್ದರು. 2014ರ ನಂತರ ಭಾರತ, ಪೀಪಲ್‌, ಲೈಫ್‌, ಥ್ಯಾಂಕ್ಸ್, ಬರ್ತ್‌ಡೇಶುಭಾಶಯಗಳು ಪದಗಳ ಬಳಕೆಯೇ ಹೆಚ್ಚಾಗಿವೆ.

2014ರ ಪೂರ್ವದಲ್ಲಿ ನರೇಂದ್ರ ಮೋದಿ ಅವರು ಟ್ವಿಟ್‌ನಲ್ಲಿ ಬಳಸುತ್ತಿದ್ದ ಪದಗಳು.
2014ರ ಪೂರ್ವದಲ್ಲಿ ನರೇಂದ್ರ ಮೋದಿ ಅವರು ಟ್ವಿಟ್‌ನಲ್ಲಿ ಬಳಸುತ್ತಿದ್ದ ಪದಗಳು.
2014ರ ನಂತರ ನರೇಂದ್ರ ಮೋದಿ ಅವರು ಟ್ವಿಟ್‌ನಲ್ಲಿ ಬಳಸುತ್ತಿದ್ದ ಪದಗಳು.
2014ರ ನಂತರ ನರೇಂದ್ರ ಮೋದಿ ಅವರು ಟ್ವಿಟ್‌ನಲ್ಲಿ ಬಳಸುತ್ತಿದ್ದ ಪದಗಳು.

ಕೇವಲ ಪದಗಳು ಮಾತ್ರವಲ್ಲ, ಮೋದಿ ಅವರ ಆಲೋಚನೆಗಳು ಬದಲಾಗಿರುವುದನ್ನೂ ಟ್ವಿಟರ್ ಬಿಂಬಿಸುತ್ತದೆ.

2014ರ ಮೊದಲು ಪೆಟ್ರೊಲ್ ದರ ಏರಿಕೆಗೆ ಯುಪಿಎ ಸರ್ಕಾರದ ಕೆಟ್ಟ ಆಡಳಿತ ಕಾರಣ ಎಂದು ಹೇಳಿದ್ದರು ಮೋದಿ. ಆದರೆ 2014ರ ನಂತರ ಪೆಟ್ರೊಲಿಯಂ ಕ್ಷೇತ್ರದಲ್ಲಿ ಸುಧಾರಣೆ ಆಗಬೇಕಿದೆ ಎನ್ನಲು ಆರಂಭಿಸಿದರು. ವಿದೇಶಿ ನೇರ ಹೂಡಿಕೆಯ ಮೂಲಕ ಯುಪಿಎ ಸರ್ಕಾರ ದೇಶವನ್ನು ಬಿಕರಿಗಿಟ್ಟಿದೆ ಎಂದು ಮೋರಿ ಹರಿಹಾಯುತ್ತಿದ್ದರು. ಆದರೆ ನಂತರಅವರ ದನಿ ಬದಲಾಯಿತು. ವಿದೇಶಿ ಹೂಡಿಕೆಯು ದೇಶದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಎನ್ನಲು ಶುರು ಮಾಡಿದರು. 2014ಕ್ಕೆ ಮೊದಲು ಯುಪಿಎ ಸರ್ಕಾರ ಜಿಎಸ್‌ಟಿ ಅನುಷ್ಠಾನಕ್ಕೆಏನೇನೋ ತಯಾರಿ ಮಾಡಿಕೊಂಡಿಲ್ಲ, ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎನ್ನುತ್ತಿದ್ದರು. 2014ರ ನಂತರ, ಏನೇನೂ ಸಿದ್ಧತೆಗಳಿಲ್ಲದೆ ತಾವೇ ಜಿಎಸ್‌ಟಿ ಜಾರಿ ಮಾಡಿದ ನಂತರ ‘ಇದು ಅತ್ಯುತ್ತಮ ತೆರಿಗೆ ವ್ಯವಸ್ಥೆ. ದೇಶದ ಹಿತಕ್ಕಾಗಿ ಜಿಎಸ್‌ಟಿಯನ್ನು ಸುಧಾರಿಸುತ್ತಿರುತ್ತೇವೆ’ ಎಂದು ಹೇಳಿಕೆಕೊಟ್ಟರು.

‘ಕಪ್ಪುಹಣ ವಾಪಸ್ ತರಲುಯುಪಿಎ ಸರ್ಕಾರಕ್ಕೆ ಬದ್ಧತೆಯೇ ಇಲ್ಲ’ ಎಂದು 2014ಕ್ಕೆ ಮೊದಲು ಮೋದಿ ಟೀಕಿಸುತ್ತಿದ್ದರು. 2014ರ ನಂತರ ‘ಕಪ್ಪುಹಣದ ವಿರುದ್ಧ ನಮ್ಮ ಹೋರಾಟ ಚಾಲ್ತಿಯಲ್ಲಿದೆ’ ಎನ್ನಲು ಆರಂಭಿಸಿದರು. 2014ಕ್ಕೆ ಮೊದಲು ಮೋದಿ ಅವರ ಟ್ವಿಟ್‌ಗಳಲ್ಲಿ ಆತ್ಮವಿಶ್ವಾಸ, ಆಶಾವಾದ ಎದ್ದು ಕಾಣುತ್ತಿತ್ತು. ‘ನಿಮಗೆ ಸೇವೆ ಮಾಡಲು ನಮಗೆ60 ತಿಂಗಳ ಅವಕಾಶಕೊಡಿ. ನಾವು ಅಧಿಕಾರ ಅನುಭವಿಸಲು ಇಷ್ಟಪಡುತ್ತಿಲ್ಲ. ಜನರ ಹಣ ಕಾಪಾಡುವ ಚೌಕಿದಾರರಾಗಿ ಕೆಲಸ ಮಾಡುತ್ತೇವೆ’ ಎಂದು ಹೆಮ್ಮೆಯಿಂದ ಹೇಳಿದ್ದರು. ಆದರೆ ಈಗ ಅವರ ಮಾತು ಬದಲಾಗಿದೆ. ‘ಕೇವಲ ಐದು ವರ್ಷಗಳಲ್ಲಿ ಏನು ಮಾಡಲು ಆಗುತ್ತೆ. ಈ ಕಾಂಗ್ರೆಸ್‌ನವರು ಮಾಡಿರುವ ಅವ್ಯವಸ್ಥೆ ಸರಿಪಡಿಸಲು ಇನ್ನಷ್ಟು ಸಮಯ ಬೇಕು’ ಎಂದು ಹೇಳುತ್ತಿದ್ದಾರೆ.

ರೈತರಿಗೆ ಆಗ ‘ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನಾವು ಪರಿಸ್ಥಿತಿ ಸುಧಾರಿಸುತ್ತೇವೆ’ಎಂದು ಅಭಯಕೊಟ್ಟಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯೇ ಸಿಗುತ್ತಿಲ್ಲ. ಎಷ್ಟು ಮಂದಿ ಆತ್ಮಹತ್ಯೆ ಮಾಡಿಕೊಂಡರು ಎಂದು ಗೊತ್ತಾಗುವುದಾದರೂ ಹೇಗೆ? ನಿರುದ್ಯೋಗಕ್ಕೆ ಯುಪಿಎ ಸರ್ಕಾರ ಕಾರಣ ಎಂದು 2014ಕ್ಕೆ ಮೊದಲು ಹೇಳುತ್ತಿದ್ದರು. ಆದರೆ ಈಗ ಪಕೋಡ ಹಾಕುವವರು ಸೇರಿದಂತೆ ಎಷ್ಟು ಜನರಿಗೆ ಕೆಲಸ ಸಿಕ್ಕಿದೆ ಎಂದು ಲೆಕ್ಕ ಹಾಕಲು ಆಗುತ್ತಿಲ್ಲ.

ಮೋದಿ ಅವರ ಮನಸ್ಸು ತುಂಬಾ ಚಂಚಲ ಮತ್ತು ತುಂಬಾ ವಿಚಲಿತ. ಅವರ18 ಸಾವಿರ ಟ್ವಿಟ್‌ಗಳನ್ನು ಅಭ್ಯಾಸ ಮಾಡಿದ ನಂತರ ನಮಗೆ ಇಷ್ಟು ಅರ್ಥವಾಯಿತು. ಒಮ್ಮೆ ಇತ್ತ ಬರುತ್ತೆ, ಒಮ್ಮೆ ಅತ್ತ ಓಡುತ್ತೆ. ಒಮ್ಮೊಮ್ಮೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮನಬಿಚ್ಚಿ ಮಾತನಾಡುತ್ತೆ, ಒಮ್ಮೊಮ್ಮೆ ಮೌನವೇ ಸರ್ವಸ್ವ ಎಂದು ಸುಮ್ಮನಿರುತ್ತೆ. ಒಮ್ಮೆ ನೋಟು ಅಮಾನ್ಯೀಕರಣದ ಮೂಲಕ ಅರ್ಥಶಾಸ್ತ್ರದ ಡಾನ್ ಆಗುತ್ತೆ, ಇನ್ನೊಮ್ಮೆ ನಾಲಾಗ್ಯಾಸ್ (ಕೊಳಚೆನೀರಿನಅನಿಲ) ಮೂಲಕ ವಿಜ್ಞಾನಿ ಆಗಿಬಿಡುತ್ತೆ. ವಿಶ್ಲೇಷಣೆಗಳಿಂದ ಇದೂ ಗೊತ್ತಾಗುತ್ತೆ, ಮೋದಿ ಅವರ ಟ್ವಿಟ್‌ಗಳಿಂತಲೂ ಹೆಚ್ಚು ಯೋಚಿಸುವವರು ಮನೆಗಳಿಂದ ವಾಕಿಂಗ್‌ ಮಾಡಲೂ ನೆಮ್ಮದಿಯಾಗಿ ಹೊರಗೆ ಬರುವಂತಿಲ್ಲ. ನಾನು ಸಾಕಷ್ಟು ವಿಶ್ಲೇಷಣೆ ಮಾಡಿಬಿಟ್ಟಿದ್ದೇನೆ. ಸದ್ಯಕ್ಕೆ ಇಲ್ಲಿಗೆ ನಿಲ್ಲಿಸ್ತೀನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT