ಪಂಜಾಬ್‌: ತಾರೆಯರಿಗೆ ಬಿಜೆಪಿ ಮೊರೆ

ಗುರುವಾರ , ಏಪ್ರಿಲ್ 25, 2019
29 °C

ಪಂಜಾಬ್‌: ತಾರೆಯರಿಗೆ ಬಿಜೆಪಿ ಮೊರೆ

Published:
Updated:

ಚಂಡಿಗಡ: ಪಂಜಾಬ್‌ನಿಂದ ಸಿನಿಮಾ ಹಾಗೂ ಕ್ರಿಕೆಟ್‌ ತಾರೆಯರನ್ನು ಕಣಕ್ಕೆ ಇಳಿಸುವ ಬಗ್ಗೆ ಬಿಜೆಪಿ ವಿಶೇಷ ಒಲವು ವ್ಯಕ್ತಪಡಿಸಲು ಆರಂಭಿಸಿದೆ.

ಪಕ್ಷದ ಸಭೆಗಳಲ್ಲಿ ಪೂನಂ ಧಿಲ್ಲಾನ್‌, ಅಕ್ಷಯ್‌ ಖನ್ನಾ, ಹರ್‌ಭಜನ್‌ ಸಿಂಗ್‌, ಹನ್ಸ್‌ರಾಜ್‌ ಹನ್ಸ್‌, ಸನ್ನಿಡಿಯೊಲ್‌ ಮುಂತಾದವರ ಹೆಸರುಗಳು ಆಗಾಗ ಕೇಳಿಬರುತ್ತಿವೆ.

ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ಅಲ್ಲ, ಇವರನ್ನೇ ಪಕ್ಷದ ಅಭ್ಯರ್ಥಿಗಳಾಗಿ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.

ಪಂಜಾಬ್‌ನಲ್ಲಿ ಬಿಜೆಪಿ– ಶಿರೋಮಣಿ ಅಕಾಲಿ ದಳದ ಮೈತ್ರಿ ಮುಂದುವರಿದಿದೆ. ಪಕ್ಷದಲ್ಲಿ ಟಿಕೆಟ್‌ ಆಕಾಂಕ್ಷಿಗಳಿಗೆ ಕೊರತೆಯೇನೂ ಇಲ್ಲ. ಆದರೂ ತಾರೆಗಳ ಹೆಸರು ಮುನ್ನೆಲೆಗೆ ಬರುತ್ತಲೇ ಇದೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಶಿವೈತ್‌ ಮಲಿಕ್‌ ಅವರು ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರನ್ನು ಸದ್ಯದಲ್ಲೇ ದೆಹಲಿಯಲ್ಲಿ ಭೇಟಿ ಮಾಡಲಿದ್ದಾರೆ. ರಾಜಕೀಯ ಹಿನ್ನೆಲೆಯವರಿಗೆ ಬಿಜೆಪಿ ಮಣೆ ಹಾಕುವುದೇ ಅಥವಾ ತಾರೆಗಳ ಜನಪ್ರಿಯತೆಯ ಲಾಭ ಪಡೆಯಲು ಮುಂದಾಗುವುದೇ ಎಂಬುದು ಅಲ್ಲಿ ತೀರ್ಮಾನವಾಗಲಿದೆ.

ಸೀಟು ಹಂಚಿಕೆ ಒಪ್ಪಂದದ ಪ್ರಕಾರ ಪಂಜಾಬ್‌ನ ಒಟ್ಟು 13 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪ ಅಮೃತಸರ, ಗುರುದಾಸ್‌ಪುರ ಹಾಗೂ ಹೋಷಿಯಾರ್‌ಪುರ ಕ್ಷೇತ್ರಗಳಲ್ಲಿ ಮಾತ್ರ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಅಮೃತಸರ ಕ್ಷೇತ್ರಕ್ಕಾಗಿ ಪೂನಂ ಧಿಲ್ಲಾನ್‌, ಸನ್ನಿಡಿಯೊಲ್‌ ಹಾಗೂ ಹರ್‌ಭಜನ್‌ ಅವರ ಹೆಸರು ಪ್ರಸ್ತಾಪವಾಗುತ್ತಿದೆ ಎಂದು ಹೆಳಲಾಗಿದೆ.

ಗುರುದಾಸ್‌ಪುರ ಕ್ಷೇತ್ರದಿಂದ ಹಿಂದೆ ವಿನೋದ್‌ ಖನ್ನಾ ಅವರು ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದರು. ಈಗ ಅವರ ಪತ್ನಿಗೆ ಅಥವಾ ಅವರ ಪುತ್ರ, ಚಿತ್ರನಟ ಅಕ್ಷಯ್‌ ಖನ್ನಾಗೆ ಟಿಕೆಟ್‌ ನೀಡಲು ಪಕ್ಷ ಉತ್ಸುಕವಾಗಿದೆ ಎನ್ನಲಾಗಿದೆ.

ಹಿಂದೆ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ಅವರ ಜನಪ್ರಿಯತೆಯನ್ನು ಬಳಸಿಕೊಂಡಿದ್ದ ಬಿಜೆಪಿಯು ಅವರನ್ನು ಅಮೃತಸರ ಕ್ಷೇತ್ರದಿಂದ ಕಣಕ್ಕಿಳಿಸಿ ಆ ಕ್ಷೇತ್ರವನ್ನು ತನ್ನದಾಗಿಸಿಕೊಂಡಿತ್ತು. ಸಿಧು ಈಗ ಕಾಂಗ್ರೆಸ್‌ ಪಕ್ಷದಲ್ಲಿದ್ದಾರೆ. ಆ ಕ್ಷೇತ್ರವನ್ನು ಬಿಜೆಪಿಯಿಂದ ಕಸಿದುಕೊಳ್ಳುವ ಹುಮ್ಮಸ್ಸಿನಲ್ಲಿ ಕಾಂಗ್ರೆಸ್‌ ಇದೆ. ಆದರೆ ಬೇರೆ ಯಾರಾದರೂ ವರ್ಚಸ್ವೀ ತಾರೆಯನ್ನು ಕಣಕ್ಕಿಳಿಸಿ ಅಮೃತಸರ ಕ್ಷೇತ್ರವನ್ನು ಮರಳಿ ಪಡೆಯಲು ಬಿಜೆಪಿ ಯೋಜನೆ ರೂಪಿಸುತ್ತಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !