‘ಲೋಕ’ ಸಮರಕ್ಕೆ ಮಿನಿ ಸಮರದ ರಂಗ ತಾಲೀಮು

7
ಹಿಂದಿ ಭಾಷಿಕ ರಾಜ್ಯಗಳಲ್ಲಿ ಗೆದ್ದವರಿಗೆ 2019ರ ಲೋಕಸಭಾ ಚುನಾವಣೆ ಸ್ವಲ್ಪ ಸಲೀಸು

‘ಲೋಕ’ ಸಮರಕ್ಕೆ ಮಿನಿ ಸಮರದ ರಂಗ ತಾಲೀಮು

Published:
Updated:

ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಗಾಗಿ ಚುನಾವಣಾ ಆಯೋಗ ನಡೆಸಿದ ಮಾಧ್ಯಮಗೋಷ್ಠಿಯೇ ವಿವಾದಕ್ಕೆ ಕಾರಣವಾಗಿದೆ.

ಶನಿವಾರ ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿದ್ದ ಮಾಧ್ಯಮಗೋಷ್ಠಿಯನ್ನು ರಾಜಸ್ಥಾನದಲ್ಲಿ ಪ್ರಧಾನಿಯ ಭಾಷಣಕ್ಕೆ ತೊಡಕಾಗಬಾರದು ಎಂಬ ಕಾರಣಕ್ಕೆ ಮೂರು ಗಂಟೆಗೆ ಮುಂದೂಡಲಾಯಿತು ಎಂದು ಕಾಂಗ್ರೆಸ್‌ ಆರೋಪಿಸಿದೆ. 2019ರ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳ ಮೊದಲು ನಡೆಯಲಿ ರುವ ವಿಧಾನಸಭಾ ಚುನಾವಣೆ ಎಷ್ಟು ಜಿದ್ದಾಜಿದ್ದಿನಿಂದ ಕೂಡಿರಲಿದೆ ಎಂಬುದಕ್ಕೆ ಈ ವಿವಾದ ಸುಳಿವು ಕೊಟ್ಟಿದೆ. 


ಶಿವರಾಜ್‌ ಸಿಂಗ್‌ ಚೌಹಾಣ್

ಚುನಾವಣೆ ಘೋಷಣೆ ಆಗಿರುವ ಮಧ್ಯಪ್ರದೇಶ ಮತ್ತು ಛತ್ತೀಸಗಡದಲ್ಲಿ ಸತತ ಮೂರು ಅವಧಿಯಿಂದ ಬಿಜೆಪಿ ಅಧಿಕಾರದಲ್ಲಿದೆ. ಹತ್ತಿರ ಹತ್ತಿರ ಎರಡು ದಶಕಗಳಿಂದ ರಾಜಸ್ಥಾನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪರ್ಯಾಯವಾಗಿ ಅಧಿಕಾರಕ್ಕೆ ಬರುತ್ತಿವೆ.  

ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಕಾಂಗ್ರೆಸ್‌ ಮತ್ತು ಮಿಜೊ ನ್ಯಾಷನಲ್‌ ಫ್ರಂಟ್‌ ನಡುವೆ ನೇರ ಹಣಾಹಣಿ ಇದೆ. ತೆಲಂಗಾಣದಲ್ಲಿ ಕೆ. ಚಂದ್ರಶೇಖರ ರಾವ್‌ ಅವರ ತೆಲಂಗಾಣ ರಾಷ್ಟ್ರ ಸಮಿತಿಗೆ (ಟಿಆರ್‌ಎಸ್‌) ಸದ್ಯದ ಮಟ್ಟಿಗೆ ದೊಡ್ಡ ಸವಾಲು ಕಾಣಿಸುತ್ತಿಲ್ಲ. 

ಹಿಂದಿ ಭಾಷಿಕ ರಾಜ್ಯಗಳಾದ ಮಧ್ಯಪ್ರದೇಶ, ಛತ್ತೀಸಗಡ ಮತ್ತು ರಾಜಸ್ಥಾನದ ಫಲಿತಾಂಶ 2019ರ ಲೋಕಸಭಾ ಚುನಾವಣೆ ಮೇಲೆ ಸ್ಪಷ್ಟವಾದ ಪರಿಣಾಮ ಬೀರಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಭಾರಿ ಮೇಲುಗೈ ದೊರೆತಿತ್ತು. 

ಹಾಗಾಗಿ, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳೆರಡಕ್ಕೂ ಈ ಮೂರು ರಾಜ್ಯಗಳಲ್ಲಿ ಗೆಲ್ಲುವುದು ಬಹಳ ಮುಖ್ಯ. ಕಳೆದ ಒಂದು ವರ್ಷದಲ್ಲಿ ನಡೆದ ಲೋಕಸಭಾ ಉಪ ಚುನಾವಣೆಗಳಲ್ಲಿ ಬಿಜೆಪಿ ಸೋತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ತವರು ರಾಜ್ಯ ಗುಜರಾತ್‌ ವಿಧಾನಸಭಾ ಚುನಾವಣೆ ಗೆಲ್ಲುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದರೂ ಆ ಗೆಲುವು ಬಹಳ ಪ್ರಯಾಸದ್ದಾಗಿತ್ತು. ಕರ್ನಾಟಕದಲ್ಲಿಯೂ ಬಿಜೆಪಿಗೆ ಅಧಿಕಾರಕ್ಕೆ ಏರುವುದು ಸಾಧ್ಯವಾಗಿಲ್ಲ. ಹಾಗಾಗಿ ಈಗ ಚುನಾವಣೆ ಘೋಷಣೆಯಾಗಿರುವ ಹಿಂದಿ ಭಾಷಿಕ ರಾಜ್ಯಗಳಲ್ಲಿ ಗೆಲ್ಲುವುದು ಬಿಜೆಪಿಗೆ ಅನಿವಾರ್ಯವಾಗಿದೆ. 

2014ರ ಲೋಕಸಭಾ ಚುನಾವಣೆಯಲ್ಲಿ ಕೇವಲ 44 ಕ್ಷೇತ್ರಗಳಲ್ಲಿ ಮಾತ್ರ ಗೆದ್ದ ಕಾಂಗ್ರೆಸ್‌ ಆಘಾತಕ್ಕೆ ಒಳಗಾಗಿತ್ತು. ಕಳೆದ ಲೋಕಸಭಾ ಚುನಾವಣೆ ಬಳಿಕ ಪಂಜಾಬ್‌ ಬಿಟ್ಟರೆ ಬೇರೆ ಯಾವುದೇ ರಾಜ್ಯದಲ್ಲಿಯೂ ಸ್ವಂತ ಬಲದಿಂದ ಸರ್ಕಾರ ರಚಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಹಿಂದಿ ಭಾಷಿಕ ರಾಜ್ಯಗಳಲ್ಲಿ ಮತ್ತೆ ಸೋಲಾದರೆ 2019ರ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‌ನ ವಿಧಿ ನಿರ್ಧಾರ ಆದಂತೆಯೇ. 

ಮಾಯಾವತಿ ಅವರ ಬಿಎಸ್‌ಪಿ ಮತ್ತು ಅಖಿಲೇಶ್‌ ಯಾದವ್‌ ಅವರ ಎಸ್‌ಪಿ ಈ ಮೂರೂ ರಾಜ್ಯಗಳಲ್ಲಿ ಪ್ರತ್ಯೇಕವಾಗಿ ಚುನಾವಣೆಗೆ ಹೋಗುವುದಾಗಿ ಹೇಳಿರುವುದು ಕಾಂಗ್ರೆಸ್‌ನ ಸಂಕಷ್ಟವನ್ನು ಹೆಚ್ಚಿಸಿದೆ. 

ಕಾಂಗ್ರೆಸ್‌ಗೆ ಹೆಚ್ಚಿನ ಸಮಸ್ಯೆ ಇರುವುದು ಛತ್ತೀಸಗಡದಲ್ಲಿ. ಕಳೆದ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಣ ಮತಗಳ ಅಂತರ ಕೇವಲ ಶೇ 0.75. ಮಾಜಿ ಮುಖ್ಯಮಂತ್ರಿ ಅಜಿತ್‌ ಜೋಗಿ ಅವರ ಜನತಾ ಕಾಂಗ್ರೆಸ್‌ ಜತೆಗೆ ಬಿಎಸ್‌ಪಿ ಮೈತ್ರಿ ಮಾಡಿಕೊಂಡಿದೆ. ಮೂರು ಅವಧಿಯ ಮುಖ್ಯಮಂತ್ರಿ ಬಿಜೆಪಿಯ ರಮಣ್‌ ಸಿಂಗ್‌ ಅವರಿಗೆ ಆಡಳಿತ ವಿರೋಧಿ ಅಲೆ ಮೆಟ್ಟಿ ನಿಲ್ಲಲು ಈ ಮೈತ್ರಿಯೇ ನೆರವಾಗಬಹುದು. ಇದೇ ಮೊದಲ ಬಾರಿಗೆ ಛತ್ತೀಸಗಡದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. 


ವಸುಂಧರಾ ರಾಜೇ

65ರಲ್ಲಿ 61 ಕ್ಷೇತ್ರ ಗೆದ್ದ ‘ಕಮಲ’ ಪಾಳಯ

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದ 29 ಕ್ಷೇತ್ರಗಳ ಪೈಕಿ 26, ರಾಜಸ್ಥಾನದ ಎಲ್ಲ 25 ಮತ್ತು ಛತ್ತೀಸಗಡದ 11 ಕ್ಷೇತ್ರಗಳ ಪೈಕಿ 10 ಬಿಜೆಪಿ ವಶವಾಗಿತ್ತು. ಇಲ್ಲಿನ ಒಟ್ಟು 65 ಸ್ಥಾನಗಳಲ್ಲಿ 61 ಕ್ಷೇತ್ರಗಳು ಬಿಜೆಪಿಯ ಬಗಲಿಗೆ ಬಿದ್ದಿದ್ದವು. 

ಕೃಷಿ ಸಂಕಷ್ಟವೇ ಬಿಜೆಪಿಗೆ ಕುತ್ತು?

ಎಲ್ಲ ಮೂರು ಹಿಂದಿ ಭಾಷಿಕ ರಾಜ್ಯಗಳಲ್ಲಿ ಕೃಷಿ ಸಂಕಷ್ಟವೇ ಬಿಜೆಪಿ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ. ಕಳೆದ ವರ್ಷದ ಜೂನ್‌ನಲ್ಲಿ ಮಧ್ಯಪ್ರದೇಶದ ಮಂದ್‌ಸೌರ್‌ನಲ್ಲಿ ರೈತರು ಬೃಹತ್‌ ಪ್ರತಿಭಟನೆ ನಡೆಸಿದ್ದರು. ರೈತರ ಹೋರಾಟದ ಕೇಂದ್ರಬಿಂದುವಾಗಿ ಈ ಸ್ಥಳ ಗುರುತಿಸಿಕೊಂಡಿತ್ತು. ಇಲ್ಲಿ ನಡೆದ ಪೊಲೀಸ್‌ ಗೋಲಿಬಾರ್‌ಗೆ ಆರು ರೈತರು ಬಲಿಯಾಗಿದ್ದರು. 

‘ಕೈ’ಗೆ ನಾಯಕತ್ವದ ಭಾರ

ಮಧ್ಯಪ್ರದೇಶದಲ್ಲಿ 2000ನೇ ಇಸವಿಯ ಬಳಿಕ ಕಾಂಗ್ರೆಸ್‌ ಅಧಿಕಾರ ಪಡೆದೇ ಇಲ್ಲ. ಬಿಜೆಪಿಯ ಶಿವರಾಜ್‌ ಸಿಂಗ್‌ ಚೌಹಾಣ್‌ ಇಲ್ಲಿ ಜನಪ್ರಿಯ ನಾಯಕ. ಕಾಂಗ್ರೆಸ್‌ನಲ್ಲಿ ದಿಗ್ವಿಜಯ್‌ ಸಿಂಗ್‌, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕಮಲ್‌ನಾಥ್‌ ಪ್ರಭಾವಿ ನಾಯಕರು. ಪರಮೋಚ್ಚ ನಾಯಕ ಯಾರು ಎಂಬ ವಿಚಾರದಲ್ಲಿ ಈ ಮೂರು ಮಂದಿಯ ನಡುವೆ ಜಿದ್ದಾಜಿದ್ದಿ ಇದೆ.

ಛತ್ತೀಸಗಡ ಕಾಂಗ್ರೆಸ್‌: ಅಂಬಿಗನಿಲ್ಲದ ನಾವೆ

ಛತ್ತೀಸಗಡದಲ್ಲಿ 2003ರಿಂದ ಕಾಂಗ್ರೆಸ್‌ ಅಧಿಕಾರದಿಂದ ದೂರವೇ ಇದೆ. ಕೆಲವು ವರ್ಷಗಳ ಹಿಂದೆ ನಕ್ಸಲರು ನಡೆಸಿದ ಹೊಂಚು ದಾಳಿಗೆ ಕಾಂಗ್ರೆಸ್‌ನ ಹಲವು ಹಿರಿಯ ಮುಖಂಡರು ಬಲಿಯಾಗಿದ್ದರು. ಪ್ರಭಾವಿ ನಾಯಕ ಅಜಿತ್‌ ಜೋಗಿ ಅವರು ಕಾಂಗ್ರೆಸ್‌ ತೊರೆದು ತಮ್ಮದೇ ಆದ ಜನತಾ ಕಾಂಗ್ರೆಸ್‌ ರಚಿಸಿಕೊಂಡಿದ್ದಾರೆ. 2013ರ ಚುನಾವಣೆಯಲ್ಲಿ ಬಿಜೆಪಿ 49 ಮತ್ತು ಕಾಂಗ್ರೆಸ್‌ 39 ಕ್ಷೇತ್ರಗಳಲ್ಲಿ ಗೆದ್ದಿವೆ. ಇಲ್ಲಿನ ಒಟ್ಟು ಕ್ಷೇತ್ರಗಳು 90.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !