ಅಳಗಿರಿಗೆ ತಡೆ; ಸ್ಟಾಲಿನ್‌ಗೆ ಮಣೆ

7
ಡಿಎಂಕೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯ

ಅಳಗಿರಿಗೆ ತಡೆ; ಸ್ಟಾಲಿನ್‌ಗೆ ಮಣೆ

Published:
Updated:

ಚೆನ್ನೈ: ಡಿಎಂಕೆ ಉಚ್ಚಾಟಿತ ನಾಯಕ ಎಂ.ಕೆ.ಅಳಗಿರಿಯವರನ್ನು ಪಕ್ಷಕ್ಕೆ ಪುನಃ ಸೇರಿಸಿಕೊಳ್ಳದಿರಲು ಪಕ್ಷದ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ. ಅಲ್ಲದೆ, ಪಕ್ಷದ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್‌ ಅವರನ್ನೇ ಮುಂದಿನ ಅಧ್ಯಕ್ಷರಾಗಿ ನೇಮಿಸಲು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

ವಿಧಾನಸಭೆಯ ವಿರೋಧಪಕ್ಷದ ನಾಯಕ ಮತ್ತು ಪಕ್ಷದ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ಪಕ್ಷದ ಮುಖ್ಯ ಕಚೇರಿಯಲ್ಲಿ ತುರ್ತು ಕಾರ್ಯಕಾರಿ ಸಮಿತಿ ಸಭೆ ನಡೆಯಿತು.

ಎಂ.ಕರುಣಾನಿಧಿ ಅವರಿಗೆ ಸಂತಾಪ ಸೂಚನೆಯ ನಿರ್ಣಯ ಅಂಗೀಕರಿಸಲಾಯಿತು. ಪಕ್ಷದ ಮುಖಂಡರು ಎರಡು ನಿಮಿಷ ಮೌನ ಆಚರಿಸಿ, ಅಗಲಿದ ತಮ್ಮ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಕೇಂದ್ರದ ಮಾಜಿ ಸಚಿವ ಟಿ.ಆರ್.ಬಾಲು, ದೊರೈಮುರಗನ್ ಸೇರಿ ಹಲವು ಮುಖಂಡರು ‘ಸ್ಟಾಲಿನ್ ಅವರೇ ಪಕ್ಷದ ನೇತೃತ್ವ ವಹಿಸಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಅಳಗಿರಿಯವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಹುದಾಗಿದ್ದರೆ ಕುರುಣಾನಿಧಿಯವರೇ ಸೇರಿಸಿಕೊಳ್ಳುತ್ತಿದ್ದರು. ಈಗ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಅದು ಕರುಣಾನಿಧಿಯವರ ನಿರ್ಧಾರ ಮತ್ತು ಆಶಯಕ್ಕೆ ವಿರುದ್ಧವಾದ ತೀರ್ಮಾನವಾಗುತ್ತದೆ. ಯಾವುದೇ ಕಾರಣಕ್ಕೂ ಅಳಗಿರಿಗೆ ಪಕ್ಷದ ಬಾಗಿಲು ತೆರೆಯದಿರುವ ನಿರ್ಧಾರ ತೆಗೆದುಕೊಳ್ಳಲಾಯಿತು’ ಎಂದು ಮೂಲಗಳು ಹೇಳಿವೆ.

‘ಅಳಗಿರಿಯವರನ್ನು ಪಕ್ಷದಿಂದ ದೂರವಿಡುವ ತಮ್ಮ ನಿರ್ಧಾರವನ್ನು ಕರುಣಾನಿಧಿಯವರು ಬದುಕಿರುವವರೆಗೂ ಬದಲಾಯಿಸಿಕೊಳ್ಳಲಿಲ್ಲ. ಹಾಗಾಗಿ ಅಳಗಿರಿ ಬಗ್ಗೆ ಯಾರೂ ಪ್ರಸ್ತಾಪಿಸುವ ಅಗತ್ಯವಿಲ್ಲ’ ಎಂದು ಪಕ್ಷದ ಪ್ರಧಾನಕಾರ್ಯದರ್ಶಿ ಕೆ.ಅನ್ಬಳಗನ್‌ ಹೇಳಿದರು.

ಉತ್ತರಾಧಿಕಾರಕ್ಕಾಗಿ ಕಿರಿಯ ಸಹೋದರ ಎಂ.ಕೆ.ಸ್ಟಾಲಿನ್ ವಿರುದ್ಧ ಬಹಿರಂಗ ಸಮರ ಸಾರಿರುವ ಎಂ.ಕೆ.ಅಳಗಿರಿ ಸೋಮವಾರವಷ್ಟೇ ಕುಟುಂಬ ಸಮೇತ ಮರೀನಾ ಬೀಚ್‌ಗೆ ತೆರಳಿ ತಮ್ಮ ತಂದೆ ಕರುಣಾನಿಧಿಯವರ ಸಮಾಧಿಗೆ ಪೂಜೆ ಸಲ್ಲಿಸಿದ್ದರು.

‘ಕರುಣಾನಿಧಿಯವರ ನಿಜವಾದ ಮತ್ತು ನಿಷ್ಠಾವಂತ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ನನ್ನ ಜತೆಗೆ ಇದ್ದಾರೆ. ಅವರೆಲ್ಲರೂ ನನ್ನನ್ನು ಬೆಂಬಲಿಸಲಿದ್ದಾರೆ. ಅದನ್ನು ಕಾಲವೇ ಸಾಬೀತುಪಡಿಸಲಿದೆ. ನನ್ನನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳದಿದ್ದರೆ ಡಿಎಂಕೆ ತನ್ನ ಗೋರಿ ತಾನೇ ತೋಡಿಕೊಳ್ಳುತ್ತದೆ’ ಎಂದು ಎಚ್ಚರಿಕೆ ಕೊಟ್ಟಿದ್ದರು.

‘ಪಕ್ಷದ ಹುದ್ದೆಗಳನ್ನು ಮಾರಾಟ ಮಾಡುತ್ತಿದ್ದಾರೆ. ತಂದೆಯವರ ಆತ್ಮ ಖಂಡಿತಾ ಇವರನ್ನು ಶಿಕ್ಷಿಸಲಿದೆ. ಪಕ್ಷದ ಹಲವು ಮುಖಂಡರು ನಟ ರಜನಿಕಾಂತ್‌ ಸಂಪರ್ಕದಲ್ಲಿದ್ದು, ಅವರು ಹೊಸ ಪಕ್ಷ ಘೋಷಿಸುವುದನ್ನು ಎದುರು ನೋಡುತ್ತಿದ್ದಾರೆ’ ಎಂದು ಸಹೋದರನ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದರು.

ನಾನು ಸಾಯುತ್ತಿದ್ದೆ: ಸ್ಟಾಲಿನ್‌ ಭಾವೋದ್ವೇಗದ ಮಾತು

‘ತಲೈವಾ (ಕರುಣಾನಿಧಿ) ಅಂತ್ಯ ಸಂಸ್ಕಾರಕ್ಕೆ ಮರೀನಾ ಬೀಚ್‌ನಲ್ಲಿ ಅವಕಾಶ ಸಿಗದಿದ್ದರೆ, ನನ್ನ ಸಮಾಧಿಯನ್ನೂ ಮಾಡಬೇಕಾಗುತ್ತಿತ್ತು’ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್‌ ಭಾವೋದ್ವೇಗದ ಮಾತು ಆಡಿದ್ದಾರೆ.

ಡಿಎಂಕೆ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿಯವರ ನಿಧನಾನಂತರ ಮಂಗಳವಾರ ನಡೆದ ಪಕ್ಷದ ಕಾರ್ಯಕಾರಿ ಸಮಿತಿಯ ಮೊದಲ ಸಭೆಯಲ್ಲಿ ಅವರು ಮಾತನಾಡಿದರು.

‘ಇಲ್ಲಿ ಸೇರಿರುವ ನೀವೆಲ್ಲರೂ ನನ್ನ ತಂದೆ ಕಾಯಿಲೆ ಬಿದ್ದಾಗಿನಿಂದಲೂ, ನಾನು ಪಕ್ಷದ ಕಾರ್ಯಾಧ್ಯಕ್ಷನಾದಾಗಿನಿಂದಲೂ ನಿಮ್ಮ ಆಶೀರ್ವಾದ ಮತ್ತು ಬೆಂಬಲವನ್ನು ತಂದೆಯವರಿಗೆ ಕೊಟ್ಟಿದ್ದೀರಿ’ ಎಂದು ಗದ್ಗದಿತ ಧ್ವನಿಯಲ್ಲಿ ಹೇಳಿದರು.

‘ಪಕ್ಷ ಉತ್ತಮ ನಾಯಕನನ್ನು ಕಳೆದುಕೊಂಡಿದ್ದರೆ, ನಾನು ನಾಯಕ ಮತ್ತು ಅಪ್ಪ ಇಬ್ಬರನ್ನೂ ಕಳೆದುಕೊಂಡಿದ್ದೇನೆ. ತಲೈವಾ ತಮ್ಮ ಉಸಿರಿನ ಕೊನೆ ಹಂತದಲ್ಲಿದ್ದಾಗ, ಅವರ ಇಚ್ಛೆಯಂತೆ ಮರೀನಾ ಬೀಚ್‌ನಲ್ಲಿ ಕೆ.ಅಣ್ಣಾ ದೊರೈ ಸಮಾಧಿ ಪಕ್ಕದಲ್ಲೇ ಸಮಾಧಿ ಮಾಡಲು, ಅವಕಾಶ ನೀಡುವಂತೆ ಸರ್ಕಾರವನ್ನು ಕೇಳಿಕೊಂಡೆವು. ಮುಖ್ಯಮಂತ್ರಿಯವರ ಕೈ ಹಿಡಿದೂ ಬೇಡಿಕೊಂಡೆ. ಆದರೆ, ಅವರು ಕಾನೂನಿನಲ್ಲಿ ಅವಕಾಶವಿಲ್ಲವೆಂದು ನಿರಾಕರಿಸಿದರು. ರಾತ್ರಿಯೇ ಕೋರ್ಟ್‌ ಮೊರೆ ಹೋಗಿ, ಮರು ದಿನ ಅದರಲ್ಲಿ ಗೆಲುವು ಪಡೆದೆವು. ಕೋರ್ಟ್‌ನಲ್ಲಿ ಅವಕಾಶ ಸಿಗದಿದ್ದರೆ ನಾನೂ ಕೂಡ ಸತ್ತುಹೋಗುತ್ತಿದ್ದೆ’ ಎಂದು ಹೇಳಿದರು.

‘ಇಡೀ ಬದುಕನ್ನೇ ಹೋರಾಟಕ್ಕೆ ಅರ್ಪಿಸಿಕೊಂಡಿದ್ದ ಡಿಎಂಕೆ ನಾಯಕ ನಿಧನದ ನಂತರ ಮರೀನಾ ಬೀಚ್‌ನಲ್ಲಿ ಸಮಾಧಿ ಜಾಗಕ್ಕೂ ಹೋರಾಟ ಮಾಡಬೇಕಾಯಿತು. ನಮ್ಮ ನಾಯಕನ ಗುರಿಗಳನ್ನು ಸಾಧಿಸಲು ನಾವೆಲ್ಲರೂ ಮುಂದೆಯೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು. ಪಕ್ಷವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು’ ಎಂದು ಕರೆಕೊಟ್ಟರು.

ಕರುಣಾನಿಧಿಯವರ ಉತ್ತರಾಧಿಕಾರಿಯಾಗಿ ಪಕ್ಷದ ಅಧ್ಯಕ್ಷ ಗಾದಿ ಹಿಡಿಯಲು ಉಚ್ಚಾಟಿತ ನಾಯಕ ಹಾಗೂ ತನ್ನ ಅಣ್ಣ ಎಂ.ಕೆ.ಅಳಗಿರಿಯಿಂದ ಯಾವುದೇ ಸವಾಲು ಎದುರಾಗಬಾರದೆಂಬ ಜಾಣ್ಮೆಯ ನಡೆ ಸ್ಟಾಲಿನ್‌ ಅವರ ಈ ಹೇಳಿಕೆಯಲ್ಲಿದೆ ಎನ್ನುವ ಮಾತು ತಮಿಳುನಾಡು ರಾಜಕೀಯ ವಿಶ್ಲೇಷಕರ ವಲಯದಲ್ಲಿ ಕೇಳಿಬರುತ್ತಿದೆ.

 ಕರುಣಾನಿಧಿಗಿಂತ ಪಳನಿಸ್ವಾಮಿ ದೊಡ್ಡವರೇ: ರಜನಿಕಾಂತ್‌ ಪ್ರಶ್ನೆ

ದ್ರಾವಿಡ ಮುನ್ನೇತ್ರ ಕಳಗಂ ನಾಯಕ ಎಂ.ಕರುಣಾನಿಧಿಗಿಂತ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ದೊಡ್ಡವರೇ ಎಂದು ನಟ ಹಾಗೂ ರಾಜಕಾರಣಿ ರಜನಿಕಾಂತ್‌ ಪ್ರಶ್ನಿಸಿದ್ದಾರೆ.

ಕರುಣಾನಿಧಿಗಾಗಿ ದಕ್ಷಿಣ ಭಾರತದ ಕಲಾವಿದರ ಸಂಘ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರುಣಾನಿಧಿಯವರ ಅಂತಿಮ ಸಂಸ್ಕಾರದ ವೇಳೆ ಒಂದೇ ಒಂದು ಕೊರತೆ ಎದ್ದು ಕಾಣುತ್ತಿತ್ತು. ಅದು, ತಮಿಳುನಾಡಿನ ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಇಡೀ ಸಂಪುಟದ ಗೈರುಹಾಜರಿ. ಇದರಿಂದ ಜನತೆ ಏನೆಂದು ಆಲೋಚಿಸಬೇಕು, ನೀವೇನು ಎಂಜಿಆರ್ ಅಥವಾ ಜಯಲಲಿತಾನಾ? ಆ ಇಬ್ಬರು ನಾಯಕರಾದರೂ ಕರುಣಾನಿಧಿಯವರ ವಿರೋಧಿಗಗಳಾಗಿದ್ದರು ಎಂದು ರಜನಿಕಾಂತ್‌, ಮುಖ್ಯಮಂತ್ರಿ ವಿರುದ್ಧ ಕಿಡಿಕಾರಿದ್ದಾರೆ.

‘ಮರೀನಾ ಬೀಚ್‌ನಲ್ಲಿ ಅಂತ್ಯ ಸಂಸ್ಕಾರಕ್ಕೆ ಸ್ಥಳ ನೀಡಲು ಪರ ಹಾಗೂ ವಿರೋಧದ ಕೂಗು ಎದ್ದಿತು. ಮದ್ರಾಸ್ ಹೈಕೋರ್ಟ್ ನೀಡಿದ ಆದೇಶವನ್ನು ಸರ್ಕಾರ ಒಂದು ವೇಳೆ ಪ್ರಶ್ನಿಸಿದ್ದರೆ, ಸರ್ಕಾರದ ವಿರುದ್ಧ ನಾನು ಖಂಡಿತಾ ಪ್ರತಿಭಟಿಸುತ್ತಿದ್ದೆ’ ರಜನಿ ಹೇಳಿದ್ದಾರೆ.

ರಾಜಕೀಯ ಅಪ್ರಬುದ್ಧತೆ:

ರಜನಿಕಾಂತ್‌ ಟೀಕೆಗೆ ಪ್ರತಿಕ್ರಿಯಿಸಿರುವ ಎಐಡಿಎಂಕೆ ಸರ್ಕಾರದ ಸಚಿವ ಡಿ.ಜಯಕುಮಾರ್‌, ‘ಅವರ ಹೇಳಿಕೆ ರಾಜಕೀಯ ಅಪ್ರಬುದ್ಧತೆಯನ್ನು ತೋರಿಸುತ್ತಿದೆ. ಅವರಿಗೆ ತಮಿಳುನಾಡಿನ ರಾಜಕೀಯ ಇತಿಹಾಸ ಗೊತ್ತಿಲ್ಲ. ಕಲೈನರ್‌ ಸಾವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ಪ್ರತ್ಯುತ್ತರ ನೀಡಿದ್ದಾರೆ.

**

ನಮ್ಮ ಸೈನ್ಯದ ಕಮಾಂಡರ್ ನಮ್ಮನ್ನು ಅಗಲಿದ್ದಾರೆ. ಮುಂದಿನ ಕಮಾಂಡರ್ ಯಾರೆಂದು ಯಾರೂ ಹೇಳುತ್ತಿಲ್ಲ. ಆದರೆ ಆ ಅರ್ಹತೆ ಸ್ಟಾಲಿನ್‌ಗೆ ಇದೆ.

-ಟಿ.ಆರ್.ಬಾಲು,  ಕೇಂದ್ರದ ಮಾಜಿ ಸಚಿವ

**

ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಹಾಗೂ ಅವರ ಇಡೀ ಸಂಪುಟ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿಯವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಬೇಕಿತ್ತು.

-ರಜನಿಕಾಂತ್‌, ನಟ ಮತ್ತು ರಾಜಕಾರಣಿ

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !